ಮೈಸೂರು: ಮೊಹಮ್ಮದ್ ತಾಹ ಸಿಡಿಸಿದ ಸತತ 2ನೇ ಸ್ಫೋಟಕ ಶತಕ ನೆರವಿನಿಂದ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ಸತತ 2ನೇ ಗೆಲುವು ದಾಖಲಿಸಿದೆ. ಬುಧವಾರ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಹುಬ್ಬಳ್ಳಿ 2 ವಿಕೆಟ್‌ಗಳಿಂದ ರೋಚಕ ಜಯಭೇರಿ ಬಾರಿಸಿತು.
ಮೊದಲು ಬ್ಯಾಟ್ ಮಾಡಿದ ಬೆಂಗಳೂರು 6 ವಿಕೆಟ್‌ಗೆ 225 ರನ್ ಕಲೆಹಾಕಿತು. ತನ್ನ ಬೌಲರ್‌ಗಳ ಮೇಲೆ ನಂಬಿಕೆ ಇಟ್ಟುಕೊಂಡಿದ್ದ ಬೆಂಗಳೂರು ತಂಡ, ಈ ಮೊತ್ತವನ್ನು ರಕ್ಷಿಸುವ ವಿಶ್ವಾಸದಲ್ಲಿತ್ತು. ಆದರೆ ಹುಬ್ಬಳ್ಳಿ ಬ್ಯಾಟರ್ಸ್‌ನ ಸ್ಫೋಟಕ ಆಟ ಬೆಂಗಳೂರಿನ ಗೆಲುವನ್ನು ಕಸಿಯಿತು. ಹುಬ್ಬಳ್ಳಿ ಕೊನೆ ಎಸೆತದಲ್ಲಿ ಗೆಲುವು ತನ್ನದಾಗಿಸಿಕೊಂಡಿತು.ರನ್ ಮಳೆ: ಬೆಂಗಳೂರು ತಂಡ ಆರಂಭದಲ್ಲೇ ಸ್ಫೋಟಕ ಆಟವಾಡಿತು
. ಪವರ್-ಪ್ಲೇ ಓವರ್‌ಗಳಲ್ಲಿ 72 ರನ್ ತಂಡದ ಖಾತೆ ಸೇರಿತು. 14ನೇ ಓವರ್‌ವರೆಗೂ ಕ್ರೀಸ್‌ನಲ್ಲಿದ್ದ ರೋಹನ್ ಪಾಟೀಲ್, 43 ಎಸೆತಗಳಲ್ಲಿ 80 ರನ್ ಸಿಡಿಸಿದರು. ಮತ್ತೋರ್ವ ಆರಂಭಿಕ ಆಟಗಾರ ಎಲ್.ಆರ್.ಚೇತನ್ 23 ರನ್ ಗಳಿಸಿದರು. ಕೊನೆ 3 ಓವರ್‌ಗಳಲ್ಲಿ ಮತ್ತಷ್ಟು ಅಬ್ಬರಿಸಿದ ತಂಡ, 54 ರನ್ ಸೇರಿಸಿತು. ರೋಹನ್ ನವೀನ್ 7 ಎಸೆತಗಳಲ್ಲಿ ಔಟಾಗದೆ 24, ನವೀನ್ ಎಂ.ಜಿ. 11 ಎಸೆತಗಳಲ್ಲಿ ಔಟಾಗದೆ 24 ರನ್ ಸಿಡಿಸಿ ತಂಡದ ಮೊತ್ತವನ್ನು 220ರ ಗಡಿ ದಾಟಿಸಿದರು.
ಯಶ್ ರಾಜ್ 3 ವಿಕೆಟ್ ಕಿತ್ತರು.ತಾಹ ಸ್ಫೋಟಕ ಆಟ: ಕಳೆದ ಪಂದ್ಯದಲ್ಲಿ 216 ರನ್ ಗಳಿಸಿದ ಹುಬ್ಬಳ್ಳಿ ಈ ಬಾರಿ ಮತ್ತೆ ಅಬ್ಬರಿಸಿತು. ಆರಂಭಿಕ ಆಟಗಾರ ತಾಹ ಮತ್ತೊಂದು ಮನಮೋಹಕ ಶತಕ ದಾಖಲಿಸಿದರು. ಅವರು 54 ಎಸೆತಗಳಲ್ಲಿ 9 ಬೌಂಡರಿ, 7 ಸಿಕ್ಸರ್‌ನೊಂದಿಗೆ 107 ರನ್ ಸಿಡಿಸಿದರು. 4ನೇ ವಿಕೆಟ್‌ಗೆ ತಾಹ-ಅಭಿನವ್ ಮನೋಹರ್(17 ಎಸೆತಕ್ಕೆ 33) 83 ರನ್ ಜೊತೆಯಾಟವಾಡಿದರು. ಆದರೆ 16ನೇ ಓವರ್‌ನಲ್ಲಿ ಅಭಿನವ್, 17ನೇ ಓವರ್‌ನಲ್ಲಿ ತಾಹ ಔಟಾಗುವುದರೊಂದಿಗೆ ತಂಡ ಸಂಕಷ್ಟಕ್ಕೊಳಗಾಯಿತು. ಕೊನೆ ಓವರ್‌ನಲ್ಲಿ 17 ರನ್ ಬೇಕಿದ್ದಾಗ ಮೊದಲ 3 ಎಸೆತಕ್ಕೆ 3 ರನ್ ಬಂತು. ಬಳಿಕ 2 ಸಿಕ್ಸರ್, 1 ಬೌಂಡರಿ ಬಾರಿಸಿದ ಶಿವಕುಮಾರ್ ರಕ್ಷಿತ್ ತಂಡವನ್ನು ಗೆಲ್ಲಿಸಿದರು.
02ನೇ ಬ್ಯಾಟರ್: ಮಹಾರಾಜ ಟ್ರೋಫಿಯಲ್ಲಿ ಸತತ 2 ಬಾರಿಸಿದ 2ನೇ ಆಟಗಾರ ಮೊಹಮ್ಮದ್ ತಾಹ. 2022ರಲ್ಲಿ ರೋಹನ್ ಪಾಟೀಲ್ ಈ ಸಾಧನೆ ಮಾಡಿದ್ದರು.