ನವದೆಹಲಿ: ದಿಗ್ಗಜ ಕ್ರಿಕೆಟಿಗರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಒಂದು ವರ್ಷಕ್ಕೂ ಹೆಚ್ಚು ಸಮಯದ ಬಳಿಕ ಭಾರತ ಟಿ20 ತಂಡಕ್ಕೆವಾಪಸಾಗಿದ್ದು, ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಸರಣಿಗೆ ಆಯ್ಕೆಯಾಗಿದ್ದಾರೆ. ಈ ಸರಣಿಯು ಮುಂಬರುವ ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡ ಆಡಲಿರುವ ಕೊನೆಯ ಅಂತಾರಾಷ್ಟ್ರೀಯ ಟಿ20 ಸರಣಿ ಆಗಿದ್ದು, ವಿಶ್ವಕಪ್ ತಂಡದಲ್ಲೂ ರೋಹಿತ್ ಹಾಗೂ ಕೊಹ್ಲಿ ಇರಲಿದ್ದಾರೆ ಎನ್ನುವ ಸುಳಿವನ್ನು ಬಿಸಿಸಿಐ ಕೊಟ್ಟಂತಿದೆ.ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಇಬ್ಬರೂ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ, ರೋಹಿತ್‌ರನ್ನೇ ನಾಯಕನನ್ನಾಗಿ ನೇಮಿಸಲಾಗಿದ್ದು, ವಿಶ್ವಕಪ್‌ನಲ್ಲೂ ಅವರೇ ಭಾರತವನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ.2022ರ ನವೆಂಬರ್‌ನಲ್ಲಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಸೋತ ಬಳಿಕ, ರೋಹಿತ್ ಹಾಗೂ ಕೊಹ್ಲಿ ಇಬ್ಬರೂ ಅಂ.ರಾ. ಟಿ20 ಪಂದ್ಯವನ್ನಾಡಿಲ್ಲ, ಆದರೆ ಜೂನ್‌ನಲ್ಲಿ ವೆಸ್ಟ್‌ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಈ ಇಬ್ಬರು ಹಿರಿಯ ಆಟಗಾರರ ಅವಶ್ಯಕತೆ ತಂಡಕ್ಕಿದೆ ಎನ್ನುವುದನ್ನು ಮನಗಂಡಿರುವ ಬಿಸಿಸಿಐ ಆಯ್ಕೆ ಸಮಿತಿ, ಇಬ್ಬರನ್ನೂ ತಂಡಕ್ಕೆ ವಾಪಸ್ ಕರೆ ತಂದಿದೆ.2022ರ ಟಿ20 ವಿಶ್ವಕಪ್ ಬಳಿಕ ಭಾರತವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸುತ್ತಿದ್ದು, ಏಕದಿನ ವಿಶ್ವಕಪ್‌ನಲ್ಲಿ ಅವರು ಗಾಯಗೊಂಡು ಕ್ರಿಕೆಟ್‌ನಿಂದ ದೂರ ಉಳಿದ ಬಳಿಕ ಆಸ್ಟ್ರೇಲಿಯಾ ಹಾಗೂ ದ.ಆಫ್ರಿಕಾ ವಿರುದ್ಧದ ಸರಣಿಗಳಲ್ಲಿ ಸೂರ್ಯಕುಮಾರ್ ಹೆಗಲಿಗೆ ನಾಯಕತ್ವದ ಹೊಣೆ ಹೊರಿಸಲಾಗಿತ್ತು. ಈ ಇಬ್ಬರೂ ಗಾಯದಿಂದಾಗಿ ಇನ್ನೂ ಒಂದೆರಡು ತಿಂಗಳುಗಳ ಕಾಲ ಕ್ರಿಕೆಟ್ ಅಂಕಣದಿಂದ ದೂರ ಉಳಿಯಲಿದ್ದು, ಮಾರ್ಚ್‌ನಲ್ಲಿ ಆರಂಭಗೊಳ್ಳಲಿರುವ ಐಪಿಎಲ್ ವೇಳೆಗೆ ಫಿಟ್ ಆಗುವ ನಿರೀಕ್ಷೆ ಇದೆ.ಋತುರಾಜ್ ಕೂಡ ಗಾಯಾಳು: ಕಳೆದ ತಿಂಗಳು ದ.ಆಫ್ರಿಕಾದಲ್ಲಿ ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದ ಋತುರಾಜ್ ಗಾಯಕ್ವಾಡ್ ಇನ್ನೂ ಸಂಪೂರ್ಣ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಇನ್ನು 15 ಸದಸ್ಯರ ತಂಡದಲ್ಲಿ ಕೆ.ಎಲ್.ರಾಹುಲ್‌ಗೆ ಜಾಗ ಸಿಕ್ಕಿಲ್ಲ. ಕ್ರಿಕೆಟ್‌ನಿಂದ ಕೆಲ ಸಮಯ ದೂರ ಉಳಿಯಲು ನಿರ್ಧರಿಸಿರುವ ಇಶಾನ್ ಕಿಶನ್‌ರನ್ನೂ ಆಯ್ಕೆ ಮಾಡಿಲ್ಲ.ವಿಕೆಟ್ ಕೀಪರ್ ಜಿತೇಶ್ ಶರ್ಮಾ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದು, ಕಳೆದ ವರ್ಷ ಆಗಸ್ಟ್‌ನಲ್ಲಿ ಐರ್ಲೆಂಡ್ ಪ್ರವಾಸದ ಬಳಿಕ ಸ್ಥಾನ ಸಿಗದೆ ನಿರಾಸೆ ಅನುಭವಿಸಿದ್ದ ಸಂಜು ಸ್ಯಾಮ್ಸನ್‌ಗೆ ಈ ಸಲ ಅದೃಷ್ಟ ಒಲಿದಿದೆ. ಆಲ್ರೌಂಡರ್ ಸ್ಥಾನವನ್ನು ಶಿವಂ ದುಬೆ ತಮ್ಮದಾಗಿಸಿಕೊಂಡಿದ್ದಾರೆ.ಬೂಮ್ರಾ, ಶ್ರೇಯಸ್‌ಗೆ ವಿಶ್ರಾಂತಿ: ಮುಂಬರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಮಹತ್ವದ ಟೆಸ್ಟ್ ಸರಣಿಗೂ ಮುನ್ನ ಪ್ರಮುಖ ಆಟಗಾರರಾದ ಜಸ್‌ಪ್ರೀತ್ ಬೂಮ್ರಾ, ಮೊಹಮದ್ ಸಿರಾಜ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ.ಅರ್ಶ್‌ದೀಪ್ ಸಿಂಗ್, ಆವೇಶ್ ಖಾನ್ ಹಾಗೂ ಮುಕೇಶ್ ಕುಮಾರ್ ತಂಡದಲ್ಲಿರುವ ವೇಗಿಗಳು, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್ ಸ್ಪಿನ್ ದಾಳಿ ನಡೆಸಲು ಸಜ್ಜಾಗಿದ್ದಾರೆ.ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್‌ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಅರ್ಶ್‌ದೀಪ್ ಸಿಂಗ್, ಆವೇಶ್ ಖಾನ್, ಮುಕೇಶ್ ಕುಮಾರ್.ಸರಣಿ ವೇಳಾಪಟ್ಟಿ: 1ನೇ ಟಿ20-ಡಿ.11 ಮೊಹಾಲಿ, 2ನೇ ಟಿ20- ಡಿ.14 ಇಂದೋರ್, 3ನೇ ಟಿ20- ಡಿ.17 ಬೆಂಗಳೂರು. ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ, ರೋಹಿತ್ ಆಡ್ಬೇಕು: ದಾದಾ
ಕೋಲ್ಕತಾ: ಮುಂಬರುವ ಐಸಿಸಿ ಟಿ20 ವಿಶ್ವಕಪ್ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಸ್ಥಾನ ನೀಡಬೇಕು ಎಂದು ಬಿಸಿಸಿಐ ಮಾಜಿ ಅಧ್ಯಕ್ಷ, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಿಸಿದ್ದಾರೆ. ಕಳೆದ 14 ತಿಂಗಳಿಂದ ಅಂ.ರಾ.ಟಿ20 ಪಂದ್ಯವನ್ನಾಡದಿದ್ದರೂ ಈಗಲೂ ಟಿ20 ಕ್ರಿಕೆಟ್‌ನಲ್ಲಿ ಇವರಿಬ್ಬರು ಪ್ರಸ್ತುತ, ಇಬ್ಬರ ಸೇವೆ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಅಗತ್ಯವಿದೆ. ರೋಹಿತ್‌ರನ್ನೇ ನಾಯಕನನ್ನಾಗಿ ನೇಮಿಸಬೇಕು’ ಎಂದು ಗಂಗೂಲಿ ಹೇಳಿದ್ದಾರೆ.