2 ಬಾರಿ ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ತಮ್ಮ ವೃತ್ತಿಬದುಕಿನಲ್ಲಿ ಮೊದಲ ಬಾರಿಗೆ 90 ಮೀ. ದೂರ ದಾಟಿದ್ದಾರೆ.
ದೋಹಾ: 2 ಬಾರಿ ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ತಮ್ಮ ವೃತ್ತಿಬದುಕಿನಲ್ಲಿ ಮೊದಲ ಬಾರಿಗೆ 90 ಮೀ. ದೂರ ದಾಟಿದ್ದಾರೆ. ಶುಕ್ರವಾರ ರಾತ್ರಿ ಇಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ನೀರಜ್, ತಮ್ಮ 3ನೇ ಯತ್ನದಲ್ಲಿ 90.23 ಮೀ. ದೂರಕ್ಕೆ ಜಾವೆಲಿನ್ ಎಸೆದು, ರಾಷ್ಟ್ರೀಯ ದಾಖಲೆ ಬರೆದರು.
ಕೊನೆಯ ಯತ್ನದಲ್ಲಿ 91.06 ಮೀ. ಎಸೆದ ಜರ್ಮನಿಯ ಯೂಲಿಯನ್ ವೆಬ್ಬರ್ ಮೊದಲ ಸ್ಥಾನ ಪಡೆದರೆ, ನೀರಜ್‌ಗೆ 2ನೇ ಸ್ಥಾನ ದೊರೆಯಿತು. ಗ್ರೆನಡಾದ ಆ್ಯಂಡರ್‌ಸನ್ ಪೀಟರ್ಸ್ 85.64 ಮೀ.ನೊಂದಿಗೆ 3ನೇ ಸ್ಥಾನ ಗಳಿಸಿದರು.
ತಮ್ಮ ವೃತ್ತಿಬದುಕಿನಲ್ಲಿ ಹಲವು ಬಾರಿ 90 ಮೀ. ಸನಿಹಕ್ಕೆ ಬಂದರೂ, ಆ ಗಡಿಯನ್ನು ದಾಟಲು ನೀರಜ್‌ಗೆ ಸಾಧ್ಯವಾಗಿರಲಿಲ್ಲ. ಈ ಋತುವಿನ ಮೊದಲ ಸ್ಪರ್ಧೆಯಲ್ಲೇ ದಾಖಲೆ ಬರೆದಿರುವ ನೀರಜ್, ಸೆಪ್ಟೆಂಬರ್‌ನಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಹೋರಾಡಲಿದ್ದಾರೆ.