ಶಫಾಲಿ ದ್ವಿಶತಕ, ಸ್ಮೃತಿ ಸೆಂಚುರಿ: ಮೊದಲ ದಿನವೇ ಭಾರತ ವಿಶ್ವದಾಖಲೆಯ 525 ರನ್‌!

KannadaprabhaNewsNetwork | Updated : Jun 29 2024, 04:35 AM IST

ಸಾರಾಂಶ

ದಕ್ಷಿಣ ಆಫ್ರಿಕಾ ಮಹಿಳೆಯರ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯದಲ್ಲಿ ರನ್‌ ಹೊಳೆ. ಶಫಾಲಿ ಸ್ಫೋಟಕ ದ್ವಿಶತಕ, ಸ್ಮೃತಿ ಆಕರ್ಷಕ ಶತಕ. ಹಲವು ದಾಖಲೆ ಬರೆದ ಮೊದಲ ದಿನದಾಟ.

ಚೆನ್ನೈ: ದಕ್ಷಿಣ ಆಫ್ರಿಕಾ ಮಹಿಳೆಯರ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದ ಮೊದಲ ದಿನವೇ ಭಾರತ ವಿಶ್ವದಾಖಲೆ ಬರೆದಿದೆ. ಶಫಾಲಿ ವರ್ಮಾ ಸ್ಫೋಟಕ ದ್ವಿಶತಕ, ಸ್ಮೃತಿ ಮಂಧನಾ ಅತ್ಯಾಕರ್ಷಕ ಶತಕದ ನೆರವಿನಿಂದ ಟೀಂ ಇಂಡಿಯಾ ಶುಕ್ರವಾರ 4 ವಿಕೆಟ್‌ಗೆ ಬರೋಬ್ಬರಿ 525 ರನ್‌ ಕಲೆಹಾಕಿದೆ.

ಈ ಮೂಲಕ ಟೆಸ್ಟ್‌(ಪುರುಷ ಹಾಗೂ ಮಹಿಳಾ) ಇತಿಹಾಸದಲ್ಲೇ ಮೊದಲ ದಿನ ಗರಿಷ್ಠ ರನ್‌ ದಾಖಲಿಸಿದ ಸಾಧನೆಯನ್ನು ಭಾರತ ತನ್ನ ಹೆಸರಿಗೆ ಬರೆದುಕೊಂಡಿತು. 2002ರಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಪುರುಷರ ತಂಡ 9 ವಿಕೆಟ್‌ಗೆ 509 ರನ್‌ ಗಳಿಸಿದ್ದು ಈ ವರೆಗೂ ಟೆಸ್ಟ್‌ನಲ್ಲಿ ದಾಖಲೆಯಾಗಿತ್ತು. ಇನ್ನು, ಮಹಿಳಾ ಟೆಸ್ಟ್‌ನಲ್ಲಿ 1935ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ಇಂಗ್ಲೆಂಡ್‌ 2 ವಿಕೆಟ್‌ಗೆ 431 ರನ್‌ ಗಳಿಸಿತ್ತು. ಆ ದಾಖಲೆಯನ್ನು ಭಾರತ ಅಳಿಸಿ ಹಾಕಿದೆ.ಮೊದಲ ವಿಕೆಟ್‌ಗೆ ಜೊತೆಯಾದ ಸ್ಮೃತಿ ಮಂಧನಾ ಹಾಗೂ ಶಫಾಲಿ 292 ರನ್‌ ಜೊತೆಯಾಟವಾಡಿದರು. 161 ಎಸೆತಗಳಲ್ಲಿ 27 ಬೌಂಡರಿ, 1 ಸಿಕ್ಸರ್‌ನೊಂದಿಗೆ 149 ರನ್‌ ಸಿಡಿಸಿ ಸ್ಮೃತಿ, ಡೆಲ್ಮಿ ಟಕ್ಕರ್‌ಗೆ ವಿಕೆಟ್‌ ಒಪ್ಪಿಸಿದರೆ, ಕರ್ನಾಟಕದ ಶುಭಾ ಸತೀಶ್‌ 15 ರನ್‌ಗೆ ನಿರ್ಗಮಿಸಿದರು. ಮತ್ತೊಂದೆಡೆ ಅಬ್ಬರಿಸುತ್ತಲೇ ಇದ್ದ ಶಫಾಲಿ 197 ಎಸೆತಗಳಲ್ಲಿ 23 ಬೌಂಡರಿ, 8 ಸಿಕ್ಸರ್‌ನೊಂದಿಗೆ 205 ರನ್‌ ಸಿಡಿಸಿ ಔಟಾದರು. ಜೆಮಿಮಾ ರೋಡ್ರಿಗ್ಸ್‌ 55 ರನ್‌ ಕೊಡುಗೆ ನೀಡಿದ್ದು, ಹರ್ಮನ್‌ಪ್ರೀತ್‌ ಕೌರ್‌(ಔಟಾಗದೆ 42), ರಿಚಾ ಘೋಷ್‌(ಔಟಾಗದೆ 43) ಕ್ರೀಸ್‌ ಕಾಯ್ದುಕೊಂಡಿದ್ದಾರೆ.ಸ್ಕೋರ್‌: ಭಾರತ (ಮೊದಲ ದಿನದಂತ್ಯಕ್ಕೆ) 98 ಓವರಲ್ಲಿ 525/4 (ಶಫಾಲಿ 205, ಸ್ಮೃತಿ 149, ಟಕ್ಕರ್‌ 2-141)

ಶಫಾಲಿ ಅತಿವೇಗದ ದ್ವಿಶತಕ ಶಫಾಲಿ 194 ಎಸೆತದಲ್ಲೇ 200 ರನ್‌ ಪೂರ್ಣಗೊಳಿಸುವ ಮೂಲಕ ಮಹಿಳಾ ಟೆಸ್ಟ್‌ನಲ್ಲಿ ಅತಿವೇಗದ ದ್ವಿಶತಕ ದಾಖಲೆ ಬರೆದರು. ಇತ್ತೀಚೆಗೆ ದ.ಆಫ್ರಿಕಾ ವಿರುದ್ಧ 248 ಎಸೆತದಲ್ಲಿ ದ್ವಿಶತಕ ಬಾರಿಸಿದ್ದ ಆಸ್ಟ್ರೇಲಿಯಾದ ಆ್ಯನಾಬೆಲ್‌ ಸದರ್‌ಲೆಂಡ್‌ರ ದಾಖಲೆಯನ್ನು 20 ವರ್ಷದ ಶಫಾಲಿ ಮುರಿದರು

.292 ರನ್‌ ಜೊತೆಯಾಟ: ಸ್ಮೃತಿ-ಶಫಾಲಿ ದಾಖಲೆ

ಸ್ಮೃತಿ-ಶಫಾಲಿ 292 ರನ್‌ ಜೊತೆಯಾಟವಾಡಿದರು. ಇದು ಮಹಿಳಾ ಟೆಸ್ಟ್‌ನಲ್ಲಿ ಮೊದಲ ವಿಕೆಟ್‌ಗೆ ದಾಖಲಾದ ಅತಿ ದೊಡ್ಡ ಹಾಗೂ ಯಾವುದೇ ವಿಕೆಟ್‌ಗೆ ದಾಖಲಾದ 2ನೇ ಗರಿಷ್ಠ ರನ್‌ ಜೊತೆಯಾಟ. 1987ರಲ್ಲಿ ಆಸ್ಟ್ರೇಲಿಯಾದ ಡೆನಿಸ್‌ ಆ್ಯನೆಟ್ಸ್‌-ಲಿಂಡ್ಸೆ ರೀಲರ್‌ ಇಂಗ್ಲೆಂಡ್‌ ವಿರುದ್ಧ 3ನೇ ವಿಕೆಟ್‌ಗೆ 309 ರನ್‌ ಜೊತೆಯಾಟವಾಡಿದ್ದು ಈಗಲೂ ದಾಖಲೆ.

02ನೇ ಬ್ಯಾಟರ್‌: ಶಫಾಲಿ ಮಹಿಳಾ ಟೆಸ್ಟ್‌ನಲ್ಲಿ ಭಾರತ ಪರ ದ್ವಿಶತಕ ಬಾರಿಸಿದ 2ನೇ ಬ್ಯಾಟರ್‌. ಮಿಥಾಲಿ ರಾಜ್‌ 2002ರಲ್ಲಿ ಇಂಗ್ಲೆಂಡ್‌ ವಿರುದ್ಧ 214 ರನ್‌ ಸಿಡಿಸಿದ್ದರು.

Share this article