ಬೆಂಗಳೂರು : 6ನೇ ಆವೃತ್ತಿಯ ಭೀಮಯ್ಯ ಹಾಕಿ ಕಪ್‌ : ಡಿವೈಇಎಸ್‌ ವಿರುದ್ಧ ಎಂಇಜಿ ಬಾಯ್ಸ್ ಚಾಂಪಿಯನ್‌

KannadaprabhaNewsNetwork | Updated : Jan 13 2025, 04:20 AM IST

ಸಾರಾಂಶ

ಇಲ್ಲಿನ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಡಿವೈಇಎಸ್‌ ವಿರುದ್ಧ ಎಂಇಜಿ ಬಾಯ್ಸ್‌ ತಂಡ 4-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಬೆಂಗಳೂರು: ಕೂರ್ಗ್‌ ಚಾಲೆಂಜರ್ಸ್‌ ಚಿಕ್ಕಪೇಟೆ ಅಸೋಸಿಯೇಷನ್‌(ಸಿಸಿಸಿಎ) ಆಯೋಜಿಸಿದ 6ನೇ ಆವೃತ್ತಿಯ ಚಾಯಿರೊಸ್‌ ಭೀಮಯ್ಯ ಹಾಕಿ ಕಪ್‌ನಲ್ಲಿ ಎಂಇಜಿ ಬಾಯ್ಸ್‌ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಇಲ್ಲಿನ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಡಿವೈಇಎಸ್‌ ವಿರುದ್ಧ ಎಂಇಜಿ ಬಾಯ್ಸ್‌ ತಂಡ 4-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.

3 ದಿನಗಳ ಕಾಲ ನಡೆದ ಟೂರ್ನಿಯಲ್ಲಿ 20 ತಂಡಗಳು ಪಾಲ್ಗೊಂಡವು. ಒಟ್ಟು 180 ಆಟಗಾರರು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು. ದಿಗ್ಗಜ ಹಾಕಿ ಆಟಗಾರರಾದ ವಿ.ಆರ್‌.ರಘುನಾಥ್‌, ವಿ.ಎಸ್‌.ವಿನಯ, ಅಮರ್‌ ಅಯ್ಯಮ್ಮ, ನಿತಿನ್‌ ತಿಮ್ಮಯ್ಯ, ನಿಕಿನ್‌ ತಿಮ್ಮಯ್ಯ ಸೇರಿ ಪ್ರಮುಖರು ಪಾಲ್ಗೊಂಡರು.ಚಾಂಪಿಯನ್‌ ಎಂಇಜಿ ಬಾಯ್ಸ್‌ ತಂಡಕ್ಕೆ ಪದ್ಮಶ್ರೀ ಪುರಸ್ಕೃತ, ಭಾರತದ ಮಾಜಿ ಹಾಕಿ ಆಟಗಾರ ಎಂ.ಪಿ.ಗಣೇಶ್‌ ಪ್ರಶಸ್ತಿ ವಿತರಿಸಿದರು. ಎಂಇಜಿ ಬಾಯ್ಸ್‌ ತಂಡದ ಸಚಿನ್‌ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು.

ಆಸ್ಟ್ರೇಲಿಯನ್ ಓಪನ್ ಟೆನಿಸ್‌: ಸಬಲೆಂಕಾ, ಜ್ವೆರೆವ್‌ ಶುಭಾರಂಭ

ಮೆಲ್ಬರ್ನ್‌: ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಅರೈನಾ ಸಬಲೆಂಕಾ ಶುಭಾರಂಭ ಮಾಡಿದ್ದಾರೆ.ಕಳೆದೆರಡು ಬಾರಿ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದ ಬೆಲಾರಸ್‌ನ ತಾರಾ ಆಟಗಾರ್ತಿ ಸಬಲೆಂಕಾ, ಭಾನುವಾರ ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಅಮೆರಿಕದ ಸ್ಲೋನ್‌ ಸ್ಟೆಫಾನ್ಸ್ ವಿರುದ್ಧ 6-3, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಕಳೆದ ಬಾರಿ ರನ್ನರ್‌-ಅಪ್‌, ಚೀನಾದ ಕ್ವಿನ್‌ವೆನ್‌ ಝೆಂಗ್‌, 11ನೇ ಶ್ರೇಯಾಂಕಿತ ಪಾಲಾ ಬಡೋಸಾ ಕೂಡಾ 2ನೇ ಸುತ್ತಿಗೇರಿದರು. ಪುರುಷರ ಸಿಂಗಲ್ಸ್‌ನಲ್ಲಿ ಗ್ರ್ಯಾನ್‌ಸ್ಲಾಂ ಟೆನಿಸ್‌ನ 3 ಬಾರಿ ರನ್ನರ್‌-ಅಪ್‌, ನಾರ್ವೆಯ ಕ್ಯಾಸ್ಪೆರ್‌ ರುಡ್‌ ಶುಭಾರಂಭ ಮಾಡಿದರು.

ನಗಾಲ್‌ಗೆ ಮೊದಲ ಸುತ್ತಿನಲ್ಲೇ ಸೋಲು

ಸಿಂಗಲ್ಸ್‌ನಲ್ಲಿ ಭಾರತದ ಏಕೈಕ ಸ್ಪರ್ಧಿ ಎನಿಸಿಕೊಂಡಿದ್ದ ಸುಮಿತ್‌ ನಗಾಲ್‌ ಪುರುಷ ವಿಭಾಗದ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ಅವರು ಚೆಕ್‌ ಗಣರಾಜ್ಯದ ಥಾಮಸ್‌ ಮಚಾಕ್‌ ವಿರುದ್ಧ 3-6, 1-6, 5-7 ಸೆಟ್‌ಗಳಲ್ಲಿ ಸೋಲನುಭವಿಸಿದರು.

Share this article