ಪರ್ತ್: ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ‘ಗ್ರ್ಯಾಂಡ್ ಕಮ್‌ಬ್ಯಾಕ್’ ಪಾರ್ಟಿಯನ್ನು ಆಸ್ಟ್ರೇಲಿಯಾದ ತಾರಾ ವೇಗಿಗಳಾದ ಜೋಶ್ ಹೇಜಲ್‌ವುಡ್ ಹಾಗೂ ಮಿಚೆಲ್ ಸ್ಟಾರ್ಕ್ ಹಾಳು ಮಾಡಿದರು. 7 ತಿಂಗಳ ಬಳಿಕ ಭಾರತ ತಂಡದ ಜೆರ್ಸಿಯಲ್ಲಿ ಕಾಣಿಸಿಕೊಂಡ ರೋಹಿತ್ ಹಾಗೂ ಕೊಹ್ಲಿಯ ಬ್ಯಾಟಿಂಗ್ ಅಬ್ಬರ ನೋಡಲು ಉತ್ಸುಕಗೊಂಡಿದ್ದ ಅಭಿಮಾನಿಗಳಿಗೆ ನಿರಾಸೆಯಾಯಿತು. ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ 8, ಕೊಹ್ಲಿ ಸೊನ್ನೆಗೆ ಔಟಾದರು. ಮಳೆ ಬಾಧಿತ ಪಂದ್ಯದಲ್ಲಿ ಆಸ್ಟ್ರೇಲಿಯಾ ಡಕ್ವರ್ತ್ ಲೂಯಿಸ್ ನಿಮಯದನ್ವಯ 7 ವಿಕೆಟ್ ಜಯ ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಸರಣಿಯಲ್ಲಿ ಇನ್ನೆರಡು ಪಂದ್ಯ ಬಾಕಿ ಇದ್ದು, ಆ ಪಂದ್ಯಗಳಲ್ಲಾದರೂ ಭಾರತದ ದಿಗ್ಗಜ ಆಟಗಾರರಿಬ್ಬರು ಅಬ್ಬರಿಸುತ್ತಾರಾ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.
ಟಾಸ್ ಗೆದ್ದು ಆಸೀಸ್, ಭಾರತವನ್ನು ಮೊದಲು ಬ್ಯಾಟಿಂಗ್‌ಗಿಳಿಸಿತು. ಮಳೆಯಿಂದಾಗಿ ಮೊದಲ ಬಾರಿಗೆ ಆಟ ನಿಲ್ಲುವ ವೇಳೆಗೆ ರೋಹಿತ್, ಕೊಹ್ಲಿ ಜೊತೆ ಮೊದಲ ಬಾರಿಗೆ ತಂಡ ಮುನ್ನಡೆಸಿದ ಶುಭ್‌ಮನ್ ಗಿಲ್ (10) ಸಹ ಪೆವಿಲಿಯನ್ ಸೇರಿಕೊಂಡರು.
ರೋಹಿತ್‌ರನ್ನು ಹೇಜಲ್‌ವುಡ್ ಔಟ್ ಮಾಡಿದರೆ, ಕೊಹ್ಲಿಯ ವಿಕೆಟ್ ಸ್ಟಾರ್ಕ್ ಪಾಲಾಯಿತು. ಆ ಬಳಿಕ ಇನ್ನೂ 3 ಬಾರಿ ಮಳೆಯಿಂದಾಗಿ ಆಟ ಸ್ಥಗಿತಗೊಂಡಿತು. ಕೊನೆಗೆ ತಲಾ 26 ಓವರ್‌ಗೆ ಪಂದ್ಯವನ್ನು ಸೀಮಿತಗೊಳಿಸಲಾಯಿತು. ಭಾರತ 9 ವಿಕೆಟ್‌ಗೆ 136 ರನ್ ಗಳಿಸಿತು. ರಾಹುಲ್ 38, ಅಕ್ಷರ್ 31, ನಿತೀಶ್ ರೆಡ್ಡಿ ಔಟಾಗದೆ 19 ರನ್ ಕೊಡುಗೆ ನೀಡಿದರು.
ಡಕ್ವರ್ತ್ ಲೂಯಿಸ್ ನಿಯಮದನ್ವಯ ಆಸೀಸ್‌ಗೆ 26 ಓವರಲ್ಲಿ 131 ರನ್‌ಗಳ ಸುಲಭ ಗುರಿ ದೊರೆಯಿತು. ತಂಡಕ್ಕೆ ಆಸೀಸ್‌ಗೆ ನಾಯಕ ಮಿಚೆಲ್ ಮಾರ್ಷ್ ಆಸರೆಯಾದರು. ಔಟಾಗದೆ 46 ರನ್ ಗಳಿಸಿದರು. ಜೋಶ್ ಫಿಲಿಪಿ 37, ಮ್ಯಾಟ್ ರೆನ್ಶಾ ಔಟಾಗದೆ 21 ರನ್ ಗಳಿಸಿದ ಪರಿಣಾಮ, ಆಸೀಸ್ 21.1 ಓವರಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಸ್ಕೋರ್: ಭಾರತ 26 ಓವರಲ್ಲಿ 136/9 (ರಾಹುಲ್ 38, ಅಕ್ಷರ್ 31, ಹೇಜಲ್‌ವುಡ್ 2-20), ಆಸ್ಟ್ರೇಲಿಯಾ 21.1 ಓವರಲ್ಲಿ 131/3 (ಮಾರ್ಷ್ 46*, ಫಿಲಿಪಿ 37, ಅಕ್ಷರ್ 1-19) ಪಂದ್ಯಶ್ರೇಷ್ಠ: ಮಾರ್ಷ್
09ನೇ ನಾಯಕ
ಮೂರೂ ಮಾದರಿಯಲ್ಲಿ ತಾವು ನಾಯಕರಾಗಿ ಆಡಿದ ಮೊದಲ ಪಂದ್ಯದಲ್ಲಿ ಸೋಲು ಕಂಡ ವಿಶ್ವದ 9ನೇ ನಾಯಕ ಗಿಲ್. ಭಾರತದ 2ನೇ ನಾಯಕ. ಕೊಹ್ಲಿ ಮೊದಲಿಗ.
01ನೇ ಸೋಲು
2025ರಲ್ಲಿ ಭಾರತ ತಂಡ ಏಕದಿನ ಕ್ರಿಕೆಟ್‌ನಲ್ಲಿ ಅನುಭವಿಸಿದ ಮೊದಲ ಸೋಲು ಇದು. ಈ ವರ್ಷ ಆಡಿದ 9 ಏಕದಿನ ಪಂದ್ಯಗಳಲ್ಲಿ ಭಾರತ 8ರಲ್ಲಿ ಗೆದ್ದಿದೆ.