ಐಪಿಎಲ್‌ನ ಅತಿ ಮಹತ್ವದ, ಬಹುನಿರೀಕ್ಷಿತ ಪಂದ್ಯಕ್ಕೆ ಶನಿವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಲಿದೆ.
ಬೆಂಗಳೂರು : ಐಪಿಎಲ್‌ನ ಅತಿ ಮಹತ್ವದ, ಬಹುನಿರೀಕ್ಷಿತ ಪಂದ್ಯಕ್ಕೆ ಶನಿವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪರಸ್ಪರ ಸೆಣಸಾಡಲಿವೆ. 5 ಬಾರಿ ಚಾಂಪಿಯನ್ ಚೆನ್ನೈ ತಂಡ ಈಗಾಗಲೇ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿದ್ದರೂ, ಅಭಿಮಾನಿಗಳಲ್ಲಿ ಶನಿವಾರದ ಪಂದ್ಯದ ಮೇಲಿನ ಕ್ರೇಜ್ ಕಮ್ಮಿಯಾಗಿಲ್ಲ.
ಉಭಯ ತಂಡಗಳು ಬದ್ಧವೈರಿಗಳು ಎನಿಸಿಕೊಂಡರೂ ಈ ಬಾರಿ ಐಪಿಎಲ್‌ನಲ್ಲಿ ಎರಡೂ ತಂಡಗಳ ಪ್ರದರ್ಶನ ಭಿನ್ನ. ಆರ್‌ಸಿಬಿ ಆಡಿರುವ 10 ಪಂದ್ಯಗಳ ಪೈಕಿ 7ರಲ್ಲಿ ಗೆದ್ದಿದ್ದು, ಪ್ಲೇ-ಆಫ್‌ನ ಸನಿಹಲ್ಲಿದೆ. ಚೆನ್ನೈ ವಿರುದ್ಧ ಗೆದ್ದರೆ ತಂಡ ನಾಕೌಟ್ ಸ್ಥಾನ ಬಹುತೇಕ ಖಚಿತಪಡಿಸಿಕೊಳ್ಳಲಿದೆ. ಮತ್ತೊಂದೆಡೆ ಚೆನ್ನೈನ ಪ್ರದರ್ಶನ ಹೀನಾಯವಾಗಿದೆ. ಆಡಿರುವ 10 ಪಂದ್ಯಗಳ ಪೈಕಿ ಕೇವಲ 2ರಲ್ಲಿ ಗೆದ್ದಿದ್ದು, 8 ಪಂದ್ಯಗಳಲ್ಲಿ ಸೋತು ಸುಣ್ಣವಾಗಿದೆ.
ರೋಚಕ ಪೈಪೋಟಿ ನಿರೀಕ್ಷೆ: ಆರ್‌ಸಿಬಿ ಎಲ್ಲಾ ವಿಭಾಗದಲ್ಲಿ ಬಲಿಷ್ಠವಾಗಿ, ಚೆನ್ನೈ ಎಲ್ಲಾ ವಿಭಾಗದಲ್ಲೂ ವಿಫಲವಾಗಿದ್ದರೂ ಈ ಮುಖಾಮುಖಿಯಲ್ಲಿ ರೋಚಕ ಪೈಪೋಟಿ ಕಂಡುಬರುವ ಸಾಧ್ಯತೆಯಿದೆ. ಕಳೆದ 5 ಪಂದ್ಯಗಳಲ್ಲಿ 4 ಅರ್ಧಶತಕ ಬಾರಿಸಿ, ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿ ವಿರಾಟ್ ಕೊಹ್ಲಿ ಮತ್ತೆ ಅಬ್ಬರಿಸಲು ಕಾಯುತ್ತಿದ್ದಾರೆ.
ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್ ಕೂಡಾ ದೊಡ್ಡ ಇನ್ನಿಂಗ್ಸ್ ನಿರೀಕ್ಷೆಯಲ್ಲಿದ್ದು, ಮಧ್ಯಮ ಕ್ರಮಾಂಕದಲ್ಲಿ ಟಿಮ್ ಡೇವಿಡ್ ಸ್ಫೋಟಕ ಆಟವಾಡುತ್ತಿದ್ದಾರೆ. ಕೃನಾಲ್ ಪಾಂಡ್ಯ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಹೇಜಲ್‌ವುಡ್, ಭುವನೇಶ್ವರ್ ಮಾರಕ ದಾಳಿ ಎದುರಾಳಿಗಳಲ್ಲಿ ಭೀತಿ ಹುಟ್ಟಿಸುವಂತಿದೆ. ಸುಯಶ್ ಶರ್ಮಾ ಸ್ಪಿನ್ ವಿಭಾಗದ ಟ್ರಂಪ್‌ಕಾರ್ಡ್.
ಪುಟಿದೇಳುತ್ತಾ ಸಿಎಸ್‌ಕೆ?: ಎಂ.ಎಸ್.ಧೋನಿ ನಾಯಕತ್ವದ ಚೆನ್ನೈ ಈ ಬಾರಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹಲವು ಹಿರಿಯರಿಗೆ ಮಣೆ ಹಾಕಿ ಕೈಸುಟ್ಟುಕೊಂಡಿರುವ ತಂಡ, ಸದ್ಯ ಯುವ ಪ್ರತಿಭೆಗಳಾದ ಆಯುಶ್ ಮಾಥ್ರೆ, ಸ್ಯಾಮ್ ಕರ್ರನ್, ಶೇಕ್ ರಶೀದ್, ಡೆವಾಲ್ಡ್ ಬ್ರೆವಿಸ್‌ರನ್ನು ಆಡಿಸುತ್ತಿದೆ. ಇವರ ಪ್ರದರ್ಶನವೇ ತಂಡಕ್ಕೆ ನಿರ್ಣಾಯಕ. ಶಿವಂ ದುಬೆ, ಜಡೇಜಾ ಸಾಧಾರಣ ಪ್ರದರ್ಶನ ನೀಡುತ್ತಿದ್ದಾರೆ. ಧೋನಿ ಬ್ಯಾಟ್‌ನಿಂದ ಒಂದೆರಡು ಸಿಕ್ಸರ್‌ಗಳಾದರೂ ಚಿನ್ನಸ್ವಾಮಿ ಕ್ರೀಡಾಗಂಣದಲ್ಲಿ ಸಿಡಿಯಬಹುದೇ ಎಂಬ ಕುತೂಹಲವಿದೆ.
ಸೇಡಿನ ಕದನ: ಉಭಯ ತಂಡಗಳು ಈ ವರ್ಷ 2ನೇ ಬಾರಿ ಮುಖಾಮುಖಿಯಾಗುತ್ತಿವೆ. ಮಾ.28ರಂದು ಚೆನ್ನೈನ ಚೆಪಾಕ್‌ನಲ್ಲಿ ಪರಸ್ಪರ ಆಡಿದ್ದವು. ಅದರಲ್ಲಿ ಆರ್‌ಸಿಬಿ ಗೆದ್ದಿತ್ತು. ಹೀಗಾಗಿ ಚೆನ್ನೈ ಈ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ.
ಧೋನಿ-ಕೊಹ್ಲಿ ಕೊನೆ
ಬಾರಿ ಮುಖಾಮುಖಿ?
ಆರ್‌ಸಿಬಿಯ ವಿರಾಟ್ ಕೊಹ್ಲಿ ಹಾಗೂ ಚೆನ್ನೈನ ಎಂ.ಎಸ್.ಧೋನಿ ವಿಶ್ವ ಕ್ರಿಕೆಟ್‌ನ ಐಕಾನ್‌ಗಳು. ಇಬ್ಬರನ್ನು ಮೈದಾನದಲ್ಲಿ ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಇವರಿಬ್ಬರ ನಡುವಿನ ಮುಖಾಮುಖಿಯನ್ನಂತೂ ಕ್ರಿಕೆಟ್ ಲೋಕ ಕುತೂಹಲವ ಕಣ್ಣುಗಳಲ್ಲಿ ವೀಕ್ಷಿಸುತ್ತದೆ. ಆದರೆ ಶನಿವಾರದ ಪಂದ್ಯ ಇಬ್ಬರ ಪಾಲಿನ ಕೊನೆ ಮುಖಾಮುಖಿಯಾಗುವ ಸಾಧ್ಯತೆ ಇದೆ. ಧೋನಿ ಯಾವಾಗ ನಿವೃತ್ತಿಯಾಗಲಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದ್ದರೂ, ಮುಂದಿನ ಬಾರಿ ಅವರ ಆಡವುದಿಲ್ಲ ಎಂದೇ ಹೇಳಲಾಗುತ್ತಿದೆ.
ಮುಖಾಮುಖಿ: 34
ಆರ್‌ಸಿಬಿ: 12
ಚೆನ್ನೈ: 21
ಫಲಿತಾಂಶವಿಲ್ಲ: 01
ಸಂಭಾವ್ಯ ಆಟಗಾರರು
ಆರ್‌ಸಿಬಿ: ಬೆಥೆಲ್/ಸಾಲ್ಟ್, ಕೊಹ್ಲಿ, ದೇವದತ್, ರಜತ್(ನಾಯಕ), ಜಿತೇಶ್, ಡೇವಿಡ್, ಕೃನಾಲ್, ಶೆಫರ್ಡ್, ಭುವನೇಶ್ವರ್, ಸುಯಶ್, ಹೇಜಲ್‌ವುಡ್, ದಯಾಳ್.
ಚೆನ್ನೈ: ರಶೀದ್, ಆಯುಶ್, ಕರ್ರನ್, ಜಡೇಜಾ, ಬ್ರೆವಿಸ್, ಶಿವಂ ದುಬೆ, ದೀಪಕ್ ಹೂಡಾ, ಧೋನಿ(ನಾಯಕ), ನೂರ್ ಅಹ್ಮದ್, ಅನ್ಶುಲ್, ಖಲೀಲ್, ಪತಿರನ.
ಪಿಚ್ ರಿಪೋರ್ಟ್
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿ. ಇಲ್ಲಿ ಸಾಮಾನ್ಯವಾಗಿ ಬ್ಯಾಟರ್‌ಗಳು ಹೆಚ್ಚಿನ ನೆರವು ಪಡೆಯಲಿದ್ದಾರೆ. ಹೀಗಾಗಿ ದೊಡ್ಡ ಮೊತ್ತ ದಾಖಲಾಗಬಹುದು. ಚೇಸಿಂಗ್ ಸುಲಭವಾಗಲಿರುವ ಕಾರಣ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಬಹುದು.
ಪಂದ್ಯಕ್ಕೆ ಮಳೆ ಭೀತಿ!
ಬೆಂಗಳೂರಿನಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಶುಕ್ರವಾರ ಅಭ್ಯಾಸ ಶಿಬಿರಕ್ಕೂ ಮಳೆ ಅಡ್ಡಿಪಡಿಸಿತ್ತು. ಶನಿವಾರ ಕೂಡಾ ನಗರದಲ್ಲಿ ಮಳೆ ಮುನ್ಸೂಚನೆಯಿದ್ದು, ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆಯಿದೆ.