ಕೋಲ್ಕತಾ: ಸತತ ಸೋಲಿನೊಂದಿಗೆ ಟೂರ್ನಿಗೆ ಕಾಲಿರಿಸಿದ್ದರೂ ಬಳಿಕ ಅಬ್ಬರಿಸಲು ಶುರುವಿಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದು, ಸೋಮವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಡಲಿದೆ. ಕೆಕೆಆರ್ ತಂಡ ತವರಿನಲ್ಲಿ ಸೋಲಿನ ಸರಪಳಿಯನ್ನು ಕಳಚುವ ನಿರೀಕ್ಷೆಯಲ್ಲಿದೆ.
ಡೆಲ್ಲಿ ಮೊದಲ 5 ಪಂದ್ಯದಲ್ಲಿ ಕೇವಲ 1 ಗೆದ್ದಿದ್ದರೂ, ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಜಯಭೇರಿ ಬಾರಿಸಿದೆ. ಆದರೆ ಹ್ಯಾಟ್ರಿಕ್ ಜಯದೊಂದಿಗೆ ಟೂರ್ನಿಗೆ ಕೋಲ್ಕತಾ ಕಳೆದ 5 ಪಂದ್ಯಗಳಲ್ಲಿ 3ರಲ್ಲಿ ಪರಾಭವಗೊಂಡಿದೆ. ಎರಡೂ ತಂಡಗಳಲ್ಲೂ ಸಿಕ್ಸರ್ ವೀರರಿದ್ದು, ಜಿದ್ದಾಜಿದ್ದಿನ ಹೋರಾಟ ಏರ್ಪಡುವ ನಿರೀಕ್ಷೆಯಿದೆ. ಟೂರ್ನಿಯಲ್ಲಿ ಡೆಲ್ಲಿ 103, ಕೋಲ್ಕತಾ 87 ಸಿಕ್ಸರ್ ಸಿಡಿಸಿವೆ. ಆದರೆ ಇತ್ತಂಡಗಳ ಬೌಲಿಂಗ್ ವಿಭಾಗ ದುರ್ಬಲವಾಗಿವೆ.
ಜೇಕ್ ಫ್ರೇಸರ್ ಸ್ಫೋಟಕ ಆಟ ಡೆಲ್ಲಿಯ ಕಮ್‌ಬ್ಯಾಕ್‌ಗೆ ಪ್ರಮುಖ ಕಾರಣ. 2 ಪಂದ್ಯಗಳಲ್ಲಿ ತಲಾ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿರುವ 22ರ ಆಸೀಸ್ ಆಟಗಾರ 237.50ರ ಸ್ಟ್ರೈಕ್‌ರೇಟ್‌ನಲ್ಲಿ 247 ರನ್ ಚಚ್ಚಿದ್ದಾರೆ. ರಿಷಭ್ ಪಂತ್, ಟ್ರಿಸ್ಟನ್ ಸ್ಟಬ್ಸ್ ಕೂಡಾ ಅಬ್ಬರಿಸುತ್ತಿರುವುದು ತಂಡದ ಪ್ಲಸ್ ಪಾಯಿಂಟ್.ಅತ್ತ ಕೋಲ್ಕತಾ ಸುನಿಲ್ ನರೈನ್, ಫಿಲ್ ಸಾಲ್ಟ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಮೊದಲ ಮುಖಾಮುಖಿಯಲ್ಲಿ 272 ರನ್ ಸಿಡಿಸಿ, 106 ರನ್‌ಗಳಿಂದ ಗೆದ್ದಿದ್ದ ಕೋಲ್ಕತಾ ಮತ್ತೊಂದು ಜಯದ ಕಾತರದಲ್ಲಿದೆ.ಒಟ್ಟು ಮುಖಾಮುಖಿ: 33
ಕೆಕೆಆರ್: 17
ಡೆಲ್ಲಿ: 15
ಫಲಿತಾಂಶವಿಲ್ಲ: 01
ಸಂಭವನೀಯ ಆಟಗಾರರ ಪಟ್ಟಿ
ಕೆಕೆಆರ್: ಸಾಲ್ಟ್, ನರೈನ್, ರಘುವಂಶಿ, ವೆಂಕಟೇಶ್, ಶ್ರೇಯಸ್(ನಾಯಕ), ರಿಂಕು, ರಸೆಲ್, ರಮಣ್‌ದೀಪ್, ಚಮೀರ, ಹರ್ಷಿತ್, ವರುಣ್.
ಡೆಲ್ಲಿ: ಫ್ರೇಸರ್, ಕುಶಾಗ್ರ, ಹೋಪ್, ಪಂತ್(ನಾಯಕ), ಸ್ಟಬ್ಸ್, ಅಕ್ಷರ್, ಅಭಿಷೇಕ್, ಕುಲ್ದೀಪ್, ಲಿಜಾಡ್ ವಿಲಿಯಮ್ಸ್, ಮುಕೇಶ್, ಖಲೀಲ್ ಅಹ್ಮದ್.
ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ; ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ.