ಮುಂಬೈ ಚಾಲೆಂಜ್‌ ಗೆಲ್ಲಲು ಆರ್‌ಸಿಬಿ ಸಜ್ಜು : ಇಂದು ವಾಂಖೆಡೆಯಲ್ಲಿ ಮಹತ್ವದ ಫೈಟ್‌

ಸಾರಾಂಶ

ಸತತ 2 ಗೆಲುವಿನೊಂದಿಗೆ ಈ ಬಾರಿ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ್ದರೂ ಬಳಿಕ ತನ್ನದೇ ತವರಿನಲ್ಲಿ ಎದುರಾದ ಸೋಲು ಆರ್‌ಸಿಬಿಯನ್ನು ಕುಗ್ಗಿಸಿದೆ.    ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ನ ಎದುರಿಸಲಿರುವ ಆರ್‌ಸಿಬಿ, ಗೆಲುವಿನ ಹಳಿಗೆ ಮರಳಲು ಕಾಯುತ್ತಿದೆ.

ಮುಂಬೈ: ಸತತ 2 ಗೆಲುವಿನೊಂದಿಗೆ ಈ ಬಾರಿ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ್ದರೂ ಬಳಿಕ ತನ್ನದೇ ತವರಿನಲ್ಲಿ ಎದುರಾದ ಸೋಲು ಆರ್‌ಸಿಬಿಯನ್ನು ಕುಗ್ಗಿಸಿದೆ. ಆದರೆ ತಂಡ ಕಮ್‌ಬ್ಯಾಕ್‌ಗೆ ಹೆಸರುವಾಸಿ. ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ನ ಎದುರಿಸಲಿರುವ ಆರ್‌ಸಿಬಿ, ಗೆಲುವಿನ ಹಳಿಗೆ ಮರಳಲು ಕಾಯುತ್ತಿದೆ.

ಕೋಲ್ಕತಾ ಹಾಗೂ ಚೆನ್ನೈ ವಿರುದ್ಧ ಗೆದ್ದಿದ್ದ ಆರ್‌ಸಿಬಿ ಕಳೆದ ವಾರ ಬೆಂಗಳೂರಿನಲ್ಲಿ ಗುಜರಾತ್‌ ವಿರುದ್ಧ ಪರಾಭವಗೊಂಡಿತ್ತು. ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಲು ಕಾಯುತ್ತಿರುವ ತಂಡಕ್ಕೆ ಮುಂಬೈಯನ್ನೂ ಹೊಸಕಿ ಹಾಕುವ ನಿರೀಕ್ಷೆಯಲ್ಲಿದೆ.

ಸ್ಫೋಟಕ ಬ್ಯಾಟರ್ಸ್‌ ಬಲ:

ಕೆಕೆಆರ್ ವಿರುದ್ಧ 59 ರನ್‌ ಗಳಿಸಿದ್ದ ಕೊಹ್ಲಿ ನಂತರದ 2 ಪಂದ್ಯಗಳಲ್ಲಿ ಮಿಂಚಿಲ್ಲ. ಆದರೆ ತಂಡದಲ್ಲಿ ಸ್ಫೋಟಕ ಆಟಗಾರರಿಗೆ ಕೊರತೆಯೇನೂ ಇಲ್ಲ. ಫಿಲ್‌ ಸಾಲ್ಟ್‌, ದೇವದತ್ ಪಡಿಕ್ಕಲ್‌ ಜೊತೆ ನಾಯಕ ರಜತ್‌ ಪಾಟೀದಾರ್‌ ಅಬ್ಬರಿಸಲು ಕಾಯುತ್ತಿದ್ದಾರೆ. ಟಿಮ್‌ ಡೇವಿಡ್‌, ಲಿವಿಂಗ್‌ಸ್ಟೋನ್‌ ಅಬ್ಬರಿಸಿದರೆ ಮುಂಬೈಗೆ ಉಳಿಗಾಲವಿಲ್ಲ.

ತಂಡದ ಬೌಲಿಂಗ್‌ ವಿಭಾಗ ಕೂಡಾ ಬಲಿಷ್ಠವಾಗಿದ್ದು, ಭುವನೇಶ್ವರ್‌ ಕುಮಾರ್, ಹೇಜಲ್‌ವುಡ್‌ ತಂಡದ ಆಧಾರಸ್ತಂಭ. ಕೃನಾಲ್‌ ಪಾಂಡ್ಯ, ಸುಯಶ್ ಶರ್ಮಾ ಸ್ಪಿನ್‌ ಮೋಡಿ ಮೂಲಕ ಮುಂಬೈನ ಕಟ್ಟಿಹಾಕುವ ವಿಶ್ವಾಸದಲ್ಲಿದ್ದಾರೆ.

ಕಳಪೆ ಆಟ:

ಮತ್ತೊಂದೆಡೆ ಮುಂಬೈ ಈ ಬಾರಿ ನಿರೀಕ್ಷಿತ ಆಟವಾಡಿಲ್ಲ. ಮೊದಲ 4 ಪಂದ್ಯಗಳಲ್ಲಿ ತಂಡದ ಕೇವಲ 2 ಬ್ಯಾಟರ್‌ಗಳು ಮಾತ್ರ ವೈಯಕ್ತಿಕ ಅರ್ಧಶತಕ ಬಾರಿಸಿದ್ದಾರೆ. ಸೂರ್ಯಕುಮಾರ್‌ ಯಾದವ್‌, ರಿಕೆಲ್ಟನ್‌ ಹೊರತುಪಡಿಸಿ ಇತರರಿಂದ 50+ ಸ್ಕೋರ್‌ ದಾಖಲಾಗಿಲ್ಲ. ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ರೋಹಿತ್‌ ಶರ್ಮಾ ಈ ಪಂದ್ಯದಲ್ಲಿ ಆಡುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಹೀಗಾಗಿ, ಲಖನೌ ವಿರುದ್ಧ ವಿಫಲರಾಗಿದ್ದ ತಿಲಕ್‌ ವರ್ಮಾ, ನಮನ್‌ಧೀರ್‌ ದೊಡ್ಡ ಇನ್ನಿಂಗ್ಸ್‌ ಕಟ್ಟಬೇಕಿದೆ. ಬೂಮ್ರಾ ಪುನರಾಗಮನದಿಂದ ತಂಡದ ಬೌಲಿಂಗ್‌ ವಿಭಾಗ ಬಲಿಷ್ಠವಾಗಿದೆ.

ಮುಖಾಮುಖಿ: 33

ಆರ್‌ಸಿಬಿ: 14

ಮುಂಬೈ: 19

ಸಂಭಾವ್ಯ ಆಟಗಾರರು:

ಆರ್‌ಸಿಬಿ: ಫಿಲ್‌ ಸಾಲ್ಟ್‌, ಕೊಹ್ಲಿ, ದೇವದತ್‌, ರಜತ್‌(ನಾಯಕ), ಲಿವಿಂಗ್‌ಸ್ಟೋನ್‌, ಜಿತೇಶ್‌, ಡೇವಿಡ್‌, ಕೃನಾಲ್‌, ಭುವನೇಶ್ವರ್‌, ಹೇಜಲ್‌ವುಡ್‌, ಯಶ್‌, ಸುಯಶ್‌.

ಮುಂಬೈ: ರಿಕೆಲ್ಟನ್‌, ರೋಹಿತ್‌, ಸೂರ್ಯ, ತಿಲಕ್‌ ವರ್ಮಾ, ವಿಲ್‌ ಜ್ಯಾಕ್ಸ್‌, ಹಾರ್ದಿಕ್‌(ನಾಯಕ), ನಮನ್‌ಧೀರ್‌, ಸ್ಯಾಂಟ್ನರ್‌, ಬೂಮ್ರಾ, ವಿಘ್ನೇಶ್‌, ಬೌಲ್ಟ್‌, ದೀಪಕ್‌ ಚಹರ್‌.

ಪಂದ್ಯ: ಸಂಜೆ 7.30ಕ್ಕೆ ಪಿಚ್‌ ರಿಪೋರ್ಟ್‌

ವಾಂಖೆಡೆ ಕ್ರೀಡಾಂಗಣದ ಪಿಚ್‌ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಇಲ್ಲಿ ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಹೆಚ್ಚು. ಆದರೆ ಕಳೆದ ವಾರ ಕೋಲ್ಕತಾ 16.2 ಓವರ್‌ಗಳಲ್ಲಿ 116ಕ್ಕೆ ಆಲೌಟಾಗಿತ್ತು. ಮುಂಬೈ 12.5 ಓವರ್‌ನಲ್ಲೇ ಚೇಸ್‌ ಮಾಡಿ ಗೆದ್ದಿತ್ತು.

ವಾಂಖೆಡೆಯಲ್ಲಿ 2015ರ ಬಳಿಕ ಗೆದ್ದಿಲ್ಲ ಆರ್‌ಸಿಬಿ!

ಆರ್‌ಸಿಬಿ ತಂಡ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ವಿರುದ್ಧ ಕಳೆದ 10 ವರ್ಷಗಳಲ್ಲಿ ಒಂದೂ ಪಂದ್ಯ ಗೆದ್ದಿಲ್ಲ. ಇಲ್ಲಿ 2015ರಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ 39 ರನ್‌ ಜಯಗಳಿಸಿತ್ತು. ಆ ಬಳಿಕ ತಂಡಕ್ಕೆ ಗೆಲುವು ಸಿಕ್ಕಿಲ್ಲ. ಒಟ್ಟಾರೆಯಾಗಿ, ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ವಿರುದ್ಧ ಆರ್‌ಸಿಬಿ 11 ಪಂದ್ಯಗಳನ್ನಾಡಿದೆ. 3ರಲ್ಲಿ ಮಾತ್ರ ಗೆದ್ದಿದ್ದು, 8 ಪಂದ್ಯಗಳಲ್ಲಿ ಸೋಲನುಭವಿಸಿದೆ.

4 ಪಂದ್ಯಕ್ಕೆ ಗೈರಾಗಿದ್ದ ಬೂಮ್ರಾ ಕಮ್‌ಬ್ಯಾಕ್

ಕಳೆದ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ವೇಳೆ ಗಾಯಗೊಂಡಿದ್ದ ಬೂಮ್ರಾ, ಈ ಬಾರಿ ಐಪಿಎಲ್‌ನ ಆರಂಭಿಕ 4 ಪಂದ್ಯಗಳಿಗೆ ಗೈರಾಗಿದ್ದರು. ಭಾನುವಾರ ಅವರು ಮುಂಬೈ ತಂಡವನ್ನು ಕೂಡಿಕೊಂಡಿದ್ದಾರೆ. ಇದರ ಫೋಟೋ, ವಿಡಿಯೋಗಳನ್ನು ಫ್ರಾಂಚೈಸಿ ಹಂಚಿಕೊಂಡಿದೆ. ಅಲ್ಲದೆ, ಆರ್‌ಸಿಬಿ ವಿರುದ್ಧ ಪಂದ್ಯಕ್ಕೆ ಬೂಮ್ರಾ ಲಭ್ಯವಿರುವುದಾಗಿ ಮುಂಬೈ ಕೋಚ್‌ ಮಹೇಲ ಜಯವರ್ಧನೆ ಸ್ಪಷ್ಟಪಡಿಸಿದ್ದಾರೆ. ‘ಬೂಮ್ರಾ ಭಾನುವಾರ ಅಭ್ಯಾಸ ನಡೆಸಿದ್ದಾರೆ. ಚೆನ್ನಾಗಿ ಬೌಲಿಂಗ್‌ ಮಾಡಿದ್ದಾರೆ. ಅವರು ಆರ್‌ಸಿಬಿ ವಿರುದ್ಧ ಪಂದ್ಯಕ್ಕೆ ಲಭ್ಯವಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

Share this article