ರೋಹಿತ್‌ ಗರ್ಜನೆಗೆ ಇಂಗ್ಲೆಂಡ್ ಢಮಾರ್‌ : ಕಟಕ್‌ನಲ್ಲಿ ಟೀಂ ಇಂಡಿಯಾಗೆ ಸರಣಿ ಗೆಲುವು

KannadaprabhaNewsNetwork | Updated : Feb 10 2025, 04:10 AM IST

ಸಾರಾಂಶ

2ನೇ ಏಕದಿನ: ಭಾರತಕ್ಕೆ 4 ವಿಕೆಟ್‌ ಜಯ. 3 ಪಂದ್ಯದ ಸರಣಿ ಭಾರತದ ಕೈವಶ । ದೀರ್ಘಕಾಲ ಬಳಿಕ ರೋಹಿತ್‌ ಶತಕದಬ್ಬರ ಇಂಗ್ಲೆಂಡ್‌ 49.5 ಓವರ್‌ 304ಕ್ಕೆ ಆಲೌಟ್. 44.3 ಓವರಲ್ಲೇ ಗೆದ್ದ ಭಾರತ. ರೋಹಿತ್‌ 90 ಎಸೆತಕ್ಕೆ 119 ರನ್‌.

ಕಟಕ್‌: ರೋಹಿತ್‌ ಶರ್ಮಾ ಅಬ್ಬರಿಸಿದರೆ ಎದುರಾಳಿ ತಂಡಕ್ಕೆ ಉಳಿಗಾಲವಿಲ್ಲ ಎಂಬುದು ಎಲ್ಲರಿಗೂ ಗೊತ್ತು. ದೀರ್ಘ ಕಾಲದಿಂದ ವೈಫಲ್ಯ ಅನುಭವಿಸುತ್ತಾ, ಗಾಯಗೊಂಡ ಹುಲಿಯಂತಿದ್ದ ರೋಹಿತ್‌ ಈಗ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಇಂಗ್ಲೆಂಡ್‌ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ರೋಹಿತ್‌ ಸ್ಫೋಟಕ ಶತಕ ಸಿಡಿಸಿದ್ದು, ತಂಡಕ್ಕೆ 4 ವಿಕೆಟ್‌ ಗೆಲುವು ತಂದುಕೊಟ್ಟಿದ್ದಾರೆ. ಜೊತೆಗೆ, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಭಾರತಕ್ಕೆ ಸರಣಿ ಗೆಲುವಿನ ಉಡುಗೊರೆ ನೀಡಿದ್ದಾರೆ.

2023ರ ಏಕದಿನ ವಿಶ್ವಕಪ್‌ ಬಳಿಕ ರೋಹಿತ್‌ರ ಬ್ಯಾಟ್‌ ಸದ್ದು ಮಾಡಿದ್ದೇ ಕಮ್ಮಿ. ವ್ಯಾಪಕ ಟೀಕೆಗೂ ಗುರಿಯಾಗಿದ್ದ ರೋಹಿತ್‌ ಕಟಕ್‌ ಪಂದ್ಯದಲ್ಲಿ ಎಲ್ಲರ ಬಾಯಿ ಮುಚ್ಚುವಂತೆ ಮಾಡಿದರು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದು ಇಂಗ್ಲೆಂಡ್‌. ಭಾರತದ ದಾಳಿ ಎದುರಿಸಿ 304 ರನ್‌ ಗಳಿಸಿದರೂ, 49.5 ಓವರ್‌ಗಳಲ್ಲಿ ಆಲೌಟಾಯಿತು. ದೊಡ್ಡ ಮೊತ್ತವಾದರೂ ರೋಹಿತ್‌ ಅಬ್ಬರದ ಮುಂದೆ ಭಾರತಕ್ಕೆ ಸುಲಭ ತುತ್ತಾಯಿತು. 

ಮೊದಲ ವಿಕೆಟ್‌ಗೆ ಶುಭ್‌ಮನ್‌ ಗಿಲ್‌ ಜೊತೆಗೂಡಿ 100 ಎಸೆತಗಳಲ್ಲಿ 136 ರನ್‌ ಸೇರಿಸಿದರು. ಶುಭ್‌ಮನ್‌ 60 ರನ್‌ಗೆ ಔಟಾದರೂ, ಬೌಂಡರಿ, ಸಿಕ್ಸರ್‌ ಮಳೆ ಸುರಿಸಿದ ರೋಹಿತ್‌ 76 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಒಟ್ಟು 90 ಎಸೆತ ಎದುರಿಸಿ 12 ಬೌಂಡರಿ, 7 ಸಿಕ್ಸರ್‌ಗಳೊಂದಿಗೆ 119 ರನ್‌ ಸಿಡಿಸಿದರು. 30ನೇ ಓವರ್‌ನಲ್ಲಿ ರೋಹಿತ್‌ ಔಟಾದ ಬಳಿಕ ಶ್ರೇಯಸ್‌ ಅಯ್ಯರ್‌ 44, ಅಕ್ಷರ್‌ ಪಟೇಲ್‌ ಔಟಾಗದೆ 41 ರನ್‌ ಗಳಿಸಿ ತಂಡವನ್ನು 44.3 ಓವರ್‌ಗಳಲ್ಲಿ ಗೆಲ್ಲಿಸಿದರು.

ರೂಟ್‌, ಡಕೆಟ್‌ ಫಿಫ್ಟಿ: ಇದಕ್ಕೂ ಮೊದಲು ಇಂಗ್ಲೆಂಡ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿತು. ಬೆನ್‌ ಡಕೆಟ್‌ 56 ಎಸೆತಗಳಲ್ಲಿ 65, ಜೋ ರೂಟ್‌ 72 ಎಸೆತಗಳಲ್ಲಿ 69 ರನ್‌ ಸಿಡಿಸಿದರು. ಲಿವಿಂಗ್‌ಸ್ಟೋನ್‌ 41, ಬಟ್ಲರ್‌ 34, ಹ್ಯಾರಿ ಬ್ರೂಕ್‌ 31 ರನ್‌ ಗಳಿಸಿ ತಂಡವನ್ನು 300ರ ಗಡಿ ದಾಟಿಸಿದರು. ಜಡೇಜಾ 3 ವಿಕೆಟ್‌ ಕಿತ್ತರು.ಸ್ಕೋರ್‌: ಇಂಗ್ಲೆಂಡ್‌ 49.5 ಓವರಲ್ಲಿ 304/10 (ರೂಟ್‌ 69, ಡಕೆಟ್‌ 65, ಜಡೇಜಾ 3-35), ಭಾರತ 44.3 ಓವರಲ್ಲಿ 308/6 (ರೋಹಿತ್‌ 119, ಶುಭ್‌ಮನ್‌ 60, ಶ್ರೇಯಸ್‌ 44, ಅಕ್ಷರ್‌ ಔಟಾಗದೆ 41, ಓವರ್‌ಟನ್‌ 2-27)

ಪಂದ್ಯಶ್ರೇಷ್ಠ: ರೋಹಿತ್‌ ಶರ್ಮಾ

ಅಂ.ರಾ. ಕ್ರಿಕೆಟ್‌ನಲ್ಲಿ ರೋಹಿತ್‌ 49 ಶತಕ

ರೋಹಿತ್‌ ಇಂಗ್ಲೆಂಡ್ ವಿರುದ್ಧ ಭಾನುವಾರ ಸಿಡಿಸಿದ್ದು, ಅಂ.ರಾ. ಕ್ರಿಕೆಟ್‌ನಲ್ಲಿ ಅವರ 49ನೇ ಶತಕ. ಗರಿಷ್ಠ ಶತಕ ಸರದಾರರ ಪಟ್ಟಿಯಲ್ಲಿ ರೋಹಿತ್‌ ಜಂಟಿ 10ನೇ ಸ್ಥಾನಕ್ಕೇರಿದ್ದಾರೆ. ಸಚಿನ್‌ 100 ಶತಕದೊಂದಿಗೆ ನಂ.1 ಸ್ಥಾನದಲ್ಲಿದ್ದಾರೆ. ರೋಹಿತ್‌ ಭಾರತೀಯರ ಪೈಕಿ 3ನೇ ಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ(81)ಗೆ 2ನೇ ಸ್ಥಾನ. ಇನ್ನು, ರೋಹಿತ್‌ ಏಕದಿನದಲ್ಲಿ 32ನೇ ಶತಕ ಪೂರ್ಣಗೊಳಿಸಿದ್ದು, ಗರಿಷ್ಠ ಶತಕದ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ 50, ಸಚಿನ್‌ 49 ಶತಕದೊಂದಿಗೆ ಅಗ್ರ 2 ಸ್ಥಾನಗಳಲ್ಲಿದ್ದಾರೆ.

76 ಎಸೆತ: 76 ಎಸೆತದಲ್ಲಿ ರೋಹಿತ್‌ ಶತಕ ಪೂರ್ಣ. ಇದು ಅವರ 2ನೇ ವೇಗದ ಶತಕ. 2023ರಲ್ಲಿ ಆಫ್ಘನ್‌ ವಿರುದ್ಧ 63 ಎಸೆತಕ್ಕೆ ಶತಕ ಬಾರಿಸಿದ್ದರು.

Share this article