- ನಾನೇ ಪ್ರದಾನ ಮಾಡಬೇಕು ಎಂದು ಹಟ ಹಿಡಿದ ಪಾಕ್ ಸಚಿವ । ಒಪ್ಪದ ಭಾರತ । ಟ್ರೋಫಿ ಹೊತ್ತೊಯ್ದು ನಖ್ವಿ ನಖರಾ- ಟ್ರೋಫಿ, ಪದಕ ನಮ್ಮವು, ಅವನ್ನು ಕಳುಹಿಸಿಕೊಡಿ: ಬಿಸಿಸಿಐ । ನಖ್ವಿ ಕೊಡದಿದ್ದರೆ ಐಸಿಸಿಗೆ ದೂರು ನೀಡುವುದಾಗಿ ಎಚ್ಚರಿಕೆ
---ಏನಿದು ಹೈಡ್ರಾಮಾ?- ದುಬೈನಲ್ಲಿ ಭಾನುವಾರ ರಾತ್ರಿ ನಡೆದ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತ ಚಾಂಪಿಯನ್- ಏಷ್ಯಾ ಕ್ರಿಕೆಟ್ ಮಂಡಳಿಗೆ ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿಯೇ ಅಧ್ಯಕ್ಷ. ಟ್ರೋಫಿ ಪ್ರದಾನಕ್ಕೆ ರೆಡಿ- ಪಹಲ್ಗಾಂ ದಾಳಿ ಕಾರಣ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಭಾರತ ನಕಾರ. ನಾನೇ ಕೊಡ್ತೀನಿ ಎಂದು ಹಟ- ಸಮಾರಂಭದಿಂದ ದೂರವೇ ಉಳಿದ ಆಟಗಾರರು. ಟ್ರೋಫಿ, ಪದಕಗಳನ್ನು ಒಯ್ದ ಮೊಹ್ಸಿನ್ ನಖ್ವಿ. ಭಾರತ ಕಿಡಿ- ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಈ ರೀತಿಯ ನಾಟಕೀಯ ಬೆಳವಣಿಗೆ ಇದೇ ಮೊದಲು. ವಿಶ್ವಾದ್ಯಂತ ಭಾರಿ ಚರ್ಚೆ
--ನಮ್ಮ ಹಕ್ಕನ್ನೇಕಸಿಯಲಾಗಿದೆನಾವು ಕಠಿಣ ಪರಿಶ್ರಮದಿಂದ ಟ್ರೋಫಿ ಗೆದ್ದಿದ್ದೇವೆ. ಆದರೆ ನಮ್ಮ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಆದರೂ ಚಿಂತೆಯಿಲ್ಲ. ಡ್ರೆಸ್ಸಿಂಗ್ ರೂಂನಲ್ಲಿ ನನ್ನ ಜೊತೆಗಿರುವ 14 ಆಟಗಾರರು, ಸಹಾಯಕ ಸಿಬ್ಬಂದಿಯೇ ನನ್ನ ಪಾಲಿಗೆ ಟ್ರೋಫಿ.ಸೂರ್ಯಕುಮಾರ್ ಯಾದವ್, ಭಾರತ ಕ್ಯಾಪ್ಟನ್
--ಕಪ್‌ನ ಎಮೋಜಿಜತೆ ಭಾರತದ
ಆಟಗಾರರ ಪೋಸ್!ಆಟಗಾರರು ಟ್ರೋಫಿ ಗೆದ್ದ ಬಳಿಕ ಅದರ ಜೊತೆ ಫೋಟೋ ತೆಗೆಸಿಕೊಂಡು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುವುದು ವಾಡಿಕೆ. ಆದರೆ ಭಾನುವಾರ ಭಾರತಕ್ಕೆ ಟ್ರೋಫಿ ನೀಡಲಾಗಿಲ್ಲ. ಹೀಗಾಗಿ ಆಟಗಾರರು ಸಾಮಾಜಿಕ ತಾಣಗಳಲ್ಲಿ ತಮ್ಮ ಫೋಟೋ ಜೊತೆ ಟ್ರೋಫಿಯ ಎಮೋಜಿಯನ್ನು ಹಾಕಿಕೊಂಡು ಸಂಭ್ರಮಿಸಿದ್ದಾರೆ. ಮೈದಾನದಲ್ಲಿ ಟ್ರೋಫಿ ಹಿಡಿದುಕೊಂಡವರಂತೆ ಪೋಸ್ ಕೊಟ್ಟು, ಬಳಿಕ ಪೋಸ್ಟ್ ಮಾಡುವಾಗ ಕಪ್‌ನ ಎಮೋಜಿ (ಚಿಹ್ನೆ)ಯನ್ನು ಸೇರಿಸಿಕೊಂಡಿದ್ದಾರೆ. ಸೂರ್ಯಕುಮಾರ್, ತಿಲಕ್ ವರ್ಮಾ, ಗಿಲ್, ಅಭಿಷೇಕ್, ಹಾರ್ದಿಕ್ ಸೇರಿ ಹಲವರು ಈ ರೀತಿ ಮಾಡಿದ್ದಾರೆ.----
ದುಬೈ: ಏಷ್ಯಾಕಪ್ ಫೈನಲ್‌ನಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಬಗ್ಗುಬಡಿದು ಟ್ರೋಫಿ ಎತ್ತಿಹಿಡಿಯಲು ಸಿದ್ಧವಿದ್ಧ ಭಾರತಕ್ಕೆ ಪಾಕಿಸ್ತಾನದ ಗೃಹ ಸಚಿವರೂ ಆದ ಏಷ್ಯಾ ಕ್ರಿಕೆಟ್ ಮಂಡಳಿ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಅನ್ಯಾಯವಾಯಿತು. ‘ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ’ ಎಂಬಂತೆ ಭಾರತ ಕಷ್ಟಪಟ್ಟು ಒಲಿಸಿಕೊಂಡಿದ್ದ ಟ್ರೋಫಿಯನ್ನು ತಾನೇ ಕೊಡಬೇಕು, ಇನ್ಯಾರೂ ಮುಟ್ಟಬಾರದು ಎಂದು ಅವರು ಹಠ ಹಿಡಿದರು. ಭಾರತೀಯರು ಕಪ್ ಸ್ವೀಕರಿಸಲು ನಿರಾಕರಿಸಿದ ಬಳಿಕ ನಖ್ವಿ ಅವರು ಟ್ರೋಫಿಯನ್ನೇ ಹೊತ್ತೊಯ್ದ ಅಪರೂಪದ, ಉದ್ಧಟತನದಿಂದ ಕೂಡಿದ್ದ ಘಟನೆ ಭಾನುವಾರ ತಡರಾತ್ರಿ ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು.ಇದೀಗ ಭಾರತ ತನ್ನ ಟ್ರೋಫಿ ತನಗೆ ಸಿಗಲೇಬೇಕು ಎಂದು ಪಣ ತೊಟ್ಟಿದೆ. ಕೂಡಲೇ ಟ್ರೋಫಿ, ಪದಕಗಳನ್ನು ಕಳುಹಿಸಿಕೊಡುವಂತೆ ಬಿಸಿಸಿಐ ಕಾರ್ಯದರ್ಶಿ ದೇವ್‌ಜಿತ್ ಸೈಕಿಯಾ ಎಸಿಸಿ ಹಾಗೂ ಅದರ ಮುಖ್ಯಸ್ಥ ನಖ್ವಿಗೆ ಆಗ್ರಹಿಸಿದ್ದಾರೆ. ಜೊತೆಗೆ ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಈ ಸಂಬಂಧ ಪ್ರಬಲ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಆಗಿದ್ದೇನು?:ಚಾಂಪಿಯನ್ ಭಾರತ ತಂಡದ ಆಟಗಾರರಿಗೆ ಟ್ರೋಫಿ ಹಾಗೂ ಮೆಡಲ್‌ಗಳನ್ನು ಹಸ್ತಾಂತರಿಸಲು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ಕಾಯುತ್ತಿದ್ದರು. ಆದರೆ ಪಹಲ್ಗಾಂ ದಾಳಿ ಕಾರಣ ಭಾರತೀಯ ಆಟಗಾರರು ನಖ್ವಿ ಕೈಯಿಂದ ಟ್ರೋಫಿ, ಪದಕ ಸ್ವೀಕರಿಸಲು ಸಿದ್ಧರಿರಲಿಲ್ಲ. ಬದಲಾಗಿ, ವೇದಿಕೆ ಮೇಲಿದ್ದ ಬೇರೆ ಯಾವುದೇ ಗಣ್ಯರಿಂದ ಟ್ರೋಫಿ ಸ್ವೀಕರಿಸಲು ಭಾರತ ತಯಾರಿತ್ತು.
ಒಂದು ಹಂತದಲ್ಲಿ ಎಮಿರೇಟ್ಸ್ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷ ಖಾಲಿದ್ ಅಲ್ ಝರೂನಿ ಟ್ರೋಫಿ ನೀಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಟ್ರೋಫಿಯನ್ನು ಖಾಲಿದ್ ವಿತರಿಸುವುದಕ್ಕೆ ನಖ್ವಿ ಒಪ್ಪಲಿಲ್ಲ. ಭಾರತೀಯರು ವೇದಿಕೆ ಕಡೆಗೆ ಸುಳಿಯದೆ, ವೇದಿಕೆಯಿಂದ 20 ಅಡಿ ದೂರದಲ್ಲಿ ಮೊಬೈಲ್ ನೋಡುತ್ತಾ, ರೀಲ್ಸ್ ಮಾಡುತ್ತಾ, ಆರಾಮಾಗಿ ಮಾತನಾಡುತ್ತಿದ್ದರು. ಒಂದು ವೇಳೆ ನಖ್ವಿ ಬಲವಂತವಾಗಿ ಭಾರತೀಯರಿಗೆ ಟ್ರೋಫಿ ಕೊಡಲು ಬಂದಿದ್ದರೆ, ಭಾರತೀಯರು ಪ್ರತಿಭಟಿಸಿ ಐಸಿಸಿಗೆ ದೂರು ನೀಡಲು ಸಹ ಸಿದ್ಧರಿದ್ದರು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.ಕೆಲ ಸಮಯ ಕಾದ ಬಳಿಕ ನಖ್ವಿ ವೇದಿಕೆಯಿಂದ ಇಳಿದು ಹೊರಟರು. ಸಿಬ್ಬಂದಿ ಟ್ರೋಫಿ ಹಾಗೂ ಪದಕಗಳನ್ನು ಹೊತ್ತು ನಖ್ವಿಯನ್ನು ಹಿಂಬಾಲಿಸಿದರು. ನಖ್ವಿ ಕ್ರೀಡಾಂಗಣದಿಂದ ಕಾಲ್ಕಿತ್ತ ಬಳಿಕ ಭಾರತೀಯ ಆಟಗಾರರು ವೇದಿಕೆ ಮೇಲೇರಿ ತಮ್ಮ ಕೈಯಲ್ಲಿ ಟ್ರೋಫಿ ಇರುವಂತೆ ಭಾವಿಸಿ ಸಂಭ್ರಮಿಸಿದರು.
ಟ್ರೋಫಿ ದುಬೈನಲ್ಲಿರುವ ಎಸಿಸಿ ಕೇಂದ್ರ ಕಚೇರಿಯಲ್ಲೇ ಇದೆ ಎಂದು ತಿಳಿದುಬಂದಿದ್ದು, ಅದನ್ನು ಯಾವಾಗ ಭಾರತ ತಂಡಕ್ಕೆ ನೀಡಲಾಗುತ್ತದೆ ಎಂಬ ಬಗ್ಗೆ ಇನ್ನೂ ಯಾರೂ ಮಾತಾಡುತ್ತಿಲ್ಲ.--