ಕನ್ನಡಪ್ರಭ ವಾರ್ತೆ ಬೆಂಗಳೂರು
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ವಿರುದ್ಧ ಆರ್‌ಸಿಬಿ ಸತತ 6ನೇ ಸೋಲು ಅನುಭವಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 7 ವಿಕೆಟ್‌ಗಳ ಹೀನಾಯ ಸೋಲು ಎದುರಾಯಿತು. ತವರಿನಂಗಳದಲ್ಲಿ ಕೆಕೆಆರ್ ವಿರುದ್ಧ ಆರ್‌ಸಿಬಿ ಕೊನೆ ಬಾರಿಗೆ ಗೆದ್ದಿದ್ದು 2015ರಲ್ಲಿ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ಆರ್‌ಸಿಬಿ, 20 ಓವರಲ್ಲಿ 6 ವಿಕೆಟ್‌ಗೆ 182 ರನ್ ಕಲೆಹಾಕಿತು. ವಿರಾಟ್ ಕೊಹ್ಲಿ 83 ರನ್ ಗಳಿಸಿ ಔಟಾಗದೆ ಉಳಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 200 ರನ್ ಕೂಡ ಸುರಕ್ಷಿತವಲ್ಲ. ಹೀಗಿರುವಾಗ ಆರ್‌ಸಿಬಿ ತನ್ನ ಅಸ್ಥಿರ ಬೌಲಿಂಗ್ ದಾಳಿಯ ಮೂಲಕ ಕೆಕೆಆರ್ ಅನ್ನು ಕಟ್ಟಿಹಾಕುವುದು ಕಷ್ಟಸಾಧ್ಯ ಎಂದು ಮೊದಲ ಇನ್ನಿಂಗ್ಸ್ ಮುಗಿದ ಮೇಲೆ ಅನೇಕರು ವಿಶ್ಲೇಷಿಸಿದ್ದರು. ಕೆಕೆಆರ್ ಬ್ಯಾಟರ್‌ಗಳು ಇದನ್ನು ನಿಜವಾಗಿಸಿದರು.
ಸುನಿಲ್ ನರೇನ್ ಹಾಗೂ ಫಿಲ್ ಸಾಲ್ಟ್ ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಪವರ್-ಪ್ಲೇನಲ್ಲೇ ತಂಡದ ಮೊತ್ತವನ್ನು 80 ರನ್ ದಾಟಿಸಿದರು. ನರೈನ್ 47, ಸಾಲ್ಟ್ 30 ರನ್ ಗಳಿಸಿ ಔಟಾದ ಬಳಿಕ ವೆಂಕಟೇಶ್ ಅಯ್ಯರ್ ಆರ್‌ಸಿಬಿ ಬೌಲರ್‌ಗಳಿಗೆ ಚಳಿ ಬಿಡಿಸಿದರು.
30 ಎಸೆತದಲ್ಲಿ 50 ರನ್ ಸಿಡಿಸಿ ವೆಂಕಿ ಔಟಾಗುವ ಹೊತ್ತಿಗೆ ತಂಡ ಜಯಕ್ಕೆ ಕೇವಲ 16 ರನ್ ಬೇಕಿತ್ತು. ಇನ್ನೂ 3.1 ಓವರ್ ಬಾಕಿ ಇರುವಂತೆಯೇ ಕೆಕೆಆರ್ ಗೆದ್ದು ಬೀಗಿತು.
ಇದಕ್ಕೂ ಮುನ್ನ ಆರ್‌ಸಿಬಿಗೆ ಪ್ರಮುಖ ಬ್ಯಾಟರ್‌ಗಳಾದ ಫಾಫ್ ಡು ಪ್ಲೆಸಿ (08), ರಜತ್ ಪಾಟೀದಾರ್(03) ಕೈಕೊಟ್ಟರು. ಮ್ಯಾಕ್ಸ್‌ವೆಲ್ 28, ಗ್ರೀನ್ 33 ರನ್ ಗಳಿಸಿದರೂ ಕೊಹ್ಲಿ ಜೊತೆ ಹೆಚ್ಚು ಸಮಯ ಕ್ರೀಸ್‌ನಲ್ಲಿ ನಿಲ್ಲಲಿಲ್ಲ.ವಿರಾಟ್ 59 ಎಸೆತದಲ್ಲಿ 83 ರನ್ ಗಳಿಸಿ ಔಟಾಗದೆ ಉಳಿದರು.
ಸ್ಕೋರ್: ಆರ್‌ಸಿಬಿ 20 ಓವರಲ್ಲಿ 182/6 (ಕೊಹ್ಲಿ 83, ಗ್ರೀನ್ 33, ರಸೆಲ್ 2-29), ಕೆಕೆಆರ್ 16.5 ಓವರಲ್ಲಿ 186/3 (ವೆಂಕಿ 50, ನರೇನ್ 47, ವೈಶಾಖ್ 1-23)