ಚೆಪಾಕ್‌ನ ಸ್ಪಿನ್‌ ಅಖಾಡದಲ್ಲಿ ಆರ್‌ಸಿಬಿ vs ಚೆನ್ನೈ : ಇಂದು ಹೈವೋಲ್ಟೇಜ್‌ ಫೈಟ್‌

Published : Mar 28, 2025, 04:55 AM IST
Virat Kohli and Mohammed Siraj in RCB colours. (Photo- IPL)

ಸಾರಾಂಶ

ಐಪಿಎಲ್‌ನ ಅತಿ ದೊಡ್ಡ ಹಾಗೂ ಬಹುನಿರೀಕ್ಷಿತ ಪಂದ್ಯಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ, ಸಾಂಪ್ರದಾಯಿಕ ಎದುರಾಳಿಗಳಾದ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಹೈವೋಲ್ಟೆಜ್‌ ಪಂದ್ಯ ಶುಕ್ರವಾರ ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. 

 ಚೆನ್ನೈ: ಐಪಿಎಲ್‌ನ ಅತಿ ದೊಡ್ಡ ಹಾಗೂ ಬಹುನಿರೀಕ್ಷಿತ ಪಂದ್ಯಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ, ಸಾಂಪ್ರದಾಯಿಕ ಎದುರಾಳಿಗಳಾದ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಹೈವೋಲ್ಟೆಜ್‌ ಪಂದ್ಯ ಶುಕ್ರವಾರ ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಬಾರಿ ಎರಡೂ ತಂಡಗಳು ಗೆಲುವಿನೊಂದಿಗೆ ಟೂರ್ನಿಗೆ ಕಾಲಿರಿಸಿದ್ದು, ಸತತ 2ನೇ ಗೆಲುವಿಗಾಗಿ ಪೈಪೋಟಿ ನಡೆಸಲಿದೆ.

ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ, ಹಾಲಿ ಚಾಂಪಿಯನ್‌ ಕೋಲ್ಕತಾ ವಿರುದ್ಧ 7 ವಿಕೆಟ್‌ ಗೆಲುವು ಸಾಧಿಸಿದ್ದರೆ, ಚೆನ್ನೈ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ 4 ವಿಕೆಟ್‌ ಜಯಭೇರಿ ಬಾರಿಸಿತ್ತು. ಈ ಬಾರಿ ಎರಡೂ ತಂಡಗಳು ಬಲಿಷ್ಠವಾಗಿದ್ದು, ರೋಚಕ ಪೈಪೋಟಿ ಎದುರಾಗುವುದು ಖಚಿತ. ಅದರಲ್ಲೂ ಚೆಪಾಕ್‌ನ ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ಚೆನ್ನೈ ಸ್ಪಿನ್ನರ್‌ಗಳು ಹಾಗೂ ಆರ್‌ಸಿಬಿ ಬ್ಯಾಟರ್‌ಗಳ ನಡುವೆ ತೀವ್ರ ಸ್ಪರ್ಧೆ ಎದುರಾಗಬಹುದು.

ಸ್ಪಿನ್ನರ್ಸ್‌-ಬ್ಯಾಟರ್ಸ್‌ ಫೈಟ್‌:

ಚೆನ್ನೈ ತಂಡದಲ್ಲಿ ವಿಶ್ವ ಶ್ರೇಷ್ಠ ಸ್ಪಿನ್ನರ್‌ಗಳಿದ್ದಾರೆ. ಆರ್‌.ಅಶ್ವಿನ್‌, ರವೀಂದ್ರ ಜಡೇಜಾ ಹಾಗೂ ನೂರ್‌ ಅಹ್ಮದ್‌ರ 12 ಓವರ್‌ಗಳು ತಂಡಕ್ಕೆ ನಿರ್ಣಾಯಕ. ಮುಂಬೈ ವಿರುದ್ಧ ಪಂದ್ಯದಲ್ಲಿ ಈ ಮೂವರು ಸ್ಪಿನ್ನರ್ಸ್‌ 11 ಓವರ್‌ಗಳಲ್ಲಿ 70 ರನ್‌ಗೆ 5 ವಿಕೆಟ್‌ ಪಡೆದಿದ್ದರು. ಹೀಗಾಗಿ ಆರ್‌ಸಿಬಿ ವಿರುದ್ಧವೂ ಕೈಚಳಕ ತೋರಿಸುವ ಸಾಧ್ಯತೆಯಿದೆ.

ಮತ್ತೊಂದೆಡೆ ಆರ್‌ಸಿಬಿಯಲ್ಲಿ ಸ್ಫೋಟಕ ಬ್ಯಾಟರ್‌ಗಳಿದ್ದಾರೆ. ಅದರಲ್ಲೂ ನಾಯಕ ರಜತ್‌ ಪಾಟೀದಾರ್‌ ಸ್ಪಿನ್ನರ್‌ಗಳ ಎದುರು ಉತ್ತಮ ದಾಖಲೆ ಹೊಂದಿದ್ದಾರೆ. ಅವರ ಆಟ ತಂಡದ ಚಿತ್ರಣ ಬದಲಿಸಲಿದೆ. ಫಿಲ್‌ ಸಾಲ್ಟ್‌ ಹಾಗೂ ವಿರಾಟ್ ಕೊಹ್ಲಿ ತಂಡದ ಆಧಾರಸ್ತಂಭವಾಗಿದ್ದು, ಚೆಪಾಕ್‌ನಲ್ಲಿ ಕೊಹ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎಂಬ ಕುತೂಹಲವಿದೆ.

ದೇವದತ್‌ ಪಡಿಕ್ಕಲ್‌ ಸಿಕ್ಕ ಅವಕಾಶ ಉಪಯೋಗಿಸಿಕೊಳ್ಳಬೇಕಿದ್ದು, ಲಿಯಾಮ್ ಲಿವಿಂಗ್‌ಸ್ಟೋನ್‌, ಟಿಮ್‌ ಡೇವಿಡ್‌ರಿಂದಲೂ ತಂಡಕ್ಕೆ ಹೆಚ್ಚಿನ ಭರವಸೆಯಿದೆ.

ಬದಲಾವಣೆ ಸಾಧ್ಯತೆ:

ಚೆಪಾಕ್‌ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಲಿರುವ ಕಾರಣ ಆರ್‌ಸಿಬಿ ಈ ಪಂದ್ಯದಲ್ಲಿ ಆಡುವ ಬಳಗವನ್ನು ಬದಲಾಯಿಸಬಹುದು. ಕೃನಾಲ್‌ ಪಾಂಡ್ಯ, ಸುಯಶ್‌ ಶರ್ಮಾ ಜೊತೆ ಸ್ವಪ್ನಿಲ್‌ ಸಿಂಗ್‌ಗೆ ಅವಕಾಶ ಸಿಗಬಹುದು. ಹೀಗಾದರೆ ರಸಿಕ್‌ ಸಲಾಮ್‌, ಭುವನೇಶ್ವರ್‌ ಕುಮಾರ್‌ಗೆ ಸ್ಥಾನ ಸಿಗುವ ಸಾಧ್ಯತೆ ಕಡಿಮೆ.

ಇನ್ನು, ಚೆನ್ನೈ ತಂಡದಲ್ಲಿ ಉತ್ತಮ ಬ್ಯಾಟರ್‌ಗಳಿದ್ದು, ಪರಿಸ್ಥಿತಿಗೆ ತಕ್ಕಂತೆ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ರಚಿನ್‌ ರವೀಂದ್ರ, ಋತುರಾಜ್‌ ಗಾಯಕ್ವಾಡ್‌ ತಂಡದ ಆಧಾರಸ್ತಂಭ. ದೀಪಕ್ ಹೂಡಾ, ಶಿವಂ ದುಬೆ ಮಿಂಚಬೇಕಿದ್ದು, ಧೋನಿ ಬ್ಯಾಟ್‌ನಿಂದ ಕೆಲ ಸಿಕ್ಸರ್‌ಗಳನ್ನಾದರೂ ಚೆನ್ನೈ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ಧೋನಿ-ಕೊಹ್ಲಿ ಕೊನೆಬಾರಿ ಮುಖಾಮುಖಿ?

ಆರ್‌ಸಿಬಿಯ ವಿರಾಟ್‌ ಕೊಹ್ಲಿ ಹಾಗೂ ಚೆನ್ನೈನ ಎಂ.ಎಸ್‌.ಧೋನಿಗೆ ಕೋಟ್ಯಂತರ ಅಭಿಮಾನಿಗಳಿದ್ದು, ತಮ್ಮ ನೆಚ್ಚಿನ ಕ್ರಿಕೆಟಿಗರ ಆಟ ನೋಡಲು ಕಾತರಿಸುತ್ತಿದ್ದಾರೆ. ಧೋನಿ ಯಾವಾಗ ನಿವೃತ್ತಿಯಾಗಲಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದ್ದರೂ, ಮುಂದಿನ ಬಾರಿ ಅವರ ಆಡವುದಿಲ್ಲ ಎಂದೂ ಹೇಳಲಾಗುತ್ತಿದೆ. ಹೀಗಾಗಿ ಶುಕ್ರವಾರದ ಪಂದ್ಯ ಇಬ್ಬರ ಪಾಲಿನ ಕೊನೆ ಮುಖಾಮುಖಿಯಾಗುವ ಸಾಧ್ಯತೆಯೂ ಇದೆ.

ಕೊನೆ ಬಾರಿ ಚೆಪಾಕ್‌ನಲ್ಲಿ

ಆರ್‌ಸಿಬಿ ಗೆದ್ದಿದ್ದು 2008ರಲ್ಲಿ!

ಆರ್‌ಸಿಬಿ ತಂಡ ಚೆನ್ನೈನಲ್ಲಿ ಕೊನೆ ಬಾರಿ ಗೆದ್ದಿದ್ದು 2008ರ ಚೊಚ್ಚಲ ಆವೃತ್ತಿಯಲ್ಲಿ. ಆ ಬಳಿಕ ತಂಡ 8 ಬಾರಿ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ಆಡಿದ್ದರೂ ಒಂದರಲ್ಲೂ ಗೆಲುವು ಸಾಧಿಸಿಲ್ಲ. ಆದರೆ ಉಭಯ ತಂಡಗಳ ನಡುವಿನ ಕೊನೆ ಮುಖಾಮುಖಿಯಲ್ಲಿ ಆರ್‌ಸಿಬಿ ಗೆದ್ದಿತ್ತು. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಅತ್ಯಂತ ನಿರ್ಣಾಯಕ ಪಂದ್ಯದಲ್ಲಿ ಚೆನ್ನೈಯನ್ನು ಆರ್‌ಸಿಬಿ ಸೋಲಿಸಿತ್ತು. ಇದೇ ಹುಮ್ಮಸ್ಸಿನಲ್ಲಿ ತಂಡ ಶುಕ್ರವಾರ ಕಣಕ್ಕಿಳಿಯಲಿದೆ.

ಮುಖಾಮುಖಿ: 33

ಚೆನ್ನೈ: 21

ಆರ್‌ಸಿಬಿ: 11

ಫಲಿತಾಂಶವಿಲ್ಲ: 01

ಸಂಭಾವ್ಯ ಆಟಗಾರರು

ಚೆನ್ನೈ: ರಚಿನ್‌, ಋತುರಾಜ್‌(ನಾಯಕ), ತ್ರಿಪಾಠಿ, ಹೂಡಾ, ಶಿವಂ ದುಬೆ, ಸ್ಯಾಮ್‌ ಕರ್ರನ್‌, ಜಡೇಜಾ, ಧೋನಿ, ಆರ್‌.ಅಶ್ವಿನ್‌, ನೇಥನ್‌ ಎಲ್ಲಿಸ್‌, ನೂರ್‌ ಅಹ್ಮದ್‌, ಖಲೀಲ್‌ ಅಹ್ಮದ್‌.

ಆರ್‌ಸಿಬಿ: ವಿರಾಟ್‌, ಫಿಲ್ ಸಾಲ್ಟ್‌, ರಜತ್‌(ನಾಯಕ), ಪಡಿಕ್ಕಲ್‌/ಮೋಹಿತ್‌, ಲಿವಿಂಗ್‌ಸ್ಟೋನ್‌, ಜಿತೇಶ್‌, ಡೇವಿಡ್‌, ಕೃನಾಲ್‌, ರಸಿಕ್/ಭುವನೇಶ್ವರ್‌, ಸ್ವಪ್ನಿಲ್‌, ಹೇಜಲ್‌ವುಡ್‌, ದಯಾಳ್‌, ಸುಯಶ್‌.

ಪಿಚ್‌ ರಿಪೋರ್ಟ್‌

ಚೆಪಾಕ್‌ ಕ್ರೀಡಾಂಗಣದ ಸ್ಪಿನ್‌ ಸ್ನೇಹಿಯಾಗಿದ್ದು, ದೊಡ್ಡ ಮೊತ್ತ ನಿರೀಕ್ಷಿಸುವಂತಿಲ್ಲ. ಇಲ್ಲಿ ಸ್ಪಿನ್ ಬೌಲರ್‌ಗಳೇ ನಿರ್ಣಾಯಕ. ಸ್ಪಿನ್ನರ್ಸ್‌ಗಳನ್ನು ಸಮರ್ಥವಾಗಿ ಎದುರಿಸುವ ತಂಡದ ಗೆಲುವು ಸುಲಭವಾಗಲಿದೆ.

ಕೊನೆ ಬಾರಿ ಚೆನ್ನೈನಲ್ಲಿ ಆರ್‌ಸಿನಿ ಗೆದ್ದಾಗ...

1. ಕೊಹ್ಲಿ ಇನ್ನೂ ಭಾರತ ಪರ ಆಡಿರಲಿಲ್ಲ.

2. ಅನಿಲ್‌ ಕುಂಬ್ಳೆ ಭಾರತದ ಟೆಸ್ಟ್‌ ನಾಯಕರಾಗಿದ್ದರು.

3. ವಾಟ್ಸಾಸ್‌ ಇನ್ನೂ ಚಾಲ್ತಿಗೆ ಬಂದಿರಲಿಲ್ಲ.

4. ಭಾರತದಲ್ಲಿ 2ಜಿ ನೆಟ್ವರ್ಕ್‌ ಬಳಸಲಾಗುತ್ತಿತ್ತು.

5. ಅನುಷ್ಕಾ ಶರ್ಮಾ ಬಾಲಿವುಡ್‌ ಪಾದಾರ್ಪಣೆ ಮಾಡಿರಲಿಲ್ಲ.

6. ಚಿನ್ನದ ಬೆಲೆ 10 ಗ್ರಾಂ.ಗೆ ₹12,500 ಇತ್ತು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!