ಬೆಂಗಳೂರು : ಭಾರತ ಹಾಗೂ ಪಾಕಿಸ್ತಾನ ನಡುವಿನ ಯುದ್ಧ ಪರಿಸ್ಥಿತಿಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಐಪಿಎಲ್, ಶನಿವಾರದಿಂದ ಪುನಾರಂಭಗೊಳ್ಳಲಿದೆ. ಶನಿವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತಾ ನೈಟ್‌ರೈಡರ್ಸ್ ವಿರುದ್ಧ ಸೆಣಸಲಿದೆ.
ಈ ಆವೃತ್ತಿಯ ಉದ್ಘಾಟನಾ ಪಂದ್ಯವೂ ಈ ಎರಡು ತಂಡಗಳ ನಡುವೆಯೇ ನಡೆದಿತ್ತು. ಇದೀಗ ಪುನಾರಂಭವೂ ಆರ್‌ಸಿಬಿ-ಕೆಕೆಆರ್ ಮುಖಾಮುಖಿಯೊಂದಿಗೇ ಆಗಲಿದೆ. ಆರ್‌ಸಿಬಿ ಈ ಪಂದ್ಯ ಗೆದ್ದರೆ, ಪ್ಲೇ-ಆಫ್‌ಗೆ ಅಧಿಕೃತವಾಗಿ ಪ್ರವೇಶಿಸಲಿದ್ದು, ಕೆಕೆಆರ್ ಸೋಲುಂಡರೆ ಟೂರ್ನಿಯಿಂದ ಹೊರಬೀಳಲಿದೆ. ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ ಬಳಿಕ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಪಂದ್ಯವಾಡಲಿದ್ದು, ಅವರ ಮೇಲೆ ಎಲ್ಲರ ಕಣ್ಣಿದೆ.
ಇನ್ನು, ಚೆನ್ನೈ ವಿರುದ್ಧದ ಪಂದ್ಯದ ವೇಳೆ ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದ ನಾಯಕ ರಜತ್ ಪಾಟೀದಾರ್ ಚೇತರಿಸಿಕೊಂಡಿದ್ದು, ಈ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತ. ಆದರೆ ಕಳೆದ 5 ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ದೊಡ್ಡ ಇನ್ನಿಂಗ್ಸ್ ಮೂಡಿಬಂದಿಲ್ಲ. ಜೋಶ್ ಹೇಜಲ್‌ವುಡ್ ಅನುಪಸ್ಥಿತಿ ಆರ್‌ಸಿಬಿಗೆ ಕಾಡಲಿದ್ದು, ಲುಂಗಿ ಎನ್‌ಗಿಡಿ ಮೇಲೆ ಹೆಚ್ಚಿನ ಜವಾಬ್ದಾರಿ ಇರಲಿದೆ.
ದೇವದತ್ ಪಡಿಕ್ಕಲ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಕಾರಣ ಅವರ ಬದಲು ಮಯಾಂಕ್ ಅಗರ್‌ವಾಲ್ ಆರ್‌ಸಿಬಿಗೆ ಸೇರ್ಪಡೆಗೊಂಡಿದ್ದಾರೆ. ಕರ್ನಾಟಕದ ನಾಯಕ 3ನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆ ಇದ್ದು, ಸಿಕ್ಕಿರುವ ಅವಕಾಶವನ್ನು ಉಪಯೋಗಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಮೋಯಿನ್ ಅಲಿ ಹಾಗೂ ರೋವ್ಮನ್ ಪೋವೆಲ್ ಭಾರತಕ್ಕೆ ವಾಪಸಾಗದಿದ್ದರೂ, ಇವರಿಬ್ಬರ ಅನುಪಸ್ಥಿತಿ ಕೆಕೆಆರ್‌ಗೆ ಹೆಚ್ಚಾಗಿ ಏನೂ ಕಾಡುವುದಿಲ್ಲ. ತಂಡ ಸುನಿಲ್ ನರೈನ್, ಆ್ಯಂಡ್ರೆ ರಸೆಲ್, ವರುಣ್ ಚಕ್ರವರ್ತಿ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ: ಸಾಲ್ಟ್, ಕೊಹ್ಲಿ, ಮಯಾಂಕ್, ಪಾಟೀದಾರ್ (ನಾಯಕ), ಜಿತೇಶ್, ಶೆಫರ್ಡ್, ಡೇವಿಡ್, ಕೃನಾಲ್, ಭುವನೇಶ್ವರ್, ಯಶ್ ದಯಾಳ್, ಲುಂಗಿ ಎನ್‌ಗಿಡಿ, ಸುಯಶ್ ಶರ್ಮಾ.
ಕೆಕೆಆರ್: ನರೈನ್, ಗುರ್ಬಾಜ್, ರಹಾನೆ (ನಾಯಕ), ವೆಂಕಿ ಅಯ್ಯರ್, ರಘುವಂಶಿ/ಪಾಂಡೆ, ರಿಂಕು, ರಸೆಲ್, ರಮಣ್‌ದೀಪ್, ವೈಭವ್, ರಾಣಾ, ವರುಣ್, ನೋಕಿಯ/ಸ್ಪೆನ್ಸರ್.ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
2015ರ ಬಳಿಕ ಚಿನ್ನಸ್ವಾಮಿಯಲ್ಲಿ
ಕೆಕೆಆರ್ ವಿರುದ್ಧ ಗೆದ್ದಿಲ್ಲ ಆರ್‌ಸಿಬಿ!
ತವರಿನಲ್ಲಿ ಕೆಕೆಆರ್ ವಿರುದ್ಧ ಆರ್‌ಸಿಬಿ ಕಳಪೆ ದಾಖಲೆ ಹೊಂದಿದೆ. ತಂಡ ಕೊನೆಯ ಬಾರಿಗೆ ಕೆಕೆಆರ್ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೆದ್ದಿದ್ದು 2015ರಲ್ಲಿ. ಆ ಬಳಿಕ 5 ಪಂದ್ಯಗಳಲ್ಲಿ ಸೋಲುಂಡಿದೆ. ಈ ಬಾರಿ ಗೆದ್ದು ಸೇಡು ತೀರಿಸಿಕೊಳ್ಳಲು ಆರ್‌ಸಿಬಿ ಕಾಯುತ್ತಿದೆ.
ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ
ಶನಿವಾರ ಸಂಜೆ ಬೆಂಗಳೂರಲ್ಲಿ ಭಾರೀ ಮಳೆ ಮುನ್ಸೂಚನೆ ಇದ್ದು, ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್-ಏರ್ ವ್ಯವಸ್ಥೆ ಇರುವ ಕಾರಣ, ಮಳೆ ನಿಂತ 20 ನಿಮಿಷದಲ್ಲಿ ಆಟ ಆರಂಭಿಸಬಹುದಾಗಿದೆ.
ಆರ್‌ಸಿಬಿಗೆ ಟಾಪ್-2ನಲ್ಲಿ
ಸ್ಥಾನ ಪಡೆಯುವ ಗುರಿ
11 ಪಂದ್ಯಗಳಲ್ಲಿ 8 ಗೆಲುವುಗಳ ಮೂಲಕ 16 ಅಂಕ ಗಳಿಸಿರುವ ಆರ್‌ಸಿಬಿಗೆ ಲೀಗ್ ಹಂತದಲ್ಲಿ ಇನ್ನೂ 3 ಪಂದ್ಯ ಬಾಕಿ ಇದೆ. ಇದರಲ್ಲಿ 2ರಲ್ಲಿ ಗೆದ್ದರೂ ತಂಡ ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆಯಲಿದೆ. ಆರ್‌ಸಿಬಿ ಕೊನೆಯ ಬಾರಿಗೆ ಅಗ್ರ-2ರಲ್ಲಿ ಸ್ಥಾನ ಪಡೆದಿದ್ದು 2016ರಲ್ಲಿ. ಆ ವರ್ಷ ತಂಡ ರನ್ನರ್-ಅಪ್ ಆಗಿತ್ತು.