ಒಲಿಂಪಿಕ್ಸ್‌ ಬಾಕ್ಸಿಂಗ್‌: ಕ್ವಾರ್ಟರಲ್ಲೇ ಸೋತ ಲವ್ಲೀನಾ, ನಿಶಾಂತ್‌; ಪದಕ ಕನಸು ಭಗ್ನ!

KannadaprabhaNewsNetwork | Updated : Aug 05 2024, 04:23 AM IST

ಸಾರಾಂಶ

ಬಾಕ್ಸಿಂಗ್‌ನಲ್ಲಿ ಭಾರತದ ಸವಾಲು ಮುಕ್ತಾಯ. ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತದ ಒಟ್ಟು 6 ಬಾಕ್ಸರ್‌ಗಳು ಸ್ಪರ್ಧಿಸಿದ್ದರು. ಆದರೆ ಯಾರೂ ಸೆಮಿಫೈನಲ್‌ ಪ್ರವೇಶಿಸಿಲ್ಲ.

ಪ್ಯಾರಿಸ್‌: ಈ ಬಾರಿ ಒಲಿಂಪಿಕ್ಸ್‌ನ ಬಾಕ್ಸಿಂಗ್‌ನಲ್ಲಿ ಪದಕ ಗೆಲ್ಲುವ ಭಾರತದ ಕನಸು ಭಗ್ನಗೊಂಡಿದೆ. ಟೋಕಿಯೋ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತ ಲವ್ಲೀನಾ ಬೊರ್ಗೊಹೈನ್‌ ಭಾನುವಾರ ಮಹಿಳೆಯರ 75 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ, ಚೀನಾದ ಲಿ ಕ್ವಿಯಾನ್‌ ವಿರುದ್ಧ 1-4 ಅಂತರದಲ್ಲಿ ಸೋಲನುಭವಿಸಿದರು. 

ಇದಕ್ಕೂ ಮುನ್ನ ಶನಿವಾರ ರಾತ್ರಿ ಪುರುಷರ ವಿಭಾಗದ 71 ಕೆ.ಜಿ. ಸ್ಪರ್ಧೆಯಲ್ಲಿ 23ರ ನಿಶಾಂತ್‌ ದೇವ್‌, ಮೆಕ್ಸಿಕೋದ ಮಾರ್ಕೊ ವೆರ್ಡೆ ವಿರುದ್ಧ 1-4 ಅಂತರದಲ್ಲಿ ಸೋಲನುಭವಿಸಿದರು. ಸೆಮಿಫೈನಲ್‌ ಪ್ರವೇಶಿಸಿದ್ದರೆ ನಿಶಾಂತ್‌ ಹಾಗೂ ಲವ್ಲೀನಾಗೆ ಕನಿಷ್ಠ ಕಂಚಿನ ಪದಕವಾದರೂ ಖಚಿತವಾಗುತ್ತಿತ್ತು. ಬಾಕ್ಸಿಂಗ್‌ನಲ್ಲಿ ಸೆಮೀಸ್‌ಗೇರಿದರಿಗೂ ಕಂಚು ನೀಡಲಾಗುತ್ತದೆ.

ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತದ ಒಟ್ಟು 6 ಬಾಕ್ಸರ್‌ಗಳು ಸ್ಪರ್ಧಿಸಿದ್ದರು. ಆದರೆ ಯಾರೂ ಸೆಮಿಫೈನಲ್‌ ಪ್ರವೇಶಿಸಿಲ್ಲ. ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತ ಬಾಕ್ಸಿಂಗ್‌ನಲ್ಲಿ ಒಟ್ಟು 3 ಪದಕ ಗೆದ್ದಿದೆ. 2008ರಲ್ಲಿ ವಿಜೇಂದರ್‌ ಸಿಂಗ್‌, 2012ರಲ್ಲಿ ಮೇರಿ ಕೋಮ್‌, 2020ರಲ್ಲಿ ಲವ್ಲೀನಾ ಕಂಚು ಜಯಿಸಿದ್ದರು.

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಬಳಿಕವೇ ನಿವೃತ್ತಿ: ದೀಪಿಕಾ

ಪ್ಯಾರಿಸ್‌ ಒಲಿಂಪಿಕ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತ ಭಾರತದ ತಾರಾ ಆರ್ಚರಿ ಪಟು ದೀಪಿಕಾ ಕುಮಾರಿ, ಒಲಿಂಪಿಕ್ಸ್‌ ಪದಕ ಗೆಲ್ಲುವವರೆಗೂ ನಿವೃತ್ತಿ ಘೋಷಿಸಲ್ಲ ಎಂದಿದ್ದಾರೆ. ಈ ಬಗ್ಗೆ ಸೋಮವಾರ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ 30ರ ದೀಪಿಕಾ, ‘ನನಗೆ ಒಲಿಂಪಿಕ್ಸ್‌ ಪದಕ ಗೆಲ್ಲಬೇಕು. ಅದುವರೆಗೂ ನಾನು ನಿವೃತ್ತಿ ಘೋಷಿಸಲ್ಲ. ಕಠಿಣ ಅಭ್ಯಾಸದೊಂದಿಗೆ ಕಮ್‌ಬ್ಯಾಕ್‌ ಮಾಡುತ್ತೇನೆ’ ಎಂದಿದ್ದಾರೆ. 2022ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದ ದೀಪಿಕಾ ಈ ವರೆಗೂ ವಿಶ್ವಕಪ್‌ನಲ್ಲಿ 11 ಚಿನ್ನದ ಜೊತೆಗೆ ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್ ಗೇಮ್ಸ್‌, ವಿಶ್ವ ಚಾಂಪಿಯನ್‌ಶಿಪ್‌, ಏಷ್ಯನ್‌ ಚಾಂಪಿಯನ್‌ಶಿಪ್‌ಗಳಲ್ಲೂ ಪದಕ ಗೆದ್ದಿದ್ದಾರೆ. ಆದರೆ ಸತತ 4 ಒಲಿಂಪಿಕ್ಸ್‌ಗಳಲ್ಲಿ ಆಡಿದರೂ ಒಂದೂ ಪದಕ ಗೆದ್ದಿಲ್ಲ.

Share this article