ಟಿ 20 ಬಳಿಕ ಏಕದಿನದಲ್ಲೂ ಭಾರತದ ತಾರಾ ಆಲ್ರೌಂಡ್‌ ರವೀಂದ್ರ ಜಡೇಜಾ ಕ್ರಿಕೆಟ್‌ ಬದುಕು ಮುಕ್ತಾಯ?

KannadaprabhaNewsNetwork | Updated : Jul 20 2024, 04:31 AM IST

ಸಾರಾಂಶ

ಅಕ್ಷರ್‌ಗೆ ಹೆಚ್ಚಿನ ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಜಡೇಜಾರನ್ನು ಬಿಸಿಸಿಐ ಮುಂದುವರಿಸುವ ಸಾಧ್ಯತೆಯಿದೆ

ನವದೆಹಲಿ: ಭಾರತದ ತಾರಾ ಆಲ್ರೌಂಡ್‌ ರವೀಂದ್ರ ಜಡೇಜಾ ಮುಂಬರುವ ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಆಯ್ಕೆಯಾಗಿಲ್ಲ. ಇದರೊಂದಿಗೆ ಅವರ ಏಕದಿನ ಕ್ರಿಕೆಟ್‌ ಬದುಕು ಬಹುತೇಕ ಮುಕ್ತಾಯಗೊಂಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. 

ಬದಲಾಗಿ ಅಕ್ಷರ್‌ ಪಟೇಲ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.ಜಡೇಜಾ 197 ಏಕದಿನ ಪಂದ್ಯಗಳನ್ನಾಡಿದ್ದು, 2756 ರನ್‌ ಕಲೆಹಾಕಿದ್ದಾರೆ. 220 ವಿಕೆಟ್‌ಗಳನ್ನೂ ಪಡೆದಿದ್ದಾರೆ. ಏಕದಿನದಲ್ಲಿ ಅವರ ದಾಖಲೆ ಉತ್ತಮವಾಗಿದ್ದರೂ 2025ರ ಚಾಂಪಿಯನ್ಸ್‌ ಟ್ರೋಫಿ, 2027ರ ಏಕದಿನ ವಿಶ್ವಕಪ್‌ ದೃಷ್ಟಿಯಿಂದ ಅಕ್ಷರ್‌ಗೆ ಹೆಚ್ಚಿನ ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. 

ಜೊತೆಗೆ ವಾಷಿಂಗ್ಟನ್‌ ಸುಂದರ್‌ರನ್ನು ಕೂಡಾ 2ನೇ ಆಯ್ಕೆಯ ಸ್ಪಿನ್‌ ಆಲ್ರೌಂಡರ್‌ ಆಗಿ ಬೆಳೆಸಲು ಬಿಸಿಸಿಐ ಚಿಂತನೆ ನಡೆಸುತ್ತಿರುವ ಕಾರಣ ಜಡೇಜಾರ ಏಕದಿನ ಬದುಕು ಅಂತ್ಯವಾಗಿದೆ ಎಂದೇ ಹೇಳಲಾಗುತ್ತಿದೆ. ಆದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಜಡೇಜಾರನ್ನು ಬಿಸಿಸಿಐ ಮುಂದುವರಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. 35 ವರ್ಷದ ಜಡೇಜಾ ಟಿ20 ವಿಶ್ವಕಪ್‌ ಬಳಿಕ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದ್ದರು.

100 ದಿನಗಳಲ್ಲಿ 1 ಲಕ್ಷ ಪ್ರತಿಭೆಗಳ ಗುರುತಿಸುವ ಕೆಲಸ: ಮಾಂಡವೀಯ

ನವದೆಹಲಿ: ಖೇಲೋ ಇಂಡಿಯಾ ಪ್ರತಿಭಾನ್ವೇಷಣೆ ಮೂಲಕ 100 ದಿನಗಳ ಒಳಗೆ 1 ಲಕ್ಷ ಪ್ರತಿಭೆಗಳ ಗುರುತಿಸುವ ಕೆಲಸವಾಗಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಮನ್‌ಸುಖ್‌ ಮಾಂಡವೀಯ ತಿಳಿಸಿದ್ದಾರೆ. ಅವರು ಶುಕ್ರವಾರ ಕೀರ್ತಿ (ಖೇಲೋ ಇಂಡಿಯಾ ರೈಸಿಂಗ್ ಟ್ಯಾಲೆಂಟ್ ಐಡೆಂಟಿಫಿಕೇಶನ್) ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯಡಿ 100 ದಿನಗಳಲ್ಲಿ ಒಂದು ಲಕ್ಷ ಯುವ ಕ್ರೀಡಾಪಟುಗಳನ್ನು ಗುರುತಿಸುವ ಗುರಿಯಿದೆ. 

‘2047ರ ವೇಳೆಗೆ ಭಾರತವನ್ನು ಒಲಿಂಪಿಕ್ಸ್‌ನ ಅಗ್ರ ಐದು ರಾಷ್ಟ್ರಗಳಲ್ಲಿ ಒಂದನ್ನಾಗಿ ಮಾಡಲು ಕೀರ್ತಿ ಯೋಜನೆ ವೇದಿಕೆ. ಭಾರತವು ವೈವಿಧ್ಯತೆಯಿಂದ ಕೂಡಿದ್ದು, ಬುದ್ಧಿಶಕ್ತಿ, ಪ್ರತಿಭೆಗಳಿಗೆ ಕೊರತೆಯಿಲ್ಲ’ ಎಂದರು. ಕೀರ್ತಿ ಯೋಜನೆಯು ಖೇಲೋ ಇಂಡಿಯಾದ ಎಲ್ಲಾ 20 ವಿಭಾಗಗಳನ್ನು ಒಳಗೊಂಡಿವೆ. ಯೋಜನೆಯ ಮೊದಲ ಹಂತವನ್ನು ಮಾ.12ಕ್ಕೆ ಚಂಡೀಗಢದಲ್ಲಿ ಆರಂಭಿಸಲಾಗಿತ್ತು.

Share this article