ಮೆಲ್ಬರ್ನ್: ಡಿ.26ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧ 4ನೇ ಟೆಸ್ಟ್‌ಗೆ ಸಜ್ಜಾಗುತ್ತಿರುವ ಭಾರತ ತಂಡ ಗಾಯದ ಸುಳಿಯಲ್ಲಿ ಸಿಲುಕಿದೆ. ನೆಟ್ ಪ್ರಾಕ್ಟೀಸ್ ವೇಳೆ ಕೆಲ ಪ್ರಮುಖ ಆಟಗಾರರಿಗೆ ಚೆಂಡು ಬಡಿದಿದ್ದು, ಸಂಭಾವ್ಯ ಗಾಯದಿಂದ ಪಾರಾಗಿದ್ದಾರೆ.
ಆದರೂ ಮಹತ್ವದ ಟೆಸ್ಟ್‌ಗೂ ಮುನ್ನ ಆಟಗಾರರ ಫಿಟ್ನೆಸ್ ಬಗ್ಗೆ ತಂಡದಲ್ಲಿ ಆತಂಕ ಎದುರಾಗಿದೆ.ಸರಣಿಯಲ್ಲಿ ಭಾರತದ ಗರಿಷ್ಠ ರನ್ ಸರದಾರ ಎನಿಸಿಕೊಂಡಿರುವ ಕೆ.ಎಲ್.ರಾಹುಲ್ ಶನಿವಾರ ಅಭ್ಯಾಸ ನಿರತರಾಗಿದ್ದಾಗ ಕೈಗೆ ಚೆಂಡು ಬಡಿದಿತ್ತು. ದೊಡ್ಡ ಅಪಾಯವಿಲ್ಲದಿದ್ದರೂ ಅವರ ಮೇಲೆ ವೈದ್ಯಕೀಯ ಸಿಬ್ಬಂದಿ ನಿಗಾ ಇಟ್ಟಿದೆ. ಈ ನಡುವೆ ಭಾನುವಾರ ನೆಟ್ ಪ್ರಾಕ್ಟೀಸ್ ವೇಳೆ ನಾಯಕ ರೋಹಿತ್ ಶರ್ಮಾ ಮೊಣಕಾಲಿಗೆ ಚೆಂಡು ಬಡಿದಿದೆ.
ಅವರು ಅಭ್ಯಾಸ ಮುಂದುವರಿಸಿದರೂ, ಬಳಿಕ ಫಿಸಿಯೋಗಳು ರೋಹಿತ್‌ರ ಮೊಣಕಾಲಿಗೆ ಐಸ್ ಪ್ಯಾಕ್ ಇಟ್ಟು ಉಪಚರಿಸಿದ್ದಾರೆ. ಕಾಲಿನಲ್ಲಿ ನೋವಿದ್ದರೂ ಶೀಘ್ರವಾಗಿ ಸಂಪೂರ್ಣ ಗುಣಮುಖರಾಗುವ ನಿರೀಕ್ಷೆಯಲ್ಲಿದ್ದಾರೆ.ಮತ್ತೊಂದೆಡೆ ವೇಗದ ಬೌಲರ್ ಆಕಾಶ್‌ದೀಪ್ ಕೈಗೂ ಭಾನುವಾರ ಚೆಂಡು ಬಡಿದಿದೆ. ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾಗ ಚೆಂಡು ಆಕಾಶ್‌ರ ಕೈಗೆ ತಾಗಿದೆ. ಇದರಿಂದ ನೋವಿನಿಂದ ಚೀರಾಡಿದ್ದು, ಕೂಡಲೇ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ.
ಇಬ್ಬರ ಬಗ್ಗೆಯೂ ಆಕಾಶ್‌ದೀಪ್ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಅಭ್ಯಾಸದ ವೇಳೆ ಇದೆಲ್ಲಾ ಸಹಜ ಎಂದಿದ್ದಾರೆ. ಪ್ರಾಕ್ಟೀಸ್ ವೇಳೆ ಇಂತಹದ್ದೆಲ್ಲಾ ನಡೆಯುತ್ತಿರುತ್ತದೆ. ಸದ್ಯ ತಂಡದಲ್ಲಿ ಯಾರೂ ಕೂಡಾ ಗಾಯಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.ಸದ್ಯ 5 ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ. ಪರ್ತ್ ಟೆಸ್ಟ್‌ನಲ್ಲಿ ಭಾರತ ಗೆದ್ದಿದ್ದರೆ, ಅಡಿಲೇಡ್‌ನ ಪಿಂಕ್ ಬಾಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ತನ್ನದಾಗಿಸಿಕೊಂಡಿತ್ತು. ಮಳೆ ಪೀಡಿತ ಬ್ರಿಸ್ಬೇನ್ ಟೆಸ್ಟ್ ಡ್ರಾಗೊಂಡಿತ್ತು.
ಪ್ರಾಕ್ಟೀಸ್ ಪಿಚ್ ಬಗ್ಗೆ ಟೀಂ ಇಂಡಿಯಾ ಅತೃಪ್ತಿ
ಅಭ್ಯಾಸಕ್ಕೆ ಒದಗಿಸಿದ ಪಿಚ್ ಬಗ್ಗೆ ಭಾರತ ತಂಡ ಅತೃಪ್ತಿ ಹೊಂದಿದೆ ಎಂದು ವರದಿಯಾಗಿದೆ. ಸಾಮಾನ್ಯವಾಗಿ ಮೆಲ್ಬರ್ನ್ ಕ್ರೀಡಾಂಗಣದ ಪಿಚ್‌ನಲ್ಲಿ ಹೆಚ್ಚಿನ ಬೌನ್ಸ್ ಇರಲಿದೆ. ಆದರೆ ಅಭ್ಯಾಸದ ಪಿಚ್‌ನಲ್ಲಿ ಬೌನ್ಸ್ ಕಂಡುಬರುತ್ತಿಲ್ಲ. ಚೆಂಡು ಸಾಧಾರಣ ಎತ್ತರಕ್ಕೆ ಬೌನ್ಸ್ ಆಗುತ್ತಿದೆ. ಇದು ಭಾರತೀಯರನ್ನು ತೊಂದರೆಗೆ ಸಿಲುಕಿಸುವ ತಂತ್ರ ಎಂದು ವಿಶ್ಲೇಷಿಸಲಾಗುತ್ತಿದೆ.