ಒಲಿಂಪಿಕ್ಸ್ : ಪದಕ ಗೆದ್ದ ಭಾರತದ ಮೊದಲ ಪುರುಷ ಶಟ್ಲರ್ ಎನಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದ ಲಕ್ಷ್ಯ ಸೇನ್ ಅವರ ಕನಸು ನುಚ್ಚುನೂರಾಗಿದೆ. ಸೋಮವಾರ 22 ವರ್ಷದ ಸೇನ್ ಅವರು ಪುರುಷರ ಸಿಂಗಲ್ಸ್ ಕಂಚಿನ ಪದಕ ಪಂದ್ಯದಲ್ಲಿ ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ 21-13, 16-21, 11-21ರಲ್ಲಿ ಆಘಾತಕಾರಿ ಸೋಲನುಭವಿಸಿದರು.
ಭಾರತ ಒಲಿಂಪಿಕ್ಸ್ ಇತಿಹಾಸದದಲ್ಲೇ ಬ್ಯಾಡ್ಮಿಂಟನ್ ಪದಕ ಗೆದ್ದಿದ್ದು 3 ಬಾರಿ. ಮೂರೂ ಮಹಿಳಾ ಸಿಂಗಲ್ಸ್‌ನಲ್ಲೇ ಲಭಿಸಿದೆ. ಪುರುಷರ ಸಿಂಗಲ್ಸ್‌ನಲ್ಲಿ ಈ ಬಾರಿ ಸೇನ್ ಪದಕ ತಂದುಕೊಡುವ ಕಾತರದಲ್ಲಿದ್ದರೂ, ಅದರಲ್ಲಿ ಯಶ ಕಾಣಲಿಲ್ಲ.ಏಷ್ಯನ್ ಚಾಂಪಿಯನ್‌ಶಿಪ್ ವಿಜೇತ, ವಿಶ್ವ ನಂ.7 ಲೀ ವಿರುದ್ಧ ಮೊದಲ ಗೇಮ್‌ನಲ್ಲಿ ಸೇನ್ ಗೆಲುವು ಸಾಧಿಸಿ 1-0 ಮುನ್ನಡೆ ಸಾಧಿಸಿದ್ದರು.
2ನೇ ಗೇಮ್‌ನಲ್ಲೂ ಆರಂಭದಲ್ಲಿ ಉತ್ತಮ ಆಟವಾಡಿದ್ದ ಸೇನ್, 8-4 ಅಂಕಗಳಲ್ಲಿ ಮುಂದಿದ್ದರು. ಆದರೆ ಬಳಿಕ ಪುಟಿದೆದ್ದ ಲೀ, 2ನೇ ಗೇಮ್ ತಮ್ಮದಾಗಿಸಿಕೊಂಡರು. 3ನೇ ಗೇಮ್‌ನಲ್ಲಿ ಸೇನ್ ಮತ್ತಷ್ಟು ಒತ್ತಡಕ್ಕೊಳಗಾದರು. ಆರಂಭಿಕ ಲಯವನ್ನು ಕಾಪಾಡಲು ವಿಫಲರಾದ ಅವರು ನಿರ್ಣಾಯಕ ಗೇಮ್‌ನಲ್ಲಿ ಸುಲಭದಲ್ಲಿ ಶರಣಾದರು. ಇದಕ್ಕೂ ಮುನ್ನ ಸೋಮವಾರ ಸೇನ್, ಸೆಮಿಫೈನಲ್‌ನಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್, ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸನ್ ವಿರುದ್ಧ 20-22, 14-21 ಗೇಮ್‌ಗಳಲ್ಲಿ ವೀರೋಚಿತ ಸೋಲು ಕಂಡಿದ್ದರು.
12 ವರ್ಷದಲ್ಲಿ ಮೊದಲ ಸಲ ಬ್ಯಾಡ್ಮಿಂಟನ್ ಪದಕವಿಲ್ಲ!
ಭಾರತ 12 ವರ್ಷಗಳಲ್ಲೇ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಪದಕದಿಂದ ವಂಚಿತವಾಗಿದೆ. 2012ರಲ್ಲಿ ಸೈನಾ ನೆಹ್ವಾಲ್ ಕಂಚು ಗೆದ್ದಿದ್ದರೆ, ಪಿ.ವಿ.ಸಿಂಧು 2016ರಲ್ಲಿ ಬೆಳ್ಳಿ ಹಾಗೂ 202ರಲ್ಲಿ ಕಂಚು ಜಯಿಸಿದ್ದರು. ಈ ಬಾರಿ ಯಾರಿಗೂ ಪದಕ ಒಲಿಯಲಿಲ್ಲ.
ಮತ್ತೆ ಮತ್ತೆ ಭಾರತಕ್ಕೆ ‘4ನೇ ಸ್ಥಾನ’ದ ಕಂಟಕ! ಭಾರತದ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದು ಅಲ್ಪದರಲ್ಲೇ ಪದಕ ತಪ್ಪಿಸಿಕೊಳ್ಳುವುದು ಹಿಂದಿನಿಂದಲೂ ಇದೆ. ಈ ಬಾರಿ ಭಾರತ 5 ವಿಭಾಗಗಳಲ್ಲಿ 4ನೇ ಸ್ಥಾನ ಪಡೆದು ಪದಕದಿಂದ ವಂಚಿತವಾಗಿದೆ. ಮಹಿಳೆಯರ 25 ಮೀ. ಏರ್ ಪಿಸ್ತೂಲ್‌ನಲ್ಲಿ ಮನು ಭಾಕರ್, ಪುರುಷರ 10 ಮೀ. ಏರ್ ರೈಫಲ್‌ನಲ್ಲಿ ಅರ್ಜುನ್ ಬಾಬುತಾ, ಆರ್ಚರಿಯ ಮಿಶ್ರ ತಂಡ ವಿಭಾಗದಲ್ಲಿ ಧೀರಜ್-ಅಂಕಿತಾ, ಸ್ಕೀಟ್ ಶೂಟಿಂಗ್‌ನ ಮಿಶ್ರ ತಂಡ ವಿಭಾಗದಲ್ಲಿ ಅನಂತ್‌ಜೀತ್-ಮಹೇಶ್ವರಿ, ಬ್ಯಾಡ್ಮಿಂಟನ್ ಪುರುಷರ ತಂಡ ವಿಭಾಗದಲ್ಲಿ ಲಕ್ಷ್ಯ ಸೇನ್ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.