ಟೆಸ್ಟ್‌ ನಿವೃತ್ತಿಗೆ ಕೊಹ್ಲಿ ನಿರ್ಧಾರ! ಬಿಸಿಸಿಐಗೆ ಮಾಹಿತಿ ನೀಡಿದ ತಾರಾ ಕ್ರಿಕೆಟಿಗ

Follow Us

ಸಾರಾಂಶ

ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಮತ್ತೋರ್ವ ತಾರಾ ಆಟಗಾರ ವಿರಾಟ್‌ ಕೊಹ್ಲಿ ಕೂಡಾ ಟೆಸ್ಟ್‌ ಮಾದರಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

ನವದೆಹಲಿ: ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಮತ್ತೋರ್ವ ತಾರಾ ಆಟಗಾರ ವಿರಾಟ್‌ ಕೊಹ್ಲಿ ಕೂಡಾ ಟೆಸ್ಟ್‌ ಮಾದರಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಇದರ ಬಗ್ಗೆ ಅವರು ಈಗಾಗಲೇ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಮಾಹಿತಿ ನೀಡಿದ್ದಾರೆ ಎಂದು ಪ್ರತಿಷ್ಠಿತ ಮಾಧ್ಯಮಗಳಲ್ಲಿ ವರದಿಯಾಗಿದೆ.

‘ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ಕೊಹ್ಲಿ ನಿರ್ಧರಿಸಿದ್ದಾರೆ ಮತ್ತು ಅದರ ಬಗ್ಗೆ ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ. ಮುಂದಿನ ತಿಂಗಳು ಮಹತ್ವದ ಇಂಗ್ಲೆಂಡ್‌ ಸರಣಿ ನಡೆಯಲಿರುವ ಕಾರಣ ತಮ್ಮ ನಿರ್ಧಾರ ಪುನರ್‌ಪರಿಶೀಲಿಸುವಂತೆ ಕೊಹ್ಲಿಗೆ ಬಿಸಿಸಿಐ ಮನವಿ ಮಾಡಿದೆ. ಅದರ ಬಗ್ಗೆ ಕೊಹ್ಲಿ ಇನ್ನೂ ನಿರ್ಧಾರ ತಿಳಿಸಿಲ್ಲ’ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.

ಕಳೆದ ವರ್ಷಾಂತ್ಯದಲ್ಲಿ ಕೊಹ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರ ನಿವೃತ್ತಿ ಬಗ್ಗೆ ವದಂತಿ ಹರಿದಾಡುತ್ತಿದ್ದರೂ, ಇಂಗ್ಲೆಂಡ್‌ ಸರಣಿ ಸೇರಿದಂತೆ ಒಂದೆರಡು ವರ್ಷ ಟೆಸ್ಟ್‌ನಲ್ಲಿ ಮುಂದುವರಿಯಬಹುದು ಎಂದು ವಿಶ್ಲೇಷಿಸಲಾಗುತ್ತಿತ್ತು. ಒಂದು ವೇಳೆ ಕೊಹ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಇಂಗ್ಲೆಂಡ್‌ ಸರಣಿಯಲ್ಲಿ ಭಾರತದ ಬ್ಯಾಟಿಂಗ್‌ ವಿಭಾಗದಲ್ಲಿ ಅನುಭವಿಗಳ ಕೊರತೆ ಎದುರಾಗಲಿದೆ. 36 ವರ್ಷದ ಕೊಹ್ಲಿ ಭಾರತ ಪರ 123 ಟೆಸ್ಟ್‌ ಆಡಿದ್ದು, 46.85ರ ಸರಾಸರಿಯಲ್ಲಿ 9230 ರನ್‌ ಕಲೆಹಾಕಿದ್ದಾರೆ.

ಏಕದಿನ ವಿಶ್ವಕಪ್‌ಗಾಗಿ

ಟೆಸ್ಟ್‌ ನಿವೃತ್ತಿ ನಿರ್ಧಾರ?

ಕಳೆದ ವರ್ಷ ಟಿ20 ವಿಶ್ವಕಪ್‌ ಗೆಲುವಿನ ಬಳಿಕ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಸದ್ಯ ಟೆಸ್ಟ್‌ಗೂ ವಿದಾಯ ಹೇಳಿ 2027ರ ವಿಶ್ವಕಪ್‌ನತ್ತ ಹೆಚ್ಚು ಗಮನ ಹರಿಸಲು ನಿರ್ಧರಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.