ರಿಷಭ್‌ಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸಲು ವೈದ್ಯರಿಗೆ ಸೂಚಿಸಿದ್ದ ಮೋದಿ!

KannadaprabhaNewsNetwork | Updated : Jul 06 2024, 06:07 AM IST

ಸಾರಾಂಶ

ಅಗತ್ಯವಿದ್ದರೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸಿ ಎಂದು ಹೇಳಿದ್ದೆ. ಬಳಿಕ ನಿಮ್ಮ ತಾಯಿಯ ಜೊತೆಗೂ ಮಾತನಾಡಿದ್ದೆ’ ಎಂದಿದ್ದಾರೆ.

ನವದೆಹಲಿ: 2022ರ ಡಿಸೆಂಬರ್‌ನಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದ ಭಾರತದ ತಾರಾ ಕ್ರಿಕೆಟಿಗ ರಿಷಭ್‌ ಪಂತ್‌ಗೆ ವಿದೇಶದಲ್ಲಿ ಚಿಕಿತ್ಸೆ ಅಗತ್ಯವಿದ್ದರೆ ಕೊಡಿಸಿ ಎಂದು ವೈದ್ಯರಲ್ಲಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದರು. 

ಇದನ್ನು ಸ್ವತಃ ಮೋದಿ ಗುರುವಾರ ಭಾರತ ತಂಡದ ಆಟಗಾರರೊಂದಿಗೆ ನಡೆಸಿದ ಸಂವಾದದ ವೇಳೆ ಬಹಿರಂಗಪಡಿಸಿದ್ದಾರೆ. ‘ರಿಷಭ್‌, ನೀವು ಅಪಘಾತದ ಬಳಿಕ ತುಂಬಾ ಕಷ್ಟದಿಂದ ಚೇತರಿಸಿಕೊಂಡಿದ್ದೀರಿ. ನೀವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ವೈದ್ಯರ ಬಳಿ ಮಾತನಾಡಿದ್ದೆ. ಅಗತ್ಯವಿದ್ದರೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸಿ ಎಂದು ಹೇಳಿದ್ದೆ. ಬಳಿಕ ನಿಮ್ಮ ತಾಯಿಯ ಜೊತೆಗೂ ಮಾತನಾಡಿದ್ದೆ’ ಎಂದಿದ್ದಾರೆ. ಭೀಕರ ಅಪಘಾತಕ್ಕೆ ಒಳಗಾಗಿದ್ದ ರಿಷಭ್‌, ಇತ್ತೀಚೆಗೆ ಐಪಿಎಲ್‌ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದರು.

ಒಲಿಂಪಿಕ್ಸ್‌ಗೆ ಬಿಡ್‌ ಸಲ್ಲಿಸಲು ನೆರವಾಗಿ: ಮೋದಿ ಮನವಿ

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಕ್ರೀಡಾಪಟುಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಮನವಿ ಮಾಡಿದ್ದು, ‘2036ರ ಒಲಿಂಪಿಕ್ಸ್‌ಗೆ ಬಿಡ್‌ ಸಲ್ಲಿಸಲು ನೀವು ನೆರವು ನೀಡಬೇಕು’ ಎಂದಿದ್ದಾರೆ.ಗುರುವಾರ ಕ್ರೀಡಾಪಟುಗಳ ಜೊತೆ ಮೋದಿ ಅವರು ಸಂವಾದ ನಡೆಸಿದ್ದು, ಅದರ ವಿಡಿಯೋವನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. 

ಸಂವಾದದ ವೇಳೆ ಮೋದಿ, ‘2036ರ ಒಲಿಂಪಿಕ್ಸ್‌ಗ ಆತಿಥ್ಯ ಹಕ್ಕು ನಮಗೆ ಸಿಗುವ ವಿಶ್ವಾಸವಿದೆ. ಇದು ದೇಶದಲ್ಲಿ ಕ್ರೀಡೆಯ ಮತ್ತಷ್ಟು ಬೆಳವಣಿಗೆಗೆ ನೆರವಾಗಲಿದೆ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ನೀವು, ಬಿಡುವಿರುವಾಗ ಅಲ್ಲಿನ ಸಿದ್ಧತೆ, ವ್ಯವಸ್ಥೆಗಳನ್ನು ಗಮನಿಸಿ. ಒಲಿಂಪಿಕ್ಸ್‌ ಆಯೋಜನೆಗೆ ಬೇಕಿರುವ ಅಂಶಗಳನ್ನು ಗಮನಿಸಿ ತಮ್ಮೊಂದಿಗೆ ಹಂಚಿಕೊಳ್ಳಿ. ನೀವು ಕೊಡುವ ಮಾಹಿತಿ ನಮಗೆ ಒಲಿಂಪಿಕ್ಸ್‌ ಆತಿಥ್ಯ ವಹಿಸಲು ಮತ್ತಷ್ಟು ನೆರವಾಗಲಿದೆ’ ಎಂದರು.

2036ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಭಾರತ ಉತ್ಸುಕವಾಗಿದ್ದು, ಮುಂದಿನ ವರ್ಷ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಯು ಆತಿಥ್ಯ ದೇಶವನ್ನು ಘೋಷಿಸುವ ಸಾಧ್ಯತೆಯಿದೆ.

Share this article