ಮೈಸೂರು : ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಆ.11 ರಿಂದ 27 ರವರೆಗೆ ನಡೆಯುವ ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ20 ಪಂದ್ಯಾವಳಿಗೆ ಮೈಸೂರು ವಾರಿಯರ್ಸ್ ತಂಡವು ಸಜ್ಜಾಗಿದ್ದು, ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ತವಕದಲ್ಲಿದೆ.
ಎನ್.ಆರ್.ಗ್ರೂಪ್ ಮಾಲೀಕತ್ವದ ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ಅನುಭವಿ ಹಾಗೂ ಯುವ ಪ್ರತಿಭಾವಂತ ಆಟಗಾರರಿಂದ ಕೂಡಿದ್ದು, ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
ನಗರದ ರಾಡಿಸನ್ ಬ್ಲೂ ಹೊಟೇಲ್ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ತಂಡದ ಆಟಗಾರರನ್ನು ಪರಿಚಯಿಸಲಾಯಿತು. ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಕೈ ಬೆರಳಿಗೆ ಗಾಯವಾಗಿರುವುದರಿಂದ ಆರಂಭಿಕ ಪಂದ್ಯಗಳಲ್ಲಿ ಮನೀಶ್ ಪಾಂಡೆ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಂಡದ ಮಾಲೀಕ ಅರ್ಜುನ್ ರಂಗ ತಿಳಿಸಿದರು.
ಈ ಬಾರಿಯ ಮಾಹಾರಾಜ ಟ್ರೋಫಿಗೆ ನಮ್ಮ ತಂಡ ಸಂಪೂರ್ಣ ಸಜ್ಜಾಗಿದೆ. ಕಳೆದ ಬಾರಿಯ ಚಾಂಪಿಯನ್ ಆಗಿದ್ದು, ಈ ಪ್ರಶಸ್ತಿ ಉಳಿಸಿಕೊಳ್ಳಲು ನಮ್ಮ ತಂಡ ಹೋರಾಡಲಿವೆ. ಪಂದ್ಯಗಳು ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತವಾಗಿರುವುದು ಖಷಿ ತಂದಿದೆ. ಆದರೆ, ಪ್ರೇಕ್ಷಕರಿಲ್ಲದಿರುವುದು ಬೇಸರ ಮೂಡಿಸಿದೆ ಎಂದರು.
ವಿಕಲಚೇತನ ಕ್ರೀಡಾಪಟುಗಳಿಗೆ ನೆರವು:
ಎನ್‌ಆರ್ ಗ್ರೂಪ್ ಕ್ರಿಕೆಟ್ ಜತೆಗೆ ಸಾಮಾಜಿಕ ಸೇವಾ ಕಾರ್ಯಗಳನ್ನೂ ಮಾಡುತ್ತಿದ್ದು, ಈ ಬಾರಿ, ದಕ್ಷಿಣ ಏಷ್ಯಾದ ಮೊದಲ ವೀಲ್ ಚೇರ್ ಕ್ರಿಕೆಟ್ ಲೀಗ್ ಆಗಿರುವ ಎಬಿಲಿಟಿ ಸ್ಪೋರ್ಟ್ಸ್ ಲೀಗ್ (ಎಎಸ್‌ಎಲ್) ಟಿ20 ಜೊತೆಗೆ ಕಾಸ್ ಪಾರ್ಟನರ್ ಶಿಪ್ ಮಾಡಿಕೊಂಡಿದೆ. ಈ ಮೂಲಕ ವಿಕಲಚೇತನ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ನೆರವಾಗಲಿದೆ ಎಂದು ಅವರು ಹೇಳಿದರು.
ಜೊತೆಗೆ ಕಳೆದ ವರ್ಷದಂತೆಯೇ ಈ ವರ್ಷವೂ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಆಟಗಾರರು ತೆಗೆಯುವ ಪ್ರತೀ ವಿಕೆಟ್ ಗೆ 2 ಸಾವಿರ, ಪ್ರತೀ ಸಿಕ್ಸರ್ ಗೆ 1 ಸಾವಿರ ಮತ್ತು ಪ್ರತಿ ಫೋರ್ ಗೆ 500 ರೂ. ದೇಣಿಗೆ ನೀಡಲಿದೆ. ವಿಕಲಚೇತನ ಕ್ರೀಡಾಪಟುಗಳ ಸಬಲೀಕರಣಕ್ಕೆ ಈ ದೇಣಿಗೆ ಬಳಕೆಯಾಗಲಿದೆ ಎಂದರು.ಮೈಸೂರು ವಾರಿಯರ್ಸ್ ತಂಡ
ಕರುಣ್ ನಾಯರ್ (ನಾಯಕ), ಮನೀಶ್ ಪಾಂಡೆ, ಪ್ರಸಿದ್ದ್ ಕೃಷ್ಣ, ಕೃಷ್ಣಪ್ಪ ಗೌತಮ್, ಎಂ.ಆರ್. ಜಯಂತ್, ಗೌತಮ್ ಸಾಗರ್, ಎಸ್.ಎಂ. ಸಮಂತ್, ಕೆ.ಎಸ್. ಲಂಕೇಶ್, ಶಿಖರ್ ಶೆಟ್ಟಿ, ಎಲ್.ಆರ್. ಕುಮಾರ್, ಗೌತಮ್ ಮಿಶ್ರಾ, ಎಸ್.ಯು. ಕಾರ್ತಿಕ್, ಹರ್ಷಿಲ್ ಧರ್ಮಾನಿ, ಕುಶಾಲ್ ವಾದ್ವಾನಿ, ಧನುಷ್ ಗೌಡ, ಯಶೋವರ್ಧನ್ ಪರಂತಾಪ್, ಎಂ. ವೆಂಕಟೇಶ್, ಸಮಿತ್ ಕುಮಾರ್, ಶರತ್ ಶ್ರೀನಿವಾಸ್, ಸಿ.ಎ. ಕಾರ್ತಿಕ್.ನಮ್ಮ ತಂಡ ಅನುಭವಿ, ಯುವ ಪ್ರತಿಭಾವಂತ ಆಟಗಾರರಿಂದ ಕೂಡಿದ್ದು, ಪಂದ್ಯಾವಳಿಗೆ ಉತ್ತಮವಾಗಿ ತಯಾರಿ ಮಾಡಿಕೊಂಡಿದ್ದೇವೆ. ಕಳೆದ ಬಾರಿಯಂತೆ ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ.
- ಆರ್.ಎಕ್ಸ್. ಮುರಳಿ, ಮುಖ್ಯ ಕೋಚ್, ಮೈಸೂರು ವಾರಿಯರ್ಸ್
ನಮ್ಮ ತಂಡಕ್ಕೆ ಮನೀಶ್ ಪಾಂಡೆ, ಪ್ರಸಿದ್ಧ್ ಕೃಷ್ಣ, ಕೆ. ಗೌತಮ್ ಸೇರ್ಪಡೆಯಿಂದ ಮತ್ತಷ್ಟು ಬಲ ಬಂದಿದೆ. ಈ ಬಾರಿಯೂ ಪ್ರಶಸ್ತಿ ಗೆಲ್ಲುವುದೇ ನಮ್ಮ ಗುರಿಯಾಗಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ.
- ಕರುಣ್ ನಾಯರ್, ನಾಯಕ, ಮೈಸೂರು ವಾರಿಯರ್ಸ್