ಇಂದಿನಿಂದ ರಣಜಿ ಟ್ರೋಫಿ ಸೆಮಿ ಫೈನಲ್‌ ಪಂದ್ಯಗಳು ಆರಂಭ

KannadaprabhaNewsNetwork | Updated : Mar 02 2024, 09:24 AM IST

ಸಾರಾಂಶ

2023-24ನೇ ಸಾಲಿನ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯಗಳು ಶನಿವಾರದಿಂದ ಆರಂಭಗೊಳ್ಳಲಿವೆ. ಫೈನಲ್‌ಗೇರಲು ಮುಂಬೈ ವಿರುದ್ಧ ತಮಿಳುನಾಡು, ವಿದರ್ಭ ವಿರುದ್ಧ ಮಧ್ಯಪ್ರದೇಶ ಸೆಣಸಾಟ ನಡೆಸಲಿವೆ.

ಮುಂಬೈ/ನಾಗ್ಪುರ: 2023-24ನೇ ಸಾಲಿನ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯಗಳು ಶನಿವಾರದಿಂದ ಆರಂಭಗೊಳ್ಳಲಿವೆ. 41 ಬಾರಿ ಚಾಂಪಿಯನ್‌ ಮುಂಬೈ ತಮಿಳುನಾಡು ವಿರುದ್ಧ ಮುಂಬೈನಲ್ಲಿ ಸೆಣಸಲಿದ್ದು, ಮತ್ತೊಂದು ಸಮೆಫೈನಲ್‌ನಲ್ಲಿ ವಿದರ್ಭ ತಂಡ ನಾಗ್ಪುರದಲ್ಲಿ ಮಧ್ಯಪ್ರದೇಶದ ಸವಾಲನ್ನು ಎದುರಿಸಲಿದೆ.

ಎರಡೂ ಪಂದ್ಯಗಳಲ್ಲಿ ತಾರಾ ಆಟಗಾರರು ಕಣಕ್ಕಿಳಿಯಲಿದ್ದು, ಭಾರಿ ಕುತೂಹಲ ಕೆರಳಿಸಿದೆ. ಪ್ರಮುಖವಾಗಿ ಮುಂಬೈ ತಂಡದಲ್ಲಿ ಶ್ರೇಯಸ್‌ ಅಯ್ಯರ್‌ ಆಡಲಿದ್ದು, ಇತ್ತೀಚೆಗಷ್ಟೇ ಬಿಸಿಸಿಐ ಕೇಂದ್ರ ಗುತ್ತಿಗೆ ಕಳೆದುಕೊಂಡಿರುವ ಶ್ರೇಯಸ್‌ ತಮ್ಮ ಆಟದ ಮೂಲಕವೇ ಉತ್ತರಿಸಲು ಎದುರು ನೋಡುತ್ತಿದ್ದಾರೆ. 

ಯುವ ಆಟಗಾರ ಮುಶೀರ್‌ ಖಾನ್‌ ಮೇಲೆ ಎಲ್ಲರ ಕಣ್ಣಿದೆ. ಇನ್ನು ಭಾರತ ತಂಡದಿಂದ ಹೊರಬಿದ್ದಿರುವ ವಾಷಿಂಗ್ಟನ್‌ ಸುಂದರ್‌ ತಮಿಳುನಾಡು ಪರ ಆಡಲಿದ್ದಾರೆ. 

ನಾಯಕ ಆರ್‌.ಸಾಯಿ ಕಿಶೋರ್‌ (47 ವಿಕೆಟ್‌) ಹಾಗೂ ಎಸ್‌.ಅಜಿತ್‌ ರಾಮ್‌ (41) ಮೇಲೆ ತಮಿಳುನಾಡು ದೊಡ್ಡ ನಿರೀಕ್ಷೆ ಇರಿಸಿದೆ. 

ಮತ್ತೊಂದೆಡೆ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕವನ್ನು ಸೋಲಿಸಿದ ವಿದರ್ಭ ತನ್ನ ತಾರಾ ಆಟಗಾರರಾದ ಅಥರ್ವ ತೈಡೆ, ಆದಿತ್ಯ ಸರ್ವಟೆ, ಕರುಣ್‌ ನಾಯರ್‌ ಮೇಲೆ ವಿಶ್ವಾಸವಿರಿಸಿದರೆ, ಮಧ್ಯಪ್ರದೇಶ ವೆಂಕಟೇಶ್‌ ಅಯ್ಯರ್, ಹಿಮಾನ್ಶು ಮಂತ್ರಿ, ಆವೇಶ್‌ ಖಾನ್‌ರಂತಹ ಅನುಭವಿಗಳನ್ನು ನೆಚ್ಚಿಕೊಂಡಿದೆ.

Share this article