ಕೋಲ್ಕತಾ: 2 ಬಾರಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ 17ನೇ ಆವೃತ್ತಿ ಐಪಿಎಲ್‌ನಲ್ಲಿ ಅಧಿಕೃತವಾಗಿ ಪ್ಲೇ-ಆಫ್ ಪ್ರವೇಶಿಸಿದೆ. ಈ ಬಾರಿ ಪ್ಲೇ-ಆಫ್‌ಗೇರಿದ ಮೊದಲ ತಂಡ ಕೋಲ್ಕತಾ. ಶನಿವಾರದ ಮಳೆ ಪೀಡಿತ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ 18 ರನ್ ಗೆಲುವು ಸಾಧಿಸಿದೆ.
ಕೆಕೆಆರ್ 9ನೇ ಜಯದೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡರೆ, ಮುಂಬೈ 9ನೇ ಸೋಲಿನ ಮುಖಭಂಗಕ್ಕೊಳಗಾಯಿತು.ಭಾರಿ ಮಳೆಯಿಂದಾಗಿ ಒಂದೂವರೆ ಗಂಟೆ ತಡವಾಗಿ ಟಾಸ್ ಮಾಡಲಾಯಿತು. 9.15ಕ್ಕೆ ಆರಂಭಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತಾ 16 ಓವರಲ್ಲಿ 7 ವಿಕೆಟ್‌ಗೆ 157 ರನ್ ಗಳಿಸಿತು. ಉತ್ತಮ ಆರಂಭ, ಕೊನೆಯಲ್ಲಿ ಹೋರಾಟದ ಹೊರತಾಗಿಯೂ ಮುಂಬೈ 8 ವಿಕೆಟ್‌ಗೆ 139 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಇಶಾನ್ ಕಿಶನ್ 22 ಎಸೆತಗಳಲ್ಲಿ 40 ರನ್ ಸಿಡಿಸಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರೂ, ಇತರರು ವಿಫಲವಾದರು. ರೋಹಿತ್(19), ಸೂರ್ಯ(11) ವಿಫಲರಾದರು. ಕೊನೆಯಲ್ಲಿ ತಿಲಕ್(17 ಎಸೆತಗಳಲ್ಲಿ 32) ಹೋರಾಟ ಸೋಲಿನ ಅಂತರ ತಗ್ಗಿಸಿತು.
ವೆಂಕಿ ಮಿಂಚು: 10ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ವೆಂಕಟೇಶ್(21 ಎಸೆತಗಳಲ್ಲಿ 42) ಆಸರೆಯಾದರು. ನಿತೀಶ್ ರಾಣಾ 33, ಆ್ಯಂಡ್ರೆ ರಸೆಲ್ 24, ರಿಂಕು ಸಿಂಗ್ 20 ರನ್ ಗಳಿಸಿ ತಂಡವನ್ನು 150ರ ಗಡಿ ದಾಟಿಸಿದರು. ಬೂಮ್ರಾ, ಚಾವ್ಲಾ ತಲಾ 2 ವಿಕೆಟ್ ಕಿತ್ತರು.ಸ್ಕೋರ್: ಕೋಲ್ಕತಾ 16 ಓವರಲ್ಲಿ 157/7 (ವೆಂಕಟೇಶ್ 42, ರಾಣಾ 33, ಚಾವ್ಲಾ 2-28), ಮುಂಬೈ 16 ಓವರಲ್ಲಿ 139/8 (ಇಶಾನ್ 40, ತಿಲಕ್ 32, ವರುಣ್ 2-17) ಪಂದ್ಯಶ್ರೇಷ್ಠ: 08ನೇ ಬಾರಿ: ಕೋಲ್ಕತಾ 8ನೇ ಬಾರಿ ಐಪಿಎಲ್ ಪ್ಲೇ-ಆಫ್ ಪ್ರವೇಶಿಸಿತು. ಕಳೆದೆರಡು ಆವೃತ್ತಿಗಳಲ್ಲಿ 7ನೇ ಸ್ಥಾನ ಪಡೆದಿತ್ತು.
04ನೇ ಬಾರಿ: ಬೂಮ್ರಾ ಆವೃತ್ತಿಯೊಂದರಲ್ಲಿ 20+ ವಿಕೆಟ್ ಕಿತ್ತಿದ್ದು 4ನೇ ಬಾರಿ. ಚಹಲ್ 5 ಆವೃತ್ತಿಗಳಲ್ಲಿ ಈ ಸಾಧನೆ ಮಾಡಿದ್ದಾರೆ.
44ನೇ ಬಾರಿ: ನರೈನ್ 44ನೇ ಬಾರಿ ಟಿ20 ಕ್ರಿಕೆಟ್‌ನಲ್ಲಿ ಸೊನ್ನೆಗೆ ಔಟಾದರು. ಇದು ಯಾವುದೇ ಆಟಗಾರನ ಪೈಕಿ ಗರಿಷ್ಠ.