112 ರನ್‌ ಗುರಿ ಬೆನ್ನತ್ತಲಾಗದೆ ಸೋತ ಕೆಕೆಆರ್‌!

KannadaprabhaNewsNetwork |  
Published : Apr 16, 2025, 12:34 AM IST
ಚಹಲ್ | Kannada Prabha

ಸಾರಾಂಶ

ಕಳೆದ ವರ್ಷ ಈಡನ್‌ ಗಾರ್ಡನ್ಸ್‌ನಲ್ಲಿ ಕೋಲ್ಕತಾ ನೈಟ್‌ರೈಡರ್ಸ್‌ ವಿರುದ್ಧ ಆಡಿದಾಗ, ಐಪಿಎಲ್‌ ಇತಿಹಾಸದಲ್ಲೇ ಅತಿದೊಡ್ಡ ಮೊತ್ತವನ್ನು ಬೆನ್ನತ್ತಿ ಗೆದ್ದ ದಾಖಲೆ ಬರೆದಿದ್ದ ಪಂಜಾಬ್‌ ಕಿಂಗ್ಸ್‌, ಈ ಬಾರಿ ಐಪಿಎಲ್‌ ಇತಿಹಾಸದಲ್ಲೇ ಅತಿ ಕಡಿಮೆ ಮೊತ್ತವನ್ನು ರಕ್ಷಿಸಿಕೊಂಡ ದಾಖಲೆ ನಿರ್ಮಿಸಿದೆ.

- ಐಪಿಎಲ್‌ ಇತಿಹಾಸದಲ್ಲೇ ಅತಿಕಡಿಮೆ ಮೊತ್ತ ರಕ್ಷಿಸಿಕೊಂಡ ದಾಖಲೆ - ಪಂಜಾಬ್‌ಗೆ 16 ರನ್‌ ರೋಚಕ ಗೆಲುವು । ಬ್ಯಾಟ್‌ ಮಾಡಲು ಕಷ್ಟ ಎನಿಸಿದ ಪಿಚ್‌ನಲ್ಲಿ ಪಂಜಾಬ್‌ 111ಕ್ಕೆ ಆಲೌಟ್‌- ಕೆಕೆಆರ್‌ ಕಳಪೆ ಬ್ಯಾಟಿಂಗ್‌: 95 ರನ್‌ಗೆ ಆಲೌಟ್‌ । ಚಹಲ್‌ಗೆ 4, ಯಾನ್ಸನ್‌ಗೆ 3 ವಿಕೆಟ್‌ । 4ನೇ ಸ್ಥಾನಕ್ಕೆ ಪಂಜಾಬ್‌ ಮುಲ್ಲಾನ್‌ಪುರ: ಕಳೆದ ವರ್ಷ ಈಡನ್‌ ಗಾರ್ಡನ್ಸ್‌ನಲ್ಲಿ ಕೋಲ್ಕತಾ ನೈಟ್‌ರೈಡರ್ಸ್‌ ವಿರುದ್ಧ ಆಡಿದಾಗ, ಐಪಿಎಲ್‌ ಇತಿಹಾಸದಲ್ಲೇ ಅತಿದೊಡ್ಡ ಮೊತ್ತವನ್ನು ಬೆನ್ನತ್ತಿ ಗೆದ್ದ ದಾಖಲೆ ಬರೆದಿದ್ದ ಪಂಜಾಬ್‌ ಕಿಂಗ್ಸ್‌, ಈ ಬಾರಿ ಐಪಿಎಲ್‌ ಇತಿಹಾಸದಲ್ಲೇ ಅತಿ ಕಡಿಮೆ ಮೊತ್ತವನ್ನು ರಕ್ಷಿಸಿಕೊಂಡ ದಾಖಲೆ ನಿರ್ಮಿಸಿದೆ.

ಮಂಗಳವಾರ ನವ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿದ ಪಂಜಾಬ್‌, ಬ್ಯಾಟಿಂಗ್‌ ವೈಫಲ್ಯದಿಂದಾಗಿ 15.3 ಓವರಲ್ಲಿ 111 ರನ್‌ಗೆ ಆಲೌಟ್‌ ಆಯಿತು.

ಸುಲಭ ಗುರಿ ಬೆನ್ನತ್ತಿದ ಹಾಲಿ ಚಾಂಪಿಯನ್‌ ಕೆಕೆಆರ್‌, ಪಂಜಾಬ್‌ನ ಮನಮೋಹಕ ಬೌಲಿಂಗ್‌ ದಾಳಿ ಎದುರು, 15.1 ಓವರಲ್ಲಿ ಕೇವಲ 95 ರನ್‌ಗೆ ಆಲೌಟ್‌ ಆಯಿತು. ಇದರ ಫಲವಾಗಿ, ಪಂಜಾಬ್‌ 2 ಅಂಕ ಸಂಪಾದಿಸಿ, ತನ್ನ ಒಟ್ಟು ಅಂಕ ಗಳಿಕೆಯನ್ನು 8ಕ್ಕೆ ಹೆಚ್ಚಿಸಿಕೊಂಡಿತು. ಅಲ್ಲದೇ, ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತು. ಸ್ಫೋಟಕ ಆರಂಭ: ಪ್ರಿಯಾನ್ಶ್‌ ಆರ್ಯಾ (22) ಹಾಗೂ ಪ್ರಭ್‌ಸಿಮ್ರನ್‌ ಸಿಂಗ್‌ (30) ಮೊದಲ ವಿಕೆಟ್‌ಗೆ 39 ರನ್‌ ಸೇರಿಸಿದರು. ಆದರೆ ಇವರಿಬ್ಬರ ಜೊತೆಯಾಟವನ್ನು ಮುರಿದಿದ್ದು ವೇಗಿ ಹರ್ಷಿತ್‌ ರಾಣಾ. ಶ್ರೇಯಸ್‌ ಅಯ್ಯರ್‌ (0), ಜೋಶ್‌ ಇಂಗ್ಲಿಸ್‌ (2) ಸಹ ಬೇಗನೆ ಔಟಾದರು. ದಿಢೀರನೆ ಪಂಜಾಬ್ 54 ರನ್‌ಗೆ 4 ವಿಕೆಟ್‌ ಕಳೆದುಕೊಂಡಿತು.

86 ರನ್‌ಗೆ 6 ವಿಕೆಟ್‌ ಕಳೆದುಕೊಂಡಿದ್ದ ತಂಡ, ಚೇತರಿಕೆ ಕಾಣುವುದು ಕಷ್ಟ ಎನಿಸಿತ್ತು. ಕೆಳ ಕ್ರಮಾಂಕದ ಬ್ಯಾಟರ್‌ಗಳು ಸಹ ದೊಡ್ಡ ಕೊಡುಗೆ ನೀಡಲಿಲ್ಲ. ಆದರೂ, ಶಶಾಂಕ್‌ ಸಿಂಗ್‌ (18) ಹಾಗೂ ಕ್ಸೇವಿಯರ್‌ ಬಾರೆಟ್‌ (11)ರ ಹೋರಾಟದದಿಂದ ತಂಡದ ಮೊತ್ತ 100 ರನ್‌ ದಾಟಿತು. ದಿಢೀರ್‌ ಕುಸಿತ: ಸುಲಭ ಗೆಲುವು ಸಾಧಿಸಲು ಕಣಕ್ಕಿಳಿದ ಕೆಕೆಆರ್‌, ಮೊದಲ ಓವರಲ್ಲೇ ಸುನಿಲ್‌ ನರೈನ್‌ ವಿಕೆಟ್‌ ಕಳೆದುಕೊಂಡಿತು. 3ನೇ ಓವರಲ್ಲಿ ಕ್ವಿಂಟನ್‌ ಡಿ ಕಾಕ್‌ ವಿಕೆಟ್‌ ಕಳೆದುಕೊಂಡ ಕೆಕೆಆರ್‌ಗೆ ಆಸರೆಯಾಗಿದ್ದು, ಅಜಿಂಕ್ಯ ರಹಾನೆ (17) ಹಾಗೂ ಅಂಗ್‌ಕೃಷ್‌ ರಘುವಂಶಿ (37). ಆದರೂ, ವಿಕೆಟ್‌ಗಳನ್ನು ಕಾಪಾಡಿಕೊಳ್ಳಲು ಕೆಕೆಆರ್‌ ವಿಫಲವಾಯಿತು. 15 ಓವರಲ್ಲಿ ತಂಡದ ಇನ್ನಿಂಗ್ಸ್‌ ಮುಕ್ತಾಯಗೊಂಡಿತು. ಸ್ಕೋರ್‌: ಪಂಜಾಬ್‌ 15.3 ಓವರಲ್ಲಿ 111/10 (ಪಭ್‌ಸಿಮ್ರನ್‌ 30, ಪ್ರಿಯಾನ್ಶ್‌ 22, ರಾಣಾ 3-25), ಕೆಕೆಆರ್‌ 15.1 ಓವರಲ್ಲಿ 95/10 (ರಘುವಂಶಿ 37, ರಹಾನೆ 17, ಚಹಲ್‌ 4-28, ಯಾನ್ಸನ್‌ 3-17)

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!