ಟಿ20 ವಿಶ್ವಕಪ್‌: ಆಸೀಸ್‌ಗೆ ಸುಲಭದ ತುತ್ತಾದ ಒಮಾನ್‌

KannadaprabhaNewsNetwork | Updated : Jun 07 2024, 04:23 AM IST

ಸಾರಾಂಶ

ಒಮಾನ್‌ ವಿರುದ್ಧ ಗೆಲುವು ಸಾಧಿಸಿ ಟಿ20 ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದ ಆಸ್ಟ್ರೇಲಿಯಾ. ಆಸೀಸ್‌ಗೆ ಮಾರ್ಕಸ್‌ ಸ್ಟೋಯ್ನಿಸ್‌ ಆಲ್ರೌಂಡ್‌ ಆಟದ ಆಸರೆ.

ಬ್ರಿಡ್ಜ್‌ಟೌನ್‌(ಬಾರ್ಬಡೊಸ್‌): ಮಾರ್ಕಸ್‌ ಸ್ಟೋಯ್ನಿಸ್‌ರ ಆಲ್ರೌಂಡ್‌ ಆಟ ಟಿ20 ವಿಶ್ವಕಪ್‌ನಲ್ಲಿ ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾ ಶುಭಾರಂಭ ಮಾಡಲು ನೆರವಾಯಿತು. ಗುರುವಾರ ‘ಬಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಆಸೀಸ್‌, ಒಮಾನ್‌ ವಿರುದ್ಧ 39 ರನ್‌ಗಳ ಗೆಲುವು ದಾಖಲಿಸಿತು. 

ಮೊದಲು ಬ್ಯಾಟ್‌ ಮಾಡಿದ ಆಸೀಸ್‌ 9ನೇ ಓವರಲ್ಲಿ 50 ರನ್‌ಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಸ್ಟೋಯ್ನಿಸ್‌ರ ಸ್ಫೋಟಕ ಆಟ ತಂಡಕ್ಕೆ ಚೇತರಿಕೆ ನೀಡಿತು. 36 ಎಸೆತದಲ್ಲಿ ಔಟಾಗದೆ 67 ರನ್‌ ಸಿಡಿಸಿದ ಸ್ಟೋಯ್ನಿಸ್‌, ತಂಡ 20 ಓವರಲ್ಲಿ 5 ವಿಕೆಟ್‌ ನಷ್ಟಕ್ಕೆ 164 ರನ್‌ ಕಲೆಹಾಕಲು ನೆರವಾದರು. ಡೇವಿಡ್‌ ವಾರ್ನರ್ 56 ರನ್‌ಗಳ ಕೊಡುಗೆ ನೀಡಿದರು.

ನಿಧಾನಗತಿಯ ಪಿಚ್‌ನಲ್ಲಿ ಸ್ಪರ್ಧಾತ್ಮಕ ಗುರಿ ಪಡೆದ ಒಮಾನ್‌ ತಕ್ಕಮಟ್ಟಿಗಿನ ಹೋರಾಟ ಪ್ರದರ್ಶಿಸಿದರೂ, 20 ಓವರಲ್ಲಿ 9 ವಿಕೆಟ್‌ ಕಳೆದುಕೊಂಡು 125 ರನ್‌ ಕಲೆಹಾಕಲಷ್ಟೇ ಶಕ್ತವಾಯಿತು. ಸ್ಟೋಯ್ನಿಸ್‌ 3 ಓವರಲ್ಲಿ 19 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು. 2021ರ ಚಾಂಪಿಯನ್‌ ಆಸೀಸ್‌ 2 ಅಂಕ ಸಂಪಾದಿಸಿತು.

57 ರನ್‌ಗೆ 6 ವಿಕೆಟ್‌ ಕಳೆದುಕೊಂಡಿದ್ದ ಒಮಾನ್‌ಗೆ ಅಯಾನ್‌ ಖಾನ್‌ (36) ಹಾಗೂ ಮೆಹ್ರಾನ್‌ ಖಾನ್‌ (27) ಚೇತರಿಕೆ ನೀಡಿದರು. ಇವರಿಬ್ಬರ ಹೋರಾಟ ತಂಡ ಆಲೌಟ್‌ ಆಗುವುದನ್ನು ತಪ್ಪಿಸಿತು. ದುರ್ಬಲ ಎದುರಾಳಿಯನ್ನು ಆಲೌಟ್‌ ಮಾಡಲು ವಿಫಲವಾಗಿದ್ದು, ಆಸೀಸ್‌ಗೆ ನಿರಾಸೆ ಮೂಡಿಸಿತು.ಇನ್ನು, ಇದಕ್ಕೂ ಮುನ್ನ ಟ್ರ್ಯಾವಿಸ್‌ ಹೆಡ್‌ (12), ನಾಯಕ ಮಿಚೆಲ್‌ ಮಾರ್ಷ್‌ (14) ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ (0) ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. 4ನೇ ವಿಕೆಟ್‌ಗೆ ಕ್ರೀಸ್‌ ಹಂಚಿಕೊಂಡ ವಾರ್ನರ್‌ ಹಾಗೂ ಸ್ಟೋಯ್ನಿಸ್‌ 10.2 ಓವರಲ್ಲಿ 102 ರನ್‌ಗಳ ಜೊತೆಯಾಟವಾಡಿ ತಂಡ ಕಳಪೆ ಮೊತ್ತಕ್ಕೆ ಕುಸಿಯುವುದರಿಂದ ಪಾರು ಮಾಡಿದರು.

ಸ್ಟೋಯ್ನಿಸ್‌ರ ಇನ್ನಿಂಗ್ಸಲ್ಲಿ 2 ಬೌಂಡರಿ, 6 ಸಿಕ್ಸರ್‌ಗಳಿದ್ದವು. ಇನ್ನು ವಾರ್ನರ್‌ ತಾಳ್ಮೆಯಿಂದ ಬ್ಯಾಟ್‌ ಮಾಡಿ ಅರ್ಧಶತಕ ಪೂರೈಸುವ ಮೂಲಕ, ಅಂ.ರಾ.ಟಿ20ಯಲ್ಲಿ ಆಸ್ಟ್ರೇಲಿಯಾ ಪರ ಗರಿಷ್ಠ ರನ್‌ ಕಲೆಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಆ್ಯರೋನ್‌ ಫಿಂಚ್‌ರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದರು.ಆಸ್ಟ್ರೇಲಿಯಾ ತನ್ನ ಮುಂದಿನ ಪಂದ್ಯವನ್ನು ಶನಿವಾರ (ಜೂ.8) ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ಧ ಆಡಲಿದೆ.

ಸ್ಕೋರ್‌: ಆಸ್ಟ್ರೇಲಿಯಾ 20 ಓವರಲ್ಲಿ 164/5 (ಸ್ಟೋಯ್ನಿಸ್‌ 67*, ವಾರ್ನರ್‌ 56, ಮೆಹ್ರಾನ್‌ 2-38), ಒಮಾನ್‌ 20 ಓವರಲ್ಲಿ 125/9 (ಅಯಾನ್‌ 36, ಮೆಹ್ರಾನ್‌ 27, ಸ್ಟೋಯ್ನಿಸ್‌ 3-19) ಪಂದ್ಯಶ್ರೇಷ್ಠ: ಮಾರ್ಕಸ್‌ ಸ್ಟೋಯ್ನಿಸ್‌

Share this article