ನಂಬರ್‌ 1 ಗುಜರಾತ್‌ಗೆ 83 ರನ್‌ ಸೋಲಿನ ಶಾಕ್‌!

Published : May 26, 2025, 07:59 AM IST
Gujarat Titans ipl 2025

ಸಾರಾಂಶ

ಮಾಜಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ನ ನಂಬರ್‌ 1 ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಗಳು ದಟ್ಟವಾಗಿದೆ

ಅಹಮದಾಬಾದ್‌: ಮಾಜಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ನ ನಂಬರ್‌ 1 ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಗಳು ದಟ್ಟವಾಗಿದೆ. ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದ್ದ ತಂಡ ಸತತ 2ನೇ ಸೋಲು ಕಂಡಿದೆ. ಭಾನುವಾರ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 83 ರನ್‌ಗಳಲ್ಲಿ ಹೀನಾಯವಾಗಿ ಸೋತ ಗುಜರಾತ್‌, ಅಗ್ರ-2ರಿಂದ ಹೊರಬೀಳುವ ಆತಂಕಕ್ಕೆ ಗುರಿಯಾಗಿದೆ.

ತಂಡ ಎಲ್ಲಾ 14 ಪಂದ್ಯಗಳನ್ನಾಡಿದ್ದು, 18 ಅಂಕದೊಂದಿಗೆ ಅಗ್ರಸ್ಥಾನದಲ್ಲೇ ಇದೆ. ಆದರೆ ಆರ್‌ಸಿಬಿ(17), ಪಂಜಾಬ್‌(17), ಮುಂಬೈ(16) ತಂಡಗಳು ಕೊನೆ ಪಂದ್ಯದಲ್ಲಿ ಗೆದ್ದರೆ ಗುಜರಾತ್‌ 3ನೇ ಸ್ಥಾನಕ್ಕೆ ತಳ್ಳಲ್ಪಡಲಿವೆ. ಮತ್ತೊಂದೆಡೆ ಚೆನ್ನೈ 4 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆ ಸ್ಥಾನಿಯಾಗಿಯೇ ಟೂರ್ನಿಗೆ ವಿದಾಯ ಹೇಳಿತು.

ಮೊದಲು ಬ್ಯಾಟ್‌ ಮಾಡಿದ ಚೆನ್ನೈ 5 ವಿಕೆಟ್‌ಗೆ 230 ರನ್‌ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ಗುಜರಾತ್‌ ಬ್ಯಾಟಿಂಗ್‌ ವೈಫಲ್ಯಕ್ಕೆ ತುತ್ತಾಗಿ, 18.3 ಓವರ್‌ಗಳಲ್ಲಿ 147 ರನ್‌ಗೆ ಆಲೌಟಾಯಿತು. ಟೂರ್ನಿಯುದ್ದಕ್ಕೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಗುಜರಾತ್‌, ಕಳೆದೆರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದು ಪ್ಲೇ-ಆಫ್‌ಗೂ ಮುನ್ನ ತಂಡದ ಆತಂಕಕ್ಕೆ ಕಾರಣವಾಗಿದೆ.

ಚೆನ್ನೈನ ನಿಖರ ದಾಳಿಗೆ ಸಾಯಿ ಸುದರ್ಶನ್‌ ಹೊರತುಪಡಿಸಿ ಬೇರೆ ಯಾವುದೇ ಬ್ಯಾಟರ್‌ಗೆ ಕ್ರೀಸ್‌ನಲ್ಲಿ ನೆಲೆಯೂರಲಾಗಲಿಲ್ಲ. ಟೂರ್ನಿಯ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿರುವ ಸುದರ್ಶನ್‌ 41 ರನ್‌ ಗಳಿಸಿದರು. ಶುಭ್‌ಮನ್‌ ಗಿಲ್‌(13), ಜೋಸ್‌ ಬಟ್ಲರ್(5), ರುಥರ್‌ಫೋರ್ಡ್‌(0), ಶಾರುಖ್‌ ಖಾನ್‌(19), ರಾಹುಲ್‌ ತೆವಾಟಿಯಾ(14) ಹಾಗೂ ರಶೀದ್‌ ಖಾನ್(12) ತಂಡಕ್ಕೆ ನೆರವಾಗಲಿಲ್ಲ. ನೂರ್‌ ಅಹ್ಮದ್‌ ಹಾಗೂ ಅನ್ಶುಲ್‌ ಕಂಬೋಜ್‌ ತಲಾ 3 ವಿಕೆಟ್‌ ಕಿತ್ತರು.

ಸ್ಫೋಟಕ ಆಟ: ಇದಕ್ಕೂ ಮುನ್ನ ಇನ್ನಿಂಗ್ಸ್‌ನ 2ನೇ ಓವರ್‌ನಲ್ಲೇ 28 ರನ್‌ ಸಿಡಿಸುವ ಮೂಲಕ 17 ವರ್ಷದ ಆಯುಶ್‌ ಮಾಥ್ರೆ ಚೆನ್ನೈಗೆ ಉತ್ತಮ ಆರಂಭ ಒದಗಿಸಿದರು. ಪವರ್‌-ಪ್ಲೇನಲ್ಲಿ 68 ರನ್‌ ಗಳಿಸಿದ್ದ ತಂಡ, ಆ ಬಳಿಕವೂ ವೇಗವಾಗಿ ರನ್‌ ಕಲೆಹಾಕಿತು. ಆಯುಶ್‌ 17 ಎಸೆತಕ್ಕೆ 34 ರನ್‌ ಗಳಿಸಿ ಔಟಾದ ಬಳಿಕ, ಉರ್ವಿಲ್‌ ಪಟೇಲ್‌ 19 ಎಸೆತಕ್ಕೆ 37 ರನ್‌ ಚಚ್ಚಿದರು. ಡೆವೋನ್‌ ಕಾನ್‌ವೇ 35 ಎಸೆತಕ್ಕೆ 52 ರನ್‌ ಗಳಿಸಿದರೆ, ಡೆತ್‌ ಓವರ್‌ಗಳಲ್ಲಿ ಆರ್ಭಟಿಸಿದ ಡೆವಾಲ್ಡ್‌ ಬ್ರೆವಿಸ್‌ 23 ಎಸೆತಕ್ಕೆ 4 ಬೌಂಡರಿ, 5 ಸಿಕ್ಸರ್‌ನೊಂದಿಗೆ ಔಟಾಗದೆ 57 ರನ್‌ ಸಿಡಿಸಿದರು. ಜಡೇಜಾ 21, ದುಬೆ 17 ರನ್‌ ಕೊಡುಗೆ ನೀಡಿದರು.

ಸ್ಕೋರ್‌: ಚೆನ್ನೈ 20 ಓವರಲ್ಲಿ 230/5 (ಬ್ರೆವಿಸ್‌ 57*, ಕಾನ್‌ವೇ 52, ಉರ್ವಿಲ್‌ 37, ಆಯುಶ್‌ 34, ಪ್ರಸಿದ್ಧ್‌ 2-22), ಗುಜರಾತ್‌ 18.3 ಓವರಲ್ಲಿ 147/10 (ಸುದರ್ಶನ್‌ 41, ಅನ್ಶುಲ್‌ 3-13, ನೂರ್ 3-21)

09ನೇ ಬಾರಿ

ಅಹಮದಾಬಾದ್‌ನಲ್ಲಿ ಈ ವರ್ಷ 9 ಬಾರಿ 200+ ರನ್‌ ದಾಖಲಾಗಿವೆ. ಇದು ಆವೃತ್ತಿಯೊಂದರಲ್ಲಿ ಯಾವುದೇ ಕ್ರೀಡಾಂಗಣದಲ್ಲಿ ಗರಿಷ್ಠ.

19 ಎಸೆತ

ಬ್ರೆವಿಸ್‌ 19 ಎಸೆತಕ್ಕೆ ಅರ್ಧಶತಕ ಬಾರಿಸಿದರು. ಇದು ಚೆನ್ನೈ ಪರ ಐಪಿಎಲ್‌ನಲ್ಲಿ 2ನೇ ಜಂಟಿ ವೇಗದ ಅರ್ಧಶತಕ.

31 ಸಿಕ್ಸರ್‌

ರಶೀದ್‌ ಖಾನ್‌ ಈ ಬಾರಿ 31 ಸಿಕ್ಸರ್‌ ಬಿಟ್ಟುಕೊಟ್ಟಿದ್ದಾರೆ. 2022ರಲ್ಲಿ ಸಿರಾಜ್‌ ಕೂಡಾ 31 ಸಿಕ್ಸರ್‌ ನೀಡಿದ್ದರು.

ಕೊನೆ ಪಂದ್ಯದಲ್ಲಿ ಸನ್‌ 278! 

ನವದೆಹಲಿ: ಕೋಲ್ಕತಾ ವಿರುದ್ಧದ ಈ ಬಾರಿ ಐಪಿಎಲ್‌ನ ಲೀಗ್‌ ಹಂತದ ಕೊನೆ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ 110 ರನ್‌ ಗೆಲುವು ಸಾಧಿಸಿದೆ. 14ರಲ್ಲಿ 6 ಪಂದ್ಯ ಗೆದ್ದ ಸನ್‌ರೈಸರ್ಸ್‌ 6ನೇ ಸ್ಥಾನಕ್ಕೇರಿತು. ಕೆಕೆಆರ್ 7 ಸೋಲಿನೊಂದಿಗೆ 7ನೇ ಸ್ಥಾನಕ್ಕೆ ಕುಸಿಯಿತು.

ಮೊದಲು ಬ್ಯಾಟ್‌ ಮಾಡಿದ ಸನ್‌ರೈಸರ್ಸ್‌ 3 ವಿಕೆಟ್‌ಗೆ 278 ರನ್‌ ಕಲೆಹಾಕಿತು. ಇದು ಐಪಿಎಲ್‌ನಲ್ಲೇ ತಂಡವೊಂದರ 3ನೇ ಗರಿಷ್ಠ ಸ್ಕೋರ್‌. ಕಳೆದ ವರ್ಷ ಸನ್‌ರೈಸರ್ಸ್‌ ತಂಡ ಆರ್‌ಸಿಬಿ ವಿರುದ್ಧ 3 ವಿಕೆಟ್‌ಗೆ 287 ರನ್‌ ಗಳಿಸಿದ್ದು, ಈಗಲೂ ಗರಿಷ್ಠ. ಕ್ಲಾಸೆನ್‌ 37 ಎಸೆತಕ್ಕೆ ಶತಕ ಪೂರ್ಣಗೊಳಿಸಿದರು. ಇದು ಐಪಿಎಲ್‌ನ 3ನೇ ಜಂಟಿ ವೇಗದ ಶತಕ. ಕ್ರಿಸ್‌ ಗೇಲ್‌ 30, ವೈಭವ್‌ ಸೂರ್ಯವಂಶಿ 35 ಎಸೆತಕ್ಕೆ ಶತಕ ಬಾರಿಸಿದ್ದಾರೆ. ದೊಡ್ಡ ಗುರಿ ಬೆನ್ನತ್ತಿದ ಕೋಲ್ಕತಾ 18.4 ಓವರ್‌ಗಳಲ್ಲಿ 168 ರನ್‌ಗೆ ಆಲೌಟಾಯಿತು.

ಸನ್‌ 278 ರನ್: 3ನೇ ಗರಿಷ್ಠ 

ನವದೆಹಲಿ: ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತೆ ಸ್ಫೋಟಕ ಆಟವಾಡಿದೆ. ಭಾನುವಾರ ಕೋಲ್ಕತಾ ವಿರುದ್ಧ ಸನ್‌ರೈಸರ್ಸ್‌ 3 ವಿಕೆಟ್‌ಗೆ 278 ರನ್‌ ಕಲೆಹಾಕಿತು. ಇದು ಐಪಿಎಲ್‌ನಲ್ಲೇ ತಂಡವೊಂದರ 3ನೇ ಗರಿಷ್ಠ ಸ್ಕೋರ್‌.

ಟೂರ್ನಿ ಇತಿಹಾಸದಲ್ಲಿ ಅಗ್ರ-4 ಗರಿಷ್ಠ ಸ್ಕೋರ್‌ ದಾಖಲೆ ಸನ್‌ರೈಸರ್ಸ್‌ ಹೆಸರಲ್ಲೇ ಇರುವುದು ಗಮನಾರ್ಹ. ಕಳೆದ ವರ್ಷ ಸನ್‌ರೈಸರ್ಸ್‌ ತಂಡ ಆರ್‌ಸಿಬಿ ವಿರುದ್ಧ 3 ವಿಕೆಟ್‌ಗೆ 287 ರನ್‌ ಗಳಿಸಿದ್ದು, ಈಗಲೇ ಗರಿಷ್ಠ. ಅಲ್ಲದೆ, ಈ ವರ್ಷ ರಾಜಸ್ಥಾನ ವಿರುದ್ಧ 6 ವಿಕೆಟ್‌ಗೆ 286 ರನ್‌ ಗಳಿಸಿತ್ತು. ತಂಡ ಐಪಿಎಲ್‌ನಲ್ಲಿ 4ನೇ ಬಾರಿ 270+ ರನ್‌ ಕಲೆಹಾಕಿದೆ.

ಪಂದ್ಯದಲ್ಲಿ ಸ್ಫೋಟಕ ಆಟವಾಡಿದ ಕ್ಲಾಸೆನ್‌ 37 ಎಸೆತಕ್ಕೆ ಶತಕ ಪೂರ್ಣಗೊಳಿಸಿದರು. ಇದು ಐಪಿಎಲ್‌ನ 3ನೇ ಜಂಟಿ ವೇಗದ ಶತಕ. ಕ್ರಿಸ್‌ ಗೇಲ್‌ 30, ವೈಭವ್‌ ಸೂರ್ಯವಂಶಿ 35 ಎಸೆತಕ್ಕೆ ಶತಕ ಬಾರಿಸಿದ್ದಾರೆ. ಯೂಸುಫ್‌ ಪಠಾಣ್‌ 37 ಎಸೆತಕ್ಕೆ 100 ರನ್‌ ಗಳಿಸಿದ್ದನ್ನು ಕ್ಲಾಸೆನ್‌ ಸರಿಗಟ್ಟಿದರು. ಅವರು 39 ಎಸೆತಕ್ಕೆ 105 ರನ್‌ ಬಾರಿಸಿದರು.

ಟಾಪ್‌-2 ಸ್ಥಾನಕ್ಕಾಗಿ ಇಂದು ಮುಂಬೈ vs ಪಂಜಾಬ್‌ ಫೈಟ್‌ 

ಜೈಪುರ: 18ನೇ ಆವೃತ್ತಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ ಸ್ಥಾನದ ಪೈಪೋಟಿ ಕೊನೆಗೊಂಡಿದ್ದರೂ, ಅಗ್ರ-2 ಸ್ಥಾನಕ್ಕಾಗಿ 4 ತಂಡಗಳ ರೋಚಕ ಸ್ಪರ್ಧೆ ಮುಂದುವರಿದಿದೆ. ಇದರ ಭಾಗವಾಗಿ ಸೋಮವಾರ ಅತಿ ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ಪರಸ್ಪರ ಸೆಣಸಾಡಲಿವೆ.

ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಆಡಿರುವ 13 ಪಂದ್ಯಗಳಲ್ಲಿ 17 ಅಂಕ ಹೊಂದಿದ್ದು, ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ತಂಡ ಈ ಪಂದ್ಯದಲ್ಲಿ ಗೆದ್ದರೆ ಅಗ್ರಸ್ಥಾನಕ್ಕೇರಲಿದ್ದು, ಲೀಗ್‌ ಹಂತದ ಕೊನೆಯಲ್ಲಿ ಅಗ್ರ-2ರಲ್ಲೇ ಉಳಿದುಕೊಳ್ಳಲಿದೆ. ಈ ಮೂಲಕ ಕಳೆದ 11 ವರ್ಷಗಳಲ್ಲೇ ಮೊದಲ ಬಾರಿ ಅಗ್ರ-2 ಸ್ಥಾನಿಯಾಗುವ ಅವಕಾಶ ಸಿಗಲಿದೆ.

ಮತ್ತೊಂದೆಡೆ 5 ಬಾರಿ ಚಾಂಪಿಯನ್‌ ಮುಂಬೈ ತಂಡ 13 ಪಂದ್ಯಗಳನ್ನಾಡಿದ್ದು, 16 ಅಂಕ ಸಂಪಾದಿಸಿದೆ. ತಂಡಕ್ಕೂ ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಅವಕಾಶವಿದೆ. ಈ ಪಂದ್ಯದಲ್ಲಿ ಗೆದ್ದರೆ ತಂಡದ ಅಂಕ 18 ಆಗಲಿದ್ದು, ನೆಟ್‌ ರನ್‌ರೇಟ್‌ ಉತ್ತಮವಾಗಿರುವುದರಿಂದ ಗುಜರಾತ್‌(18 ಅಂಕ)ನ ಹಿಂದಿಕ್ಕಿ ಅಗ್ರ-2ರಲ್ಲಿ ಸ್ಥಾನ ಪಡೆಯಬಹುದು. ಸೋತರೆ ತಂಡ 4ನೇ ಸ್ಥಾನದಲ್ಲೇ ಉಳಿದುಕೊಳ್ಳಲಿದ್ದು, ಎಲಿಮಿನೇಟರ್‌ನಲ್ಲಿ ಆಡಬೇಕಾಗುತ್ತದೆ.

ಪಂದ್ಯ: ಸಂಜೆ 7.30ಕ್ಕೆ

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!