ಚೊಚ್ಚಲ ಒಲಿಂಪಿಕ್ಸ್‌ ಸಿಂಗಲ್ಸ್‌ನಲ್ಲಿ ಚಿನ್ನ ಗೆಲ್ಲುವ ಸರ್ಬಿಯಾದ ಜೋಕೋವಿಚ್ ಕನಸು ಕೊನೆಗೂ ನನಸು!

KannadaprabhaNewsNetwork | Updated : Aug 05 2024, 04:25 AM IST

ಸಾರಾಂಶ

ಫೈನಲ್‌ನಲ್ಲಿ ಆಲ್ಕರಜ್‌ ವಿರುದ್ಧ ಸರ್ಬಿಯಾದ ಜೋಕೋವಿಚ್‌ಗೆ ರೋಚಕ ಗೆಲುವು. ಈ ಮೂಲಕ ಒಲಿಂಪಿಕ್ಸ್‌ ಸಿಂಗಲ್ಸ್‌ನಲ್ಲಿ 1908ರ ಬಳಿಕ ಈ ಸಾಧನೆ ಮಾಡಿದ ಅತಿ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಪ್ಯಾರಿಸ್‌: ಟೆನಿಸ್‌ ಲೋಕದ ದಿಗ್ಗಜ ಆಟಗಾರ ನೋವಾಕ್‌ ಜೋಕೋವಿಚ್‌ ಅವರ ಚೊಚ್ಚಲ ಒಲಿಂಪಿಕ್ಸ್‌ ಚಿನ್ನದ ಪದಕದ ಕನಸು ಕೊನೆಗೂ ನನಸಾಗಿದೆ. ಭಾನುವಾರ ಪ್ಯಾರಿಸ್‌ ಕ್ರೀಡಾಕೂಟದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಯುವ ತಾರೆ ಕಾರ್ಲೊಸ್‌ ಆಲ್ಕರಜ್‌ ವಿರುದ್ಧ 37ರ ಜೋಕೋ 7-6(3), 7-6(2) ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು.24 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ಜೋಕೋವಿಚ್‌ 2008ರ ಒಲಿಂಪಿಕ್ಸ್‌ನಲ್ಲೇ ಕಂಚಿನ ಪದಕ ಗೆದ್ದಿದ್ದರು. 2008, 2012 ಹಾಗೂ 2020ರಲ್ಲಿ ಸೆಮಿಫೈನಲ್‌ನಲ್ಲಿ ಸೋತಿದ್ದ ಅವರು ಈ ಬಾರಿ ಚಿನ್ನ ಗೆದ್ದಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ ಸಿಂಗಲ್ಸ್‌ನಲ್ಲಿ 1908ರ ಬಳಿಕ ಈ ಸಾಧನೆ ಮಾಡಿದ ಅತಿ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಇಂದಿನಿಂದ ಕುಸ್ತಿ ಸ್ಪರ್ಧೆಗಳು: ಭಾರತೀಯರ ಮೇಲೆ ನಿರೀಕ್ಷೆ

ಪ್ಯಾರಿಸ್‌ ಒಲಿಂಪಿಕ್ಸ್‌ನ ಕುಸ್ತಿ ಸ್ಪರ್ಧೆಗಳು ಸೋಮವಾರದಿಂದ ಆರಂಭಗೊಳ್ಳಲಿದ್ದು, ಭಾರತದ 6 ಮಂದಿ ಕಣಕ್ಕಿಳಿಯಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ 5 ಹಾಗೂ ಪುರುಷರ ವಿಭಾಗದಲ್ಲಿ ಒಬ್ಬ ಕುಸ್ತಿ ಸ್ಪರ್ಧಿಸಲಿದ್ದು, ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ವಿನೇಶ್‌ ಫೋಗಟ್‌ ಮೇಲೆ ಎಲ್ಲರ ಕಣ್ಣಿದ್ದು, ಕಳೆದ ವರ್ಷ ಪೂರ್ತಿ ಪ್ರತಿಭಟನೆ, ಹೋರಾಟದಲ್ಲೇ ಸಮಯ ಕಳೆದಿರುವ ಅವರು ಒಲಿಂಪಿಕ್ಸ್‌ ಸ್ಪರ್ಧೆಗೆ ಎಷ್ಟರ ಮಟ್ಟಿಗೆ ಸಜ್ಜಾಗಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. 

ವಿನೇಶ್‌ 50 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. 68 ಕೆ.ಜಿ. ವಿಭಾಗದಲ್ಲಿ ನಿಶಾ ದಹಿಯಾ, 53 ಕೆ.ಜಿ. ವಿಭಾಗದಲ್ಲಿ ಅಂತಿಮ್‌ ಪಂಘಲ್‌, 57 ಕೆ.ಜಿ. ವಿಭಾಗದಲ್ಲಿ ಅನ್ಶು ಮಲಿಕ್‌, 76 ಕೆ.ಜಿ. ವಿಭಾಗದಲ್ಲಿ ರೀತಿಕಾ ಹೂಡಾ ಸ್ಪರ್ಧಿಸಲಿದ್ದಾರೆ. ಕಳೆದ ಬಾರಿ ಕುಸ್ತಿಯಲ್ಲೇ ಭಾರತಕ್ಕೆ 2 ಪದಕ ದೊರೆತಿತ್ತು. ಆದರೆ ಈ ಬಾರಿ ಕೇವಲ ಒಬ್ಬ ಸ್ಪರ್ಧಿ ಮಾತ್ರ ಇದ್ದಾರೆ. 57 ಕೆ.ಜಿ. ವಿಭಾಗದಲ್ಲಿ ಅಮನ್‌ ಶೆರಾವತ್‌ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

Share this article