ಪ್ರೊ ಕಬಡ್ಡಿ: ಈ ಸಲ ಬೆಂಗಳೂರು ಬುಲ್ಸ್‌ ಮೊದಲ ಪಂದ್ಯ ಯಾವಾಗ, ಯಾರ ವಿರುದ್ಧ ಗೊತ್ತಾ?

KannadaprabhaNewsNetwork | Updated : Sep 10 2024, 01:32 AM IST

ಸಾರಾಂಶ

ಟೂರ್ನಿಯಲ್ಲಿ ಒಟ್ಟು 12 ತಂಡಗಳಿದ್ದು, ಪ್ರತಿ ತಂಡಗಳು ಲೀಗ್ ಹಂತದಲ್ಲಿ ಇತರ 11 ತಂಡಗಳ ವಿರುದ್ಧ ಡಬಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲಿ ಪರಸ್ಪರ 2 ಬಾರಿ ಸೆಣಸಾಡಲಿವೆ.

ನವದೆಹಲಿ: 11ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನ ವೇಳಾಪಟ್ಟಿಯನ್ನು ಸೋಮವಾರ ಆಯೋಜಕರು ಪ್ರಕಟಿಸಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ಅ.18ರಂದು ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಹಾಗೂ ತೆಲುಗು ಟೈಟಾನ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ದಿನದ 2ನೇ ಪಂದ್ಯದಲ್ಲಿ ಯು ಮುಂಬಾ ಹಾಗೂ ದಬಾಂಗ್‌ ಡೆಲ್ಲಿ ಸೆಣಸಾಡಲಿವೆ.ಈ ಬಾರಿ ಟೂರ್ನಿ 3 ನಗರಗಳಲ್ಲಿ ನಡೆಯಲಿವೆ. ಮೊದಲ ಚರಣ ಹೈದರಾಬಾದ್‌ನಲ್ಲಿ ಶುರುವಾಗಲಿದ್ದು, ನ.9ರ ವರೆಗಿನ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಬಳಿಕ ನ.10ರಿಂದ ಡಿ.1ರ ವರೆಗೆ ನೋಯ್ಡಾ ಹಾಗೂ ಡಿ.3ರಿಂದ 24ರ ವರೆಗೆ ಪುಣೆ ಆತಿಥ್ಯ ವಹಿಸಲಿವೆ. ಟೂರ್ನಿಯ ಮೊದಲ ಸದ್ಯ ಲೀಗ್‌ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಪ್ಲೇ-ಆಫ್‌ ವೇಳಾಪಟ್ಟಿ ಇನ್ನಷ್ಟೇ ಪ್ರಕಟಿಸಬೇಕಿದೆ.ಟೂರ್ನಿಯಲ್ಲಿ ಒಟ್ಟು 12 ತಂಡಗಳಿದ್ದು, ಪ್ರತಿ ತಂಡಗಳು ಲೀಗ್ ಹಂತದಲ್ಲಿ ಇತರ 11 ತಂಡಗಳ ವಿರುದ್ಧ ಡಬಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲಿ ಪರಸ್ಪರ 2 ಬಾರಿ ಸೆಣಸಾಡಲಿವೆ. ಅಗ್ರ-6 ತಂಡಗಳು ಪ್ಲೇ-ಆಫ್‌ ಪ್ರವೇಶಿಸಲಿವೆ. ಕಳೆದ ಬಾರಿ ಪುಣೇರಿ ಪಲ್ಟನ್‌ ಚಾಂಪಿಯನ್‌ ಆಗಿತ್ತು.ವೀಸಾ ಸಮಸ್ಯೆ ಇತ್ಯರ್ಥ: ಭಾರತಕ್ಕೆ ಬಂದ ಪಾಕ್‌ ಕಿರಿಯರ ಅಥ್ಲೆಟಿಕ್ಸ್‌ ತಂಡ

ಲಾಹೋರ್‌: ವೀಸಾ ಸಮಸ್ಯೆ ಇತ್ಯರ್ಥಗೊಂಡ ಕಾರಣ ದಕ್ಷಿಣ ಏಷ್ಯಾ ಅಥ್ಲೆಟಿಕ್ಸ್‌ ಫೆಡರೇಷನ್‌(ಸ್ಯಾಫ್‌) ಕಿರಿಯರ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ 12 ಮಂದಿ ಕ್ರೀಡಾಪಟುಗಳ ತಂಡ ಸೋಮವಾರ ಭಾರತಕ್ಕೆ ಆಗಮಿಸಿತು. ಚಾಂಪಿಯನ್‌ಶಿಪ್‌ ಸೆ.11ರಿಂದ 13ರ ವರೆಗೆ ಚೆನ್ನೈನಲ್ಲಿ ನಡೆಯಲಿದೆ. ಶನಿವಾರ ಭಾರತೀಯ ಹೈ ಕಮಿಷನ್‌ ಪಾಕ್‌ ಅಥ್ಲೀಟ್‌ಗಳಿಗೆ ವೀಸಾ ಒದಗಿಸಿತ್ತು. ಸೋಮವಾರ ವಾಘಾ ಗಡಿ ಮೂಲಕ ಭಾರತಕ್ಕೆ ಬಂದ ಕ್ರೀಡಾಪಟುಗಳು ಹಾಗೂ ಅಧಿಕಾರಿಗಳು ಅಮೃತಸರಕ್ಕೆ ತೆರಳಿದರು. ಬಳಿಕ ಅಲ್ಲಿಂದ ವಿಮಾನದಲ್ಲಿ ಚೆನ್ನೈಗೆ ಆಗಮಿಸಿದ್ದಾರೆ.

Share this article