ಪ್ಯಾರಿಸ್: 2024ರ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್‌ಗಳು ದೇಶಕ್ಕೆ ಮತ್ತೊಂದು ಐತಿಹಾಸಿಕ ಪದಕ ತಂದುಕೊಟ್ಟಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಪ್ಯಾರಿಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಖಾತೆ ತೆರೆದಿದ್ದ ಮನು ಭಾಕರ್, ಮಂಗಳವಾರ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಮತ್ತೊಂದು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ದಕ್ಷಿಣ ಕೊರಿಯಾದ ಲೀ ವೊನೊಹೊ ಹಾಗೂ ಓಹ್ ಯೆಹ್ ಜಿನ್ ವಿರುದ್ಧ ಮಂಗಳವಾರ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಮನು ಹಾಗೂ ಸರಬ್ಜೋತ್ 16-10 ಅಂಕಗಳಲ್ಲಿ ಗೆಲುವು ಸಾಧಿಸಿದರು. ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಮೊದಲು 16 ಅಂಕ ಗಳಿಸಿದ ತಂಡ ವಿಜೇತ ಎಂದು ಘೋಷಿಸಲಾಗುತ್ತದೆ. ಅಂದರೆ ತಂಡವೊಂದು 8 ಸೆಟ್‌ಗಳಲ್ಲಿ ಗೆಲ್ಲಬೇಕು. ಒಂದು ಸೆಟ್ ಅಂದರೆ ಇಬ್ಬರು ಶೂಟರ್‌ಗಳು ತಲಾ ಒಂದು ಯತ್ನ ನಡೆಸುತ್ತಾರೆ. ಹೆಚ್ಚು ಅಂಕ ಗಳಿಸುವ ಜೋಡಿಗೆ ಸೆಟ್ ಅಂಕ ಸಿಗಲಿದೆ.
ಈ ಪಂದ್ಯದ ಮೊದಲ ಸೆಟ್‌ನಲ್ಲಿ ದ.ಕೊರಿಯಾ ಜೋಡಿ ಗೆದ್ದು 2 ಅಂಕ ಪಡೆದರೂ, ಬಳಿಕ ಭಾರತ ಸತತ 4 ಸೆಟ್ ಗೆದ್ದು 8-2ರಲ್ಲಿ ಮುನ್ನಡೆ ಸಾಧಿಸಿತು. ಆ ಬಳಿಕ ಎರಡು ತಂಡಗಳಿಂದಲೂ ಜಿದ್ದಾಜಿದ್ದಿನ ಹೋರಾಟ ಕಂಡುಬಂದರೂ ಆರಂಭಿಕ ಮುನ್ನಡೆಯನ್ನು ಕೊನೆವರೆಗೂ ಕಾಯ್ದುಕೊಂಡ ಮನು-ಸರಬ್ಜೋತ್ ಅರ್ಹವಾಗಿಯೇ ಕಂಚಿನ ಪದಕಕ್ಕೆ ಮುತ್ತಿಟ್ಟರು.
13ರಲ್ಲಿ 8 ಸೆಟ್ ಗೆದ್ದ ಭಾರತ 16 ಅಂಕ ಸಂಪಾದಿಸಿತು. ದ.ಕೊರಿಯಾ 5 ಸೆಟ್‌ಗಳಲ್ಲಿ ಜಯಗಳಿಸಿತು. ಇದೇ ವೇಳೆ ಫೈನಲ್‌ನಲ್ಲಿ ಟರ್ಕಿಯನ್ನು ಸೋಲಿಸಿದ ಸರ್ಬಿಯಾ ಚಿನ್ನದ ಪದಕ ತನ್ನದಾಗಿಸಿಕೊಂಡಿತು.
2ನೇ ಪದಕ: 22 ವರ್ಷದ ಮನು ಭಾನುವಾರ 10 ಮೀ. ಏರ್ ಪಿಸ್ತೂಲ್ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. 2 ದಿನಗಳ ಅಂತರದಲ್ಲೇ ಮತ್ತೊಂದು ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಮತ್ತೊಂದೆಡೆ ಸರಬ್ಜೋತ್ ಶನಿವಾರ ನಡೆದಿದ್ದ ಪುರುಷರ ವೈಯಕ್ತಿಕ 10 ಮೀ. ಏರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ 9ನೇ ಸ್ಥಾನ ಫೈನಲ್‌ಗೇರಲು ವಿಫಲರಾಗಿದ್ದರು.
ಟೋಕಿಯೋದಲ್ಲಿ 7ನೇ ಸ್ಥಾನ, ಪ್ಯಾರಿಸ್‌ನಲ್ಲಿ ಕಂಚಿನ ಪದಕ
ಮನು ಭಾಕರ್ 2021ರ ಟೋಕಿಯೋ ಒಲಿಂಪಿಕ್ಸ್‌ನ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಸೌರಭ್ ಚೌಧರಿ ಜೊತೆಗೂಡಿ ಸ್ಪರ್ಧಿಸಿದ್ದರು. ಆದರೆ ಅರ್ಹತಾ ಸುತ್ತಿನಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಜೋಡಿ, ಫೈನಲ್‌ಗೇರಲು ವಿಫಲವಾಗಿತ್ತು. ಈ ಬಾರಿ ಸರಬ್ಜೋತ್ ಜೊತೆಗೂಡಿ ಕಂಚಿನ ಪದಕ ಸಾಧನೆ ಮಾಡಿದ್ದಾರೆ.
ಮನುಗೆ ಇದೆ ಹ್ಯಾಟ್ರಿಕ್ ಪದಕ ಗೆಲ್ಲುವ ಅವಕಾಶ
ಕ್ರೀಡಾಕೂಟದಲ್ಲಿ ಈಗಾಗಲೇ 2 ಪದಕ ಗೆದ್ದಿರುವ ಮನು ಭಾಕರ್‌ಗೆ ಮತ್ತೊಂದು ಪದಕ ಗೆಲ್ಲುವ ಅವಕಾಶವಿದೆ. ಅವರು ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದು, ಹ್ಯಾಟ್ರಿಕ್ ಪದಕದ ನಿರೀಕ್ಷೆಯಲ್ಲಿದ್ದಾರೆ. ಇದೇ ಸ್ಪರ್ಧೆಯಲ್ಲಿ ಭಾರತದ ಇಶಾ ಸಿಂಗ್ ಕೂಡಾ ಕಣಕ್ಕಿಳಿಯಲಿದ್ದಾರೆ. ಅರ್ಹತಾ ಸುತ್ತು ಆ.2ರಂದು ಆರಂಭಗೊಳ್ಳಲಿದೆ.
ಒಲಿಂಪಿಕ್ ಶೂಟಿಂಗ್‌ನಲ್ಲಿ ಭಾರತಕ್ಕೆ 6ನೇ ಪದಕ
ಭಾರತ ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ 6ನೇ ಪದಕ ತನ್ನದಾಗಿಸಿಕೊಂಡಿತು. ಈ ಮೊದಲು 2004ರಲ್ಲಿ ರಾಜ್ಯವರ್ಧನ್ ರಾಥೋಡ್ ಬೆಳ್ಳಿ, 2008ರಲ್ಲಿ ಅಭಿನವ್ ಬಿಂದ್ರಾ ಚಿನ್ನ, 2012ರಲ್ಲಿ ವಿಜಯ್ ಕುಮಾರ್ ಬೆಳ್ಳಿ ಹಾಗೂ ಗಗನ್ ನಾರಂಗ್ ಕಂಚು, 2024ರ ಕ್ರೀಡಾಕೂಟದಲ್ಲಿ ಮನು ಭಾಕರ್ ಕಂಚಿನ ಪದಕಕ್ಕೆ ಕೊರಳೊಡ್ದಿದ್ದರು. ತಂಡ ವಿಭಾಗದಲ್ಲಿ ಭಾರತಕ್ಕೆ ಇದು ಮೊದಲ ಪದಕ. ಇನ್ನು ಸರಬ್ಜೋತ್ ಪದಕ ಗೆದ್ದ ಭಾರತದ 5ನೇ ಪುರುಷ ಶೂಟರ್.