ಚೆನ್ನೈ: ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ಬೃಹತ್ ಗೆಲುವಿನತ್ತ ದಾಪುಗಾಲಿಟ್ಟಿದೆ. ಪ್ರವಾಸಿ ತಂಡದ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿರುವ ರೋಹಿತ್ ಶರ್ಮಾ ನಾಯಕತ್ವದ ಭಾರತ, ಭಾನುವಾರವೇ ಬಾಂಗ್ಲಾವನ್ನು ಸೋಲಿಸಿ 3 ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಸಾಧಿಸುವ ಕಾತರದಲ್ಲಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ 227 ರನ್ ಮುನ್ನಡೆ ಸಾಧಿಸಿದ್ದ ಭಾರತ, 2ನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 287 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. 515 ರನ್‌ಗಳ ಬೃಹತ್ ಗುರಿ ಪಡೆದಿರುವ ನಜ್ಮುಲ್ ಹೊಸೈನ್ ನಾಯಕತ್ವದ ಬಾಂಗ್ಲಾ 3ನೇ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿದೆ. ತಂಡಕ್ಕೂ ಇನ್ನೂ 357 ರನ್ ಅಗತ್ಯವಿದೆ.ಗಿಲ್-ರಿಷಭ್ ಶತಕ: ಶುಕ್ರವಾರ ದಿನದಂತ್ಯಕ್ಕೆ 33 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಶುಭ್‌ಮನ್ ಗಿಲ್ ಹಾಗೂ 12 ರನ್ ಗಳಿಸಿದ್ದ ರಿಷಭ್ ಪಂತ್ ಶನಿವಾರ ಬಾಂಗ್ಲಾ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.
4ನೇ ವಿಕೆಟ್‌ಗೆ ಜೊತೆಯಾದ ಯುವ ಜೋಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಒಟ್ಟು 217 ಎಸೆತಗಳಲ್ಲಿ 167 ರನ್ ಜೊತೆಯಾಟವಾಡಿತು.ಭರ್ಜರಿ ಸಿಕ್ಸರ್, ಬೌಂಡರಿಗಳ ಮೂಲಕವೇ ಮನರಂಜಿಸಿದ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ 6ನೇ ಶತಕ ಪೂರ್ಣಗೊಳಿಸಿದರು. 128 ಎಸೆತಗಳಲ್ಲಿ 13 ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ 109 ರನ್ ಗಳಿಸಿದ್ದ ರಿಷಭ್, ಮೆಹಿದಿ ಹಸನ್ ಮೀರಾಜ್ ಎಸೆತದಲ್ಲಿ ರಿಟರ್ನ್ ಕ್ಯಾಚ್ ನೀಡಿ ಪೆವಿಲಿಯನ್ ಮರಳಿದರು. ಆ ಬಳಿಕ ಶುಭ್‌ಮನ್ ಗಿಲ್‌ಗೆ ಕೆ.ಎಲ್.ರಾಹುಲ್ ಜೊತೆಯಾದರು.
ಈ ಜೋಡಿ ಕೇವಲ 51 ಎಸೆತಗಳಲ್ಲಿ 53 ರನ್ ಜೊತೆಯಾಟವಾಡಿತು. ಟೆಸ್ಟ್‌ನಲ್ಲಿ 5ನೇ ಶತಕ ಬಾರಿಸಿದ ಗಿಲ್, 176 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ 119 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಲಾಯಿತು. ರಾಹುಲ್ 19 ಎಸೆತಗಳಲ್ಲಿ ಔಟಾಗದೆ 22 ರನ್ ಗಳಿಸಿ ತಂಡದ ಮುನ್ನಡೆಯನ್ನು 500ರ ಗಡಿ ದಾಟಿಸಲು ನೆರವಾದರು. ಮೆಹಿದಿ ಹಸನ್ 2, ನಹೀದ್ ರಾಣಾ ಹಾಗೂ ತಸ್ಕೀನ್ ಅಹ್ಮದ್ ತಲಾ 1 ವಿಕೆಟ್ ಕಿತ್ತರು.
ಅಶ್ವಿನ್ ಸ್ಪಿನ್ ಮೋಡಿ: ಬೃಹತ್ ಗುರಿ ಪಡೆದ ಬಾಂಗ್ಲಾದೇಶ 2ನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆಯಿತು. ಜಾಕಿರ್ ಹಸನ್ ಹಾಗೂ ಶದ್ಮಾನ್ ಇಸ್ಲಾಂ ಮೊದಲ ವಿಕೆಟ್‌ಗೆ 62 ರನ್ ಜೊತೆಯಾಟವಾಡಿದರು. ಆದರೆ ಇವರಿಬ್ಬರನ್ನು ಜಸ್‌ಪ್ರೀತ್ ಬೂಮ್ರಾ ಬೇರ್ಪಡಿಸಿದರು. 33 ರನ್ ಗಳಿಸಿದ್ದ ಜಾಕಿರ್, ಬೂಮ್ರಾ ಎಸೆತದಲ್ಲಿ ಜೈಸ್ವಾಲ್ ಹಿಡಿದ ಆಕರ್ಷಕ ಕ್ಯಾಚ್‌ಗೆ ಬಲಿಯಾದರು.
ದೊಡ್ಡ ಇನ್ನಿಂಗ್ಸ್‌ನ ನಿರೀಕ್ಷೆ ಮೂಡಿಸಿದ್ದ ಶದ್ಮಾನ್(35)ಗೆ ಆರ್.ಅಶ್ವಿನ್ ಪೆವಿಲಿಯನ್ ಹಾದಿ ತೋರಿದರು. ಆ ಬಳಿಕ ಕ್ರೀಸ್‌ಗೆ ಬಂದ ಮೋಮಿನುಲ್ ಹಕ್(13) ಹಾಗೂ ಮುಷ್ಫಿಕುರ್ ರಹೀಂ(13)ರನ್ನೂ ಅಶ್ವಿನ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಬಿಡಲಿಲ್ಲ. ಆದರೆ ನಜ್ಮುಲ್ ಹೊಸೈನ್(ಔಟಾಗದೆ 51) ಮಾತ್ರ ಏಕಾಂಗಿ ಹೋರಾಟ ನಡೆಸುತ್ತಿದ್ದು, 4ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಶಕೀಬ್(ಔಟಾಗದೆ 4) ಕೂಡಾ ಕ್ರೀಸ್‌ನಲ್ಲಿದ್ದಾರೆ. ಅಶ್ವಿನ್ 3, ಬೂಮ್ರಾ 1 ವಿಕೆಟ್ ಪಡೆದರು.ಸ್ಕೋರ್: ಭಾರತ ಮೊದಲ ಇನ್ನಿಂಗ್ಸ್ 376/10 ಮತ್ತು 2ನೇ ಇನ್ನಿಂಗ್ಸ್ 287/4 ಡಿಕ್ಲೇರ್(ಗಿಲ್ 119*, ರಿಷಭ್ 109, ಮೀರಾಜ್ 2-103) ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ 149/10 ಮತ್ತು 2ನೇ ಇನ್ನಿಂಗ್ಸ್ 158/4 (3ನೇ ದಿನದಂತ್ಯಕ್ಕೆ) (ನಜ್ಮುಲ್ 51*, ಶದ್ಮಾನ್ 35, ಅಶ್ವಿನ್ 3-63)