ರೆಸ್ಲರ್‌ಗಳ ಜಂಗೀಕುಸ್ತಿಗೆ ಕೊನೆಗೂ ತಾರ್ಕಿಕ ಅಂತ್ಯ!

KannadaprabhaNewsNetwork | Published : Dec 22, 2023 1:30 AM

ಸಾರಾಂಶ

ಗುರುವಾರ ಪ್ರಕಟಗೊಂಡ ಡಬ್ಲ್ಯುಎಫ್‌ಐ ಚುನಾವಣೆ ಫಲಿತಾಂಶ ಕುಸ್ತಿಪಟುಗಳನ್ನು ಕುಗ್ಗಿಸಿದೆ. ತಾವು ಕುಸ್ತಿ ಫೆಡರೇಷನ್‌ನಿಂದ ನಿರ್ಗಮಿಸಿದ್ದರೂ ತಮ್ಮ ಬೆಂಬಲಿಗರು, ಆಪ್ತರನ್ನು ಸಮಿತಿಗೆ ಕರೆತರಲು ಬ್ರಿಜ್‌ ಯಶಸ್ವಿಯಾಗಿದ್ದಾರೆ.

ನವದೆಹಲಿ: ಕಳೆದೊಂದು ವರ್ಷದಿಂದಲೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದ ಭಾರತೀಯ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಹಾಗೂ ದೇಶದ ಅಗ್ರ ಕುಸ್ತಿಪಟುಗಳ ನಡುವಿನ ಸಂಘರ್ಷಕ್ಕೆ ಈಗ ತಾರ್ಕಿಕ ಅಂತ್ಯ ಲಭಿಸಿದೆ. ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿದ್ದ ಸಂಸದ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಕುಸ್ತಿಪಟುಗಳು ಡೆಲ್ಲಿ ಜಂತರ್‌ ಮಂತರ್‌ ಸೇರಿದಂತೆ ವಿವಿಧೆಡೆ ತೀವ್ರ ಹೋರಾಟ ನಡೆಸಿದ್ದರೂ, ಗುರುವಾರ ಪ್ರಕಟಗೊಂಡ ಡಬ್ಲ್ಯುಎಫ್‌ಐ ಚುನಾವಣೆ ಫಲಿತಾಂಶ ಕುಸ್ತಿಪಟುಗಳನ್ನು ಕುಗ್ಗಿಸಿದೆ. ತಾವು ಕುಸ್ತಿ ಫೆಡರೇಷನ್‌ನಿಂದ ನಿರ್ಗಮಿಸಿದ್ದರೂ ತಮ್ಮ ಬೆಂಬಲಿಗರು, ಆಪ್ತರನ್ನು ಸಮಿತಿಗೆ ಕರೆತರಲು ಬ್ರಿಜ್‌ ಯಶಸ್ವಿಯಾಗಿದ್ದಾರೆ.

ಕುಸ್ತಿಪಟುಗಳು ಜನವರಿಯಲ್ಲಿ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ಆರಂಭಿಸಿ, ಬಳಿಕ ಅದನ್ನು ವಿವಿಧ ರಾಜ್ಯಗಳಿಗೂ ಹಬ್ಬುವಂತೆ ನೋಡಿಕೊಂಡಿದ್ದರು. ರೈತ ನಾಯಕರು, ಮಹಿಳೆಯರೂ ಕುಸ್ತಿಪಟುಗಳನ್ನು ಬೆಂಬಲಿಸಿ ಹೋರಾಟಕ್ಕಿಳಿದಿದ್ದರು. ಈ ನಡುವೆ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ರನ್ನು ಭೇಟಿಯಾಗಿದ್ದ ಕುಸ್ತಿಪಟುಗಳು, ಚುನಾವಣೆಯಲ್ಲಿ ಬ್ರಿಜ್‌ ಕುಟುಂಬಸ್ಥರು, ಆಪ್ತರು ಮತ್ತು ಬೆಂಬಲಿಗರು ಸ್ಪರ್ಧಿಸದಂತೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಸಚಿವರು ಒಪ್ಪಿದ್ದ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ಪ್ರತಿಭಟನೆ ಹಿಂಪಡೆದಿದ್ದರು. ಆದರೆ ಚುನಾವಣೆಯಲ್ಲಿ ಬ್ರಿಜ್‌ ಆಪ್ತರೇ ಅಧಿಪತ್ಯ ಸಾಧಿಸಿದ್ದಾರೆ.

ಗುರುವಾರ ಚುನಾವಣೆ ಫಲಿತಾಂಶ ಹೊರಬೀಳುವುದರೊಂದಿಗೆ ಕುಸ್ತಿಪಟುಗಳು ಆಕ್ರೋಶಿತರಾಗಿದ್ದು, ತಮ್ಮ ಹೋರಾಟಕ್ಕೆ ನ್ಯಾಯ ಸಿಗದ್ದಕ್ಕೆ ಕಣ್ಣೀರು ಹಾಕಿದ್ದಾರೆ. ಒಲಿಂಪಿಕ್‌ ಪದಕ ವಿಜೇತೆ ಸಾಕ್ಷಿ ಮಲಿಕ್‌ ಕುಸ್ತಿಯಿಂದಲೇ ನಿವೃತ್ತಿ ಘೋಷಿಸಿದ್ದಾರೆ. ಮತ್ತೋರ್ವ ಅಗ್ರ ಕುಸ್ತಿಪಟುವ ವಿನೇಶ್‌ ಫೋಗಟ್‌ ಕೂಡಾ ಪ್ರಕರಣ ಅಂತ್ಯ ಕಂಡ ರೀತಿಗೆ ಅಸಮಾಧಾನಗೊಂಡಿದ್ದು, ಬ್ರಿಜ್‌ ಆಪ್ತರು ಚುನಾವಣೆಯಲ್ಲಿ ಗೆಲ್ಲುವುದರೊಂದಿಗೆ ಫೆಡರೇಷನ್‌ನಲ್ಲಿ ಮಹಿಳಾ ಕುಸ್ತಿಪಟುಗಳ ಮೇಲೆ ಕಿರುಕುಳ ಮುಂದುವರಿಯಲಿದೆ ಎಂದು ಹರಿಹಾಯ್ದಿದ್ದಾರೆ.

---

ಜಂಗೀಕುಸ್ತಿ ಟೈಮ್‌ಲೈನ್‌ಕುಸ್ತಿಪಟುಗಳು ಹಾಗೂ ಡಬ್ಲ್ಯುಎಫ್‌ಐ ನಡುವಿನ ಜಂಗೀಕುಸ್ತಿಗೆ ಸರಿಸುಮಾರು 1 ವರ್ಷ ಸಂದಿದೆ. ಕಳೆದ ಜನವರಿಯಿಂದ ಶುರುವಾಗಿ, ಗುರುವಾರದ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವ ವರೆಗೂ ಏನೆಲ್ಲಾ ಘಟನೆ ನಡೆಯಿತು ಎಂಬುದರ ಟೈಮ್‌ಲೈನ್‌ ಇಲ್ಲಿದೆ.ಜ.18: ಆಗಿನ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ವಿರುದ್ಧ ಲೈಂಗಿಕ ದೌರ್ಜನ್ಯ, ಬೆದರಿಕೆ ಆರೋಪ ಹೊರಿಸಿ ಕುಸ್ತಿಪಟುಗಳಿಂದ ಡೆಲ್ಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ಆರಂಭ.ಜ.20: ಬ್ರಿಜ್‌ ವಿರುದ್ಧ ಕುಸ್ತಿಪಟುಗಳಿಂದ ಭಾರತೀಯ ಒಲಿಂಪಿಕ್‌ ಸಂಸ್ಥೆ(ಐಒಎ) ಮುಖ್ಯಸ್ಥೆ ಪಿ.ಟಿ. ಉಷಾಗೆ ದೂರು. ತನಿಖಾ ಸಮಿತಿ ರಚಿಸುವಂತೆ ಆಗ್ರಹ. ಮೇರಿ ಕೋಮ್‌ ಸೇರಿದಂತೆ 7 ಮಂದಿಯ ಸಮಿತಿ ರಚಿಸಿದ ಐಒಎ.ಜ.21: ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ರನ್ನು ಭೇಟಿಯಾದ ಕುಸ್ತಿಪಟುಗಳು. ಬ್ರಿಜ್‌ ಪದತ್ಯಾಗ ಹಾಗೂ ಅನುರಾಗ್‌ರಿಂದ ಸೂಕ್ತ ತನಿಖೆ ಭರವಸೆ ಸಿಕ್ಕ ಬಳಿಕ ಪ್ರತಿಭಟನೆ ಕೈಬಿಟ್ಟ ರೆಸ್ಲರ್ಸ್‌. ಡಬ್ಲ್ಯುಎಫ್‌ಐ ಅಮಾನತು.ಜ.23: ತನಿಖೆಯ ಮೇಲ್ವಿಚಾರಣೆಗೆ ಐವರ ಸಮಿತಿ ರಚನೆ. ವರದಿ ಸಲ್ಲಿಕೆಗೆ 4 ವಾರಗಳ ಕಾಲಾವಕಾಶ. ಆದರೆ ಸಮಿತಿ ಸದಸ್ಯರ ಬಗ್ಗೆ ಕುಸ್ತಿಪಟುಗಳ ಬೇಸರ. ಏ.16: ಮೇ 7ರಂದು ಡಬ್ಲ್ಯುಎಫ್‌ಐಗೆ ಚುನಾವಣೆ ನಡೆಸುವುದಾಗಿ ಘೋಷಣೆ. ತನಿಖಾ ಸಮಿತಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ.ಏ.23: ಜಂತರ್‌ ಮಂತರ್‌ನಲ್ಲಿ ಮತ್ತೆ ಹೋರಾಟ ಶುರು. ಅಪ್ರಾಪ್ತೆ ಸೇರಿ 7 ಕುಸ್ತಿಪಟುಗಳು ಬ್ರಿಜ್‌ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಗಿ ಕುಸ್ತಿಪಟುಗಳ ಹೇಳಿಕೆ. ಆದರೆ ಎಫ್‌ಐಆರ್‌ ದಾಖಲಿಸಿಲ್ಲ ಎಂದು ಆಕ್ರೋಶ. ಏ.25: ಬ್ರಿಜ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಕುಸ್ತಿಪಟುಗಳು. ಡೆಲ್ಲಿ ಪೊಲೀಸರಿಗೆ ಸುಪ್ರೀಂನಿಂದ ನೊಟೀಸ್‌ ಜಾರಿ.ಮೇ 3: ಡೆಲ್ಲಿ ಪೊಲೀಸರು-ಕುಸ್ತಿಪಟುಗಳ ನಡುವೆ ವಾಗ್ವಾದ, ನೂಕಾಟ. ಕೆಲವರಿಗೆ ಗಾಯ. ಪೊಲೀಸರು ಕುಡಿದು ಬಂದಿದ್ದರು ಎಂದು ಕುಸ್ತಿಪಟುಗಳ ಆರೋಪ. ಪದಕ, ಪ್ರಶಸ್ತಿ ವಾಪಸ್‌ ನೀಡುವುದಾಗಿ ಬೆದರಿಕೆ.ಮೇ 11: ಪೊಲೀಸರಿಂದ 3 ಗಂಟೆಗಳ ಕಾಲ ಬ್ರಿಜ್‌ಭೂಷಣ್‌ ವಿಚಾರಣೆ.ಮೇ 28: ಹೊಸ ಸಂಸತ್‌ ಕಟ್ಟಡಕ್ಕೆ ಮುತ್ತಿಗೆಗೆ ಯತ್ನಿಸಿದ ಕುಸ್ತಿಪಟುಗಳು. ಭಾರೀ ಹೈಡ್ರಾಮಾ. ಪೊಲೀಸರಿಂದ ಕುಸ್ತಿಪಟುಗಳ ಬಂಧನ, ಬಿಡುಗಡೆ. ಬಳಿಕ ಪದಕ ಎಸೆಯಲು ಗಂಗಾ ನದಿ ಬಳಿ ಬಂದ ಕುಸ್ತಿಪಟುಗಳು.ಜೂ.7: ಬ್ರಿಜ್ ವಿರುದ್ಧ ಪೊಲೀಸರಿಂದ ತನಿಖೆ ನಡೆಸುವ ಬಗ್ಗೆ ಕ್ರೀಡಾ ಸಚಿವರಿಂದ ಭರವಸೆ ಹಾಗೂ ಜೂ.30ರ ಒಳಗಾಗಿ ಚುನಾವಣೆ ನಡೆಸುವ ಹೇಳಿಕೆ. ಕುಸ್ತಿಪಟುಗಳಿಂದ ಪ್ರತಿಭಟನೆ ವಾಪಸ್‌.ಜೂ.8: ಒತ್ತಡಕ್ಕೆ ಒಳಗಾಗಿ ಬ್ರಿಜ್‌ ವಿರುದ್ಧ ದೂರು ನೀಡಿದ್ದೆ ಎಂದ ಅಪ್ರಾಪ್ತ ಕುಸ್ತಿಪಟುವಿನ ತಂದೆ. ಕೇಸ್‌ ಹಿಂಪಡೆಯುವುದಾಗಿ ಹೇಳಿಕೆ.ಜೂ.10: ಬ್ರಿಜ್‌ಭೂಷಣ್‌ ವಿರುದ್ಧ ನ್ಯಾಯಾಲಕ್ಕೆ 1000 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ ಪೊಲೀಸರು. ಬ್ರಿಜ್‌ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಸಾಕ್ಷಿ ಇದೆ ಎಂದ ಪೊಲೀಸರು. ಆದರೆ ಫೋಕ್ಸೋ ಕೇಸ್‌ ರದ್ದತಿಗೆ ಶಿಫಾರಸು.ಜೂ.21: ಜುಲೈ 11ಕ್ಕೆ ಚುನಾವಣೆ ನಿಗದಿಪಡಿಸಿದ ಕುಸ್ತಿ ಸಂಸ್ಥೆಯ ಸ್ವತಂತ್ರ ಸಮಿತಿ. ಜೂ.25: ಚುನಾವಣೆಗೆ ಗುವಾಹಟಿ ಹೈಕೋರ್ಟ್‌ ತಡೆಯಾಜ್ಞೆ.ಜು.18: ಬ್ರಿಜ್‌ಭೂಷಣ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ಡೆಲ್ಲಿ ನ್ಯಾಯಾಲಯ.

ಜು.20: ಡಬ್ಲ್ಯುಎಫ್‌ಐ ಚುನಾವಣೆ ಆಗಸ್ಟ್‌ 12ಕ್ಕೆ ನಿಗದಿ.

ಆ.11: ಚುನಾವಣೆಗೆ ಪಂಜಾಬ್‌-ಹರ್ಯಾಣ ಹೈಕೋರ್ಟ್‌ ತಡೆಯಾಜ್ಞೆ.ಆ.23: ಚುನಾವಣೆ ನಡೆಸದ ಕಾರಣ ಡಬ್ಲ್ಯುಎಫ್‌ಐ ಅಮಾನತುಗೊಳಿಸಿದ ಜಾಗತಿಕ ಕುಸ್ತಿ ಆಡಳಿತ ಸಂಸ್ಥೆ.ಡಿ.5: ಸುಪ್ರೀಂ ಕೋರ್ಟ್‌ ಸೂಚನೆ ಬಳಿಕ ಕೊನೆಗೂ ಡಿ.21ಕ್ಕೆ ಚುನಾವಣೆ ನಿಗದಿ.ಡಿ.21: ಚುನಾವಣೆಯಲ್ಲಿ ಬ್ರಿಜ್‌ ಆಪ್ತರ ದಿಗ್ವಿಜಯ. 15 ಸ್ಥಾನಗಳ ಪೈಕಿ 13ರಲ್ಲಿ ಜಯಭೇರಿ.

Share this article