ಭಾರತ vs ಆಸೀಸ್‌: ಟಿ20 ವಿಶ್ವಕಪ್‌ ಸೆಮೀಸ್‌ ರೇಸ್‌ ಗೆಲ್ಲೋರ್‍ಯಾರು?

KannadaprabhaNewsNetwork | Updated : Jun 24 2024, 03:27 AM IST

ಸಾರಾಂಶ

ಇಂದು ಟಿ20 ವಿಶ್ವಕಪ್‌ನ ಮಹತ್ವದ ಪಂದ್ಯ. ಸೆಮಿಫೈನಲ್‌ ಪ್ರವೇಶಿಸಲು ಇತ್ತಂಡಗಳಿಗೂ ಗೆಲುವು ಅನಿವಾರ್ಯ. ಭಾರತ ಗೆದ್ದರೆ ಅಗ್ರಸ್ಥಾನಿಯಾಗಿಯೇ ಸೆಮಿಫೈನಲ್‌ ಪ್ರವೇಶ. ಸೋತರೂ ತಂಡಕ್ಕಿದೆ ಚಾನ್ಸ್‌. ಆಸೀಸ್‌ಗೆ ಗೆಲುವೊಂದೇ ಮಂತ್ರ

ಗ್ರಾಸ್‌ ಐಲೆಟ್‌(ಸೇಂಟ್‌ ಲೂಸಿಯಾ): ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಗೆದ್ದಿದ್ದರೆ ಈಗ ಭಾರತ ಹಾಗೂ ಆಸ್ಟ್ರೇಲಿಯಾ ಸೆಮಿಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿರುತ್ತಿತ್ತು. ಆದರೆ ಆಫ್ಘನ್‌ನ ಗೆಲುವು ಎಲ್ಲಾ ಲೆಕ್ಕಾಚಾರ ಬುಡಮೇಲು ಮಾಡಿದೆ. 

ಈ ಬಾರಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ ರೇಸ್‌ನಲ್ಲಿರುವ ಪ್ರಮುಖ 2 ತಂಡಗಳಾದ ಭಾರತ ಹಾಗೂ ಆಸೀಸ್‌ ನಡುವೆ ಸೋಮವಾರ ನಿರ್ಣಾಯಕ ಪಂದ್ಯ ನಡೆಯಲಿದ್ದು, ಇತ್ತಂಡಗಳ ಪಾಲಿಗೂ ಮಾಡು ಇಲ್ಲವೇ ಮಡಿ ಕದನ ಎನಿಸಿಕೊಂಡಿದೆ.

ಭಾರತ ತಂಡ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಿದ್ದು, 4 ಅಂಕದೊಂದಿಗೆ ಗುಂಪು 1ರಲ್ಲಿ ಅಗ್ರಸ್ಥಾನದಲ್ಲಿದೆ. ಅತ್ತ ಆಸೀಸ್‌ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದರೂ, ಆಫ್ಘನ್‌ ವಿರುದ್ಧದ ಸೋಲು ತಂಡದ ಆತ್ಮವಿಶ್ವಾಸ ಕುಗ್ಗಿಸಿದೆ.ಕಳೆದ ಪಂದ್ಯದಲ್ಲಿ ಬಾಂಗ್ಲಾ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದ ಭಾರತ ಮತ್ತೊಮ್ಮೆ ಅಮೋಘ ಪ್ರದರ್ಶನ ನೀಡುವ ಕಾತರದಲ್ಲಿದೆ. ಆದರೆ ಆಸೀಸ್‌ ಎಷ್ಟು ಅಪಾಯಕಾರಿ ಎಂಬುದು ಭಾರತಕ್ಕೆ ಚೆನ್ನಾಗಿ ಗೊತ್ತಿದೆ. 

ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಎಲ್ಲಾ ತಂಡಗಳ ವಿರುದ್ಧ ಪರಾಕ್ರಮ ಮೆರೆದರೂ ಫೈನಲ್‌ನಲ್ಲಿ ಆಸೀಸ್‌ ವಿರುದ್ಧ ಆಘಾತಕಾರಿ ಸೋಲು ಕಂಡಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ತಂಡ ಕಾಯುತ್ತಿದೆ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ರಿಷಭ್‌ ಪಂತ್‌, ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ, ಬೂಮ್ರಾ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.ಮತ್ತೊಂದೆಡೆ ಆಸೀಸ್‌ ಎಲ್ಲಾ ವಿಭಾಗದಲ್ಲಿ ಬಲಿಷ್ಠವಾಗಿ ತೋರುತ್ತಿದೆ. 

ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯವಿರುವ ಹಲವು ಆಟಗಾರರಿದ್ದು, ನಿರ್ಣಾಯಕ ಪಂದ್ಯದಲ್ಲಿ ತಂಡದ ಕೈ ಹಿಡಿಯಬೇಕಿದೆ. ವಾರ್ನರ್‌, ಹೆಡ್‌, ಮ್ಯಾಕ್ಸ್‌ವೆಲ್‌, ಸ್ಟೋಯ್ನಿಸ್‌ ಒಳಗೊಂಡ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಕಟ್ಟಿಹಾಕಲು ಬೂಮ್ರಾ ನೇತೃತ್ವದ ಬೌಲಿಂಗ್‌ ಬಳದ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಬಹುದು.

ಒಟ್ಟು ಮುಖಾಮುಖಿ: 31ಭಾರತ: 19ಆಸ್ಟ್ರೇಲಿಯಾ: 11ಫಲಿತಾಂಶವಿಲ್ಲ: 01

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌(ನಾಯಕ), ವಿರಾಟ್, ರಿಷಭ್‌, ಸೂರ್ಯಕುಮಾರ್‌, ಶಿವಂ ದುಬೆ, ಹಾರ್ದಿಕ್‌, ಜಡೇಜಾ, ಅಕ್ಷರ್, ಬೂಮ್ರಾ, ಕುಲ್ದೀಪ್‌, ಅರ್ಶ್‌ದೀಪ್‌.ಆಸ್ಟ್ರೇಲಿಯಾ: ವಾರ್ನರ್‌, ಹೆಡ್‌, ಮಾರ್ಷ್‌(ನಾಯಕ), ಮ್ಯಾಕ್ಸ್‌ವೆಲ್‌, ಸ್ಟೋಯ್ನಿಸ್‌, ಡೇವಿಡ್‌, ವೇಡ್‌, ಕಮಿನ್ಸ್‌, ಏಗರ್‌, ಆ್ಯಡಂ ಝಂಪಾ, ಹೇಜಲ್‌ವುಡ್‌

ಪಂದ್ಯ ಆರಂಭ: ರಾತ್ರಿ 8 ಗಂಟೆಗೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌.

ಪಿಚ್‌ ರಿಪೋರ್ಟ್‌

ಸೇಂಟ್‌ ಲೂಸಿಯಾ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿ. ಇಲ್ಲಿ ದೊಡ್ಡ ಮೊತ್ತ ದಾಖಲಾದ ಉದಾಹರಣೆಯೇ ಹೆಚ್ಚು. ಈ ಬಾರಿ ವಿಶ್ವಕಪ್‌ನಲ್ಲಿ ಇಲ್ಲಿ ನಡೆದ 5 ಪಂದ್ಯಗಳಲ್ಲಿ 6 ಬಾರಿ 180+ ರನ್‌ ದಾಖಲಾಗಿವೆ. ಹೀಗಾಗಿ ಮತ್ತೊಮ್ಮೆ ಬೃಹತ್‌ ಮೊತ್ತದ ಪಂದ್ಯ ನಿರೀಕ್ಷಿಸಬಹುದು.

Share this article