ಈ ಸಲ ಕಪ್‌ ನಮ್ದೇ: ಅಂತೂ ಇಂತೂ ಕೊನೆಗೂ ಟ್ರೋಫಿ ಗೆದ್ದ ಆರ್‌ಸಿಬಿ!

KannadaprabhaNewsNetwork | Updated : Mar 18 2024, 11:12 AM IST

ಸಾರಾಂಶ

‘ಈ ಸಲ ಕಪ್‌ ನಮ್ದೇ’ ಎನ್ನುತ್ತಿದ್ದ ಆರ್‌ಸಿಬಿಯ ಕೋಟ್ಯಂತರ ಅಭಿಮಾನಿಗಳ ಹಾರೈಕೆ, ಪ್ರಾರ್ಥನೆಗೆ ಕೊನೆಗೂ ಫಲ ಸಿಕ್ಕಿದೆ. ದೀರ್ಘಕಾಲದಿಂದ ಪುರುಷರ ತಂಡಕ್ಕೆ ಗಗನ ಕುಸುಮವಾಗಿದ್ದ ಟ್ರೋಫಿಯನ್ನು ಈ ಬಾರಿ ಮಹಿಳಾ ತಂಡ ಮುಡಿಗೇರಿಸಿಕೊಂಡಿದೆ.

ನವದೆಹಲಿ: ‘ಈ ಸಲ ಕಪ್‌ ನಮ್ದೇ’ ಎನ್ನುತ್ತಿದ್ದ ಆರ್‌ಸಿಬಿಯ ಕೋಟ್ಯಂತರ ಅಭಿಮಾನಿಗಳ ಹಾರೈಕೆ, ಪ್ರಾರ್ಥನೆಗೆ ಕೊನೆಗೂ ಫಲ ಸಿಕ್ಕಿದೆ. ದೀರ್ಘಕಾಲದಿಂದ ಪುರುಷರ ತಂಡಕ್ಕೆ ಗಗನ ಕುಸುಮವಾಗಿದ್ದ ಟ್ರೋಫಿಯನ್ನು ಈ ಬಾರಿ ಮಹಿಳಾ ತಂಡ ಮುಡಿಗೇರಿಸಿಕೊಂಡಿದೆ.

2ನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನಲ್ಲಿ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಫೈನಲ್‌ನಲ್ಲಿ ಸೋಲಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಡಬ್ಲ್ಯುಪಿಎಲ್‌ನಲ್ಲಿ ಚೊಚ್ಚಲ ಬಾರಿ ಫೈನಲ್‌ಗೇರಿದ್ದ ಸ್ಮೃತಿ ಮಂಧನಾ ನಾಯಕತ್ವದ ಆರ್‌ಸಿಬಿ ಟ್ರೋಫಿ ಗೆದ್ದು ಬೀಗಿದರೆ, ಡೆಲ್ಲಿ ಕ್ಯಾಪಿಟಲ್ಸ್‌ ಸತತ 2ನೇ ಬಾರಿಯೂ ಫೈನಲ್‌ನಲ್ಲಿ ಎಡವಿ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಭಾನುವಾರ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿಗೆ ಲಭಿಸಿದ್ದು 8 ವಿಕೆಟ್‌ ರೋಚಕ ಗೆಲುವು.ಪಂದ್ಯ ಆರಂಭವಾದಾಗ ಡೆಲ್ಲಿಯ ಅಬ್ಬರ ಗಮನಿಸಿದರೆ ಪಂದ್ಯವನ್ನು ಆರ್‌ಸಿಬಿ ಗೆಲ್ಲಲಿದೆ ಎಂದು ಯಾರೂ ಭಾವಿಸಿರಲಿಕ್ಕಿಲ್ಲ. 

ಆದರೆ ಪವರ್‌-ಪ್ಲೇ ಬಳಿಕ ಮ್ಯಾಜಿಕ್‌ ಮಾಡಿದ ಆರ್‌ಸಿಬಿ ತಂಡ ಡೆಲ್ಲಿಯನ್ನು ಕೇವಲ 113 ರನ್‌ಗೆ ನಿಯಂತ್ರಿಸಿತು. ಸಣ್ಣ ಗುರಿಯನ್ನು ಲೀಲಾಜಾಲವಾಗಿ ಬೆನ್ನತ್ತಿದ ಆರ್‌ಸಿಬಿ 19.3 ಓವರ್‌ಗಳಲ್ಲಿ ವಿಜಯಮಾಲೆಯನ್ನು ಕೊರಳಿಗೇರಿಸಿಕೊಂಡಿತು.

ನಿಧಾನ ಆರಂಭ: ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಹಾಗೂ ಸೋಫಿ ಡಿವೈನ್‌ ಎಚ್ಚರಿಕೆಯಿಂದಲೇ ಬ್ಯಾಟ್‌ ಬೀಸಿದರು. ಒಂದು ವಿಕೆಟ್‌ ಬಿದ್ದರೂ ಫೈನಲ್‌ ಪಂದ್ಯದ ಒತ್ತಡ ಇತರ ಬ್ಯಾಟರ್‌ಗಳ ಮೇಲೆ ಬೀಳಲಿದೆ ಎಂದು ಅರಿತಿದ್ದ ಆರಂಭಿಕರು ನಿಧಾನವಾಗಿಯೇ ರನ್‌ ವೇಗ ಹೆಚ್ಚಿಸಿದರು. ಪವರ್‌-ಪ್ಲೇ ಮುಕ್ತಾಯಕ್ಕೆ ವಿಕೆಟ್‌ ನಷ್ಟವಿಲ್ಲದೆ 25 ರನ್‌ ಗಳಿಸಿದ್ದ ತಂಡ ಬಳಿಕ ಗೇರ್‌ ಚೇಂಜ್‌ ಮಾಡಿತು. 

ರಾಧಾ ಯಾದವ್‌ ಎಸೆತ 7ನೇ ಓವರಲ್ಲಿ ಡಿವೈಸ್‌ 3 ಬೌಂಡರಿ, 1 ಸಿಕ್ಸರ್‌ ಸಿಡಿಸಿ ತಂಡದ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ನೋಡಿಕೊಂಡರು. ಆದರೆ 32 ರನ್‌ ಗಳಿಸಿ ಡಿವೈನ್‌ ಔಟಾಗುವುದರೊಂದಿಗೆ ಆರ್‌ಸಿಬಿ ಮತ್ತೆ ಒತ್ತಡಕ್ಕೊಳಗಾಯಿತು. 

ಪೆರ್ರಿ ಜೊತೆಗೂಡಿದ ಸ್ಮೃತಿ ನಿಧಾನವಾಗಿಯೇ ರನ್‌ ಗಳಿಸಲು ಶುರುವಿಟ್ಟರು. 39 ಎಸೆತಗಳಲ್ಲಿ 31 ರನ್‌ ಗಳಿಸಿ ಸ್ಮೃತಿ ಔಟಾದ ಬಳಿಕ ಪೆರ್ರಿ(ಔಟಾಗದೆ 35) ಹಾಗೂ ರಿಚಾ ಘೋಷ್‌(ಔಟಾಗದೆ 17) ತಂಡವನ್ನು ಗೆಲುವಿನ ದಡ ಸೇರಿಸಿದರು.

ಸ್ಫೋಟಕ ಆರಂಭ: ಆರ್‌ಸಿಬಿಗೆ ದೊಡ್ಡ ಗುರಿ ನೀಡಬೇಕೆಂಬ ಸ್ಪಷ್ಟ ಗುರಿಯೊಂದಿಗೆ ಕಣಕ್ಕಿಳಿದ ಡೆಲ್ಲಿ ಆರಂಭದಲ್ಲೇ ಸ್ಫೋಟಿಸತೊಡಗಿತು. ನಾಯಕಿ ಮೆಗ್‌ ಲ್ಯಾನಿಂಗ್‌ ಹಾಗೂ ಶಫಾಲಿ ವರ್ಮಾ ಆರ್‌ಸಿಬಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. 

ಪವರ್‌-ಪ್ಲೇ ಮುಕ್ತಾಯಕ್ಕೆ 61 ರನ್‌ ಸೇರಿಸಿದ ಇವರಿಬ್ಬರು ತಂಡಕ್ಕೆ 180 ನಿರೀಕ್ಷೆ ಹುಟ್ಟಿಸಿದ್ದರು. ಮೊದಲ 6 ಓವರಲ್ಲಿ ಶಫಾಲಿ ಏಕಾಂಗಿಯಾಗಿ 21 ಎಸೆತಗಳಲ್ಲಿ 42 ರನ್‌ ಸಿಡಿಸಿದರು.

ಮಹಾಪತನ: 8ನೇ ಓವರ್‌ ಎಸೆಯಲು ಬಂದ ಸೋಫಿ ಮೋಲಿನ್ಯುಕ್ಸ್‌ ಯಾರೂ ಊಹಿಸದ ರೀತಿ ಪಂದ್ಯದ ದಿಕ್ಕನ್ನು ಬದಲಿಸಿದರು. 44 ರನ್‌ ಗಳಿಸಿದ್ದ ಶಫಾಲಿಯನ್ನು ಮೊದಲ ಎಸೆತದಲ್ಲಿ ಪೆವಿಲಿಯನ್‌ಗೆ ಅಟ್ಟಿದ ಸೋಫಿ, 3ನೇ ಎಸೆತದಲ್ಲಿ ಜೆಮಿಮಾ ರೋಡ್ರಿಗ್ಸ್‌, 4ನೇ ಎಸೆತದಲ್ಲಿ ಅಲೈಸ್‌ ಕ್ಯಾಪ್ಸಿಯನ್ನು ಬೌಲ್ಡ್‌ ಮಾಡಿದರು. 

ಇದರ ಆಘಾತದಿಂದ ಚೇತರಿಸಿಕೊಳ್ಳಲು ಡೆಲ್ಲಿಗೆ ಸಾಧ್ಯವಾಗಲಿಲ್ಲ.10 ಓವರ್‌ಗೆ ತಂಡ 3 ವಿಕೆಟ್‌ಗೆ 72 ರನ್ ಗಳಿಸಿತ್ತು. ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ್ದ ಮೆಗ್‌ ಲ್ಯಾನಿಂಗ್‌ರನ್ನು ಶ್ರೇಯಾಂಕ ಪಾಟೀಲ್‌ ಔಟ್‌ ಮಾಡುವುದರೊಂದಿಗೆ ತಂಡ ಮತ್ತೆ ಕುಸಿಯಿತು. 

ಇತರ ಬ್ಯಾಟರ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಡಗೌಟ್‌ಗೆ ಹಿಂದಿರುಗಿದರು. ಆರಂಭದಲ್ಲಿ ವಿಕೆಟ್‌ ನಷ್ಟವಿಲ್ಲದೇ 64 ರನ್ ಗಳಿಸಿದ್ದ ಬಳಿಕ ಕೇವಲ 49 ರನ್‌ ಸೇರಿಸುವಷ್ಟರಲ್ಲಿ ತನ್ನೆಲ್ಲಾ 10 ವಿಕೆಟ್‌ ಕಳೆದುಕೊಂಡಿತು.

3.3 ಓವರ್‌ ಎಸೆದ ಶ್ರೇಯಾಂಕ 12 ರನ್‌ಗೆ 4 ಪ್ರಮುಖ ವಿಕೆಟ್‌ ಕಿತ್ತರೆ, ಮೋಲಿನ್ಯುಕ್ಸ್‌ 20 ರನ್‌ಗೆ 3 ವಿಕೆಟ್‌ ಕಬಳಿಸಿದರು. ಆಶಾ ಶೋಭನಾಗೆ 2 ವಿಕೆಟ್‌ ಲಭಿಸಿತು.

ಸ್ಕೋರ್‌: ಡೆಲ್ಲಿ ಕ್ಯಾಪಿಟಲ್ಸ್‌ 18.3 ಓವರಲ್ಲಿ 113/10(ಶಫಾಲಿ 44, ಲ್ಯಾನಿಂಗ್‌ 23, ರಾಧಾ 12, ಶ್ರೇಯಾಂಕ 4-12, ಮೋಲಿನ್ಯುಕ್ಸ್‌ 3-20, ಆಶಾ 2-14), ಆರ್‌ಸಿಬಿ 19.3 ಓವರಲ್ಲಿ115/2 (ಪೆರ್ರಿ 35, ಡಿವೈನ್‌ 32, ಸ್ಮೃತಿ 32, ಶಿಖಾ 1-12)

₹6 ಕೋಟಿ: ಚಾಂಪಿಯನ್‌ ಆರ್‌ಸಿಬಿ ತಂಡ ₹6 ಕೋಟಿ ನಗದು ಬಹುಮಾನ ಪಡೆಯಿತು.

₹3 ಕೋಟಿ: ರನ್ನರ್‌-ಅಪ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ₹3 ಕೋಟಿ ಬಹುಮಾನ ಮೊತ್ತ ಲಭಿಸಿತು.

Share this article