ಬಾರ್ಬಡೊಸ್: ಈ ಬಾರಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆಡಲಿರುವ ಕೆಲ ತಾರಾ ಆಟಗಾರರ ಮೇಲೆ ವಿಶ್ವ ಕ್ರಿಕೆಟ್ ದೃಷ್ಟಿ ನೆಟ್ಟಿದೆ. ಮಹಾಕದನದಲ್ಲಿ ಯಾವೆಲ್ಲಾ ಸ್ಟಾರ್‌ಗಳ ನಡುವೆ ಪೈಪೋಟಿ ಏರ್ಪಡಲಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ರೋಹಿತ್ ಶರ್ಮಾ vs ಮಾರ್ಕೊ ಯಾನ್ಸನ್
ಪವರ್-ಪ್ಲೇನಲ್ಲೇ ಸ್ಫೋಟಕ ಆಟವಾಡುತ್ತಿರುವ ರೋಹಿತ್ ಶರ್ಮಾಗೆ ಆರಂಭಿಕ ಸ್ಪೆಲ್‌ನಲ್ಲೇ ಮಾರಕವಾಗುತ್ತಿರುವ ಎಡಗೈ ವೇಗಿ ಮಾರ್ಕೊ ಯಾನ್ಸನ್‌ರಿಂದ ಪ್ರಬಲ ಪೈಪೋಟಿ ಎದುರಾಗಬಹುದು. ಆದರೆ ಟಿ20ಯಲ್ಲಿ ಯಾನ್ಸನ್ ವಿರುದ್ಧ ರೋಹಿತ್ 113 ರನ್ ಸಿಡಿಸಿದ್ದು, ಒಮ್ಮೆ ಮಾತ್ರ ಔಟಾಗಿದ್ದಾರೆ.
ವಿರಾಟ್ ಕೊಹ್ಲಿ vs ಕಗಿಸೋ ರಬಾಡ
ಟೂರ್ನಿಯುದ್ದಕ್ಕೂ ವಿಫಲವಾಗಿರುವ ಕೊಹ್ಲಿಗೆ ಫೈನಲ್‌ನಲ್ಲಾದರೂ ಅಬ್ಬರಿಸುವ ಕಾತರದಲ್ಲಿದ್ದಾರೆ. ಆದರೆ ಕಗಿಸೊ ರಬಾಡರ ದಾಳಿ ಎದುರಿಸುವುದು ಕೊಹ್ಲಿಗೆ ಸವಾಲಾಗಿ ಪರಿಣಮಿಸಬಹುದು. ಈ ವರೆಗೂ 13 ಅಂತಾರಾಷ್ಟ್ರೀಯ ಟಿ20 ಇನ್ನಿಂಗ್ಸ್‌ಗಳಲ್ಲಿ ರಬಾಡ ವಿರುದ್ಧ ಕೊಹ್ಲಿ 4 ಬಾರಿ ಔಟಾಗಿದ್ದು, ಕೇವಲ 51 ರನ್ ಗಳಿಸಿದ್ದಾರೆ.
ರಿಷಭ್ ಪಂತ್ vs ಕೇಶವ್ ಮಹಾರಾಜ್
ಪಂದ್ಯದಲ್ಲಿ ರಿಷಭ್-ಕೇಶವ್ ನಡುವೆ ರೋಚಕ ಪೈಪೋಟಿ ಏರ್ಪಡಬಹುದು. ರಿಷಭ್ 7 ಇನ್ನಿಂಗ್ಸ್‌ಗಳಲ್ಲಿ 171 ರನ್ ಕಲೆಹಾಕಿದ್ದಾರೆ. ಅವರು 3ನೇ ಕ್ರಮಾಂಕದಲ್ಲಿ ಆಡುತ್ತಿದ್ದು, ಮೊದಲ 10 ಓವರ್‌ಗೂ ಮುನ್ನವೇ ಕೇಶವ್‌ರ ಸ್ಪಿನ್ ದಾಳಿ ಎದುರಿಸಬೇಕಾಗಬಹುದು. ಕೇಶವ್ ಟೂರ್ನಿಯಲ್ಲಿ 9 ವಿಕೆಟ್ ಕಿತ್ತಿದ್ದಾರೆ.
ಜಸ್‌ಪ್ರೀತ್ ಬೂಮ್ರಾ vs ಕ್ವಿಂಟನ್ ಡಿ ಕಾಕ್
ಡಿ ಕಾಕ್ ಈ ವಿಶ್ವಕಪ್‌ನಲ್ಲಿ ದ.ಆಫ್ರಿಕಾದ ಗರಿಷ್ಠ ರನ್(204) ಸರದಾರ. 143ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಅವರು ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡುತ್ತಿದ್ದಾರೆ. ಆದರೆ 7 ಪಂದ್ಯಗಳಲ್ಲಿ 13 ವಿಕೆಟ್ ಕಬಳಿಸಿರುವ ಬೂಮ್ರಾ ವಿರುದ್ಧ ಡಿ ಕಾಕ್ ಯಾವ ರೀತಿ ಆಡಲಿದ್ದಾರೆ ಎಂಬ ಕುತೂಹಲವಿದೆ.
ಅಕ್ಷರ್/ಕುಲ್ದೀಪ್ vs ಹೈನ್ರಿಚ್ ಕ್ಲಾಸೆನ್
ಸ್ಪಿನ್ನರ್‌ಗಳ ಎದುರು ಕ್ಲಾಸೆನ್‌ರಷ್ಟು ಆಕ್ರಮಣಕಾರಿಯಾಗಿ ಆಡುವ ಬ್ಯಾಟರ್ ಮತ್ತೊಬ್ಬರಿಲ್ಲ. ಆದರೆ ಈ ಬಾರಿ 8 ಪಂದ್ಯದಲ್ಲಿ 112ರ ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 138 ರನ್ ಗಳಿಸಿದ್ದಾರೆ. ಬ್ಯಾಟರ್‌ಗಳನ್ನು ಸ್ಪಿನ್ ಮೋಡಿ ಮೂಲಕ ಕಾಡುತ್ತಿರುವ ಅಕ್ಷರ್ ಹಾಗೂ ಕುಲ್ದೀಪ್‌ರಿಂದ ಫೈನಲ್‌ನಲ್ಲೂ ಅಗ್ನಿಪರೀಕ್ಷೆ ಎದುರಾಗಬಹುದು.
ಮೊದಲ ಫೈನಲ್ ಮುಖಾಮುಖಿ!
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಐಸಿಸಿ ಟೂರ್ನಿಗಳಲ್ಲಿ ಇದು ಮೊದಲ ಫೈನಲ್ ಮುಖಾಮುಖಿ. ಉಭಯ ತಂಡಗಳು 2014ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೆಣಸಿದ್ದವು. ಆ ಪಂದ್ಯವನ್ನು ಭಾರತ ಗೆದ್ದಿತ್ತು.
ಈ ವಿಶ್ವಕಪ್‌ನ ಎರಡು ಶ್ರೇಷ್ಠ ತಂಡಗಳ ನಡುವೆ ಫೈನಲ್!
ಭಾರತ ಹಾಗೂ ದಕ್ಷಿಣ ಆಫ್ರಿಕಾ ಈ ವಿಶ್ವಕಪ್‌ನ ಶ್ರೇಷ್ಠ ತಂಡಗಳು ಎನ್ನುವುದರಲ್ಲಿ ಅನುಮಾನವಿಲ್ಲ. ಎರಡೂ ತಂಡಗಳು ಅಜೇಯವಾಗಿ ಫೈನಲ್‌ಗೇರಿವೆ. ಎರಡೂ ತಂಡಗಳು ಗುಂಪು, ಸೂಪರ್-8 ಹಂತದಲ್ಲಿ ತಾವಿದ್ದ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದವು. ದ.ಆಫ್ರಿಕಾ ಒಟ್ಟು 8 ಜಯದೊಂದಿಗೆ ಫೈನಲ್‌ಗೇರಿದರೆ, ಕೆನಡಾ ವಿರುದ್ಧ ಪಂದ್ಯ ರದ್ದಾದ ಕಾರಣ 7 ಜಯದೊಂದಿಗೆ ಭಾರತ ಫೈನಲ್ ಪ್ರವೇಶಿಸಿದೆ. ಫೈನಲ್‌ನಲ್ಲಿ ಯಾರೇ ಗೆದ್ದರೂ, ಅಜೇಯವಾಗಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಮೊದಲ ತಂಡ ಎನಿಸಲಿದೆ.
ಕಠಿಣ ಎದುರಾಳಿಗಳನ್ನು ಸೋಲಿಸಿ ಭಾರತ ಫೈನಲ್‌ಗೆ!
ಎರಡೂ ತಂಡಗಳ ಫೈನಲ್ ಹಾದಿಯನ್ನು ಗಮನಿಸಿದಾಗ, ಭಾರತ ಕಠಿಣ ಎದುರಾಳಿಗಳನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೇರಿರುವುದು ಸ್ಪಷ್ಟವಾಗುತ್ತದೆ. ಗುಂಪು ಹಂತದಲ್ಲಿ ಬದ್ಧವೈರಿ ಪಾಕಿಸ್ತಾನ, ಸೂಪರ್-8ನಲ್ಲಿ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ, ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡನ್ನು ಭಾರತ ಮಣಿಸಿತು. ಮತ್ತೊಂದೆಡೆ ದ.ಆಫ್ರಿಕಾಕ್ಕೆ ಗುಂಪು ಹಂತದಲ್ಲಿ ಹೇಳಿಕೊಳ್ಳುವಷ್ಟು ಬಲಾಢ್ಯ ತಂಡ ಎದುರಾಗಲಿಲ್ಲ. ಅದರಲ್ಲೂ ನೇಪಾಳ ವಿರುದ್ಧ ಹರಿಣ ಪಡೆ ಸೋಲಿನ ದವಡೆಯಿಂದ ಪಾರಾಯಿತು. ಇನ್ನು, ಸೂಪರ್-8ನಲ್ಲಿ ಇಂಗ್ಲೆಂಡ್, 2 ಬಾರಿ ಚಾಂಪಿಯನ್ ವಿಂಡೀಸ್ ವಿರುದ್ಧ ಗೆದ್ದ ದ.ಆಫ್ರಿಕಾಕ್ಕೆ ಸೆಮೀಸ್‌ನಲ್ಲಿ ಅಫ್ಘಾನಿಸ್ತಾನದಿಂದ ಪ್ರಬಲ ಪೈಪೋಟಿ ಎದುರಾಗಲಿಲ್ಲ.
ಭಾರತಕ್ಕೆ ಈ ಫೈನಲ್ ಅತ್ಯಂತ ಮಹತ್ವದ್ದೇಕೆ?
* 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿದ್ದ ಭಾರತ, 2011ರ ಬಳಿಕ ವಿಶ್ವಕಪ್ ಟ್ರೋಫಿ ಗೆದ್ದಿಲ್ಲ. * 2013ರ ಚಾಂಪಿಯನ್ಸ್ ಟ್ರೋಫಿ, ಭಾರತ ಗೆದ್ದ ಕೊನೆಯ ಐಸಿಸಿ ಟ್ರೋಫಿ. * 2014ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೋತಿದ್ದ ಭಾರತ, 2016, 2022ರ ಸೆಮೀಸ್‌ನಲ್ಲಿ ಪರಾಭವಗೊಂಡಿತ್ತು.* 2015, 2019ರ ಏಕದಿನ ವಿಶ್ವಕಪ್ ಸೆಮೀಸ್‌ನಲ್ಲಿ ಸೋತಿದ್ದ ತಂಡಕ್ಕೆ 2023ರ ವಿಶ್ವಕಪ್ ಫೈನಲಲ್ಲಿ ಆಘಾತ ಎದುರಾಗಿತ್ತು.* 7 ತಿಂಗಳಲ್ಲಿ ಭಾರತಕ್ಕೆ ವಿಶ್ವಕಪ್ ಫೈನಲ್ ಸೋಲಿನ ಕಹಿ ಮರೆಯುವ ಅವಕಾಶ ಇದಾಗಿದೆ.
ದ.ಆಫ್ರಿಕಾಕ್ಕೆ ಈ ಫೈನಲ್ ಅತ್ಯಂತ ಮಹತ್ವದ್ದೇಕೆ?
* ಏಕದಿನ ಅಥವಾ ಟಿ20 ಮಾದರಿಯ ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ದ.ಆಫ್ರಿಕಾ ಫೈನಲ್‌ಗೇರಿದೆ.* 1998ರಲ್ಲಿ ಉದ್ಘಾಟನಾ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ದ.ಆಫ್ರಿಕಾ ಆಫ್ರಿಯಾ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯ ಫೈನಲ್ ಪ್ರವೇಶಿಸಿದೆ. * 5 ಬಾರಿ ಏಕದಿನ ವಿಶ್ವಕಪ್‌ಗಳ ಸೆಮೀಸ್ ಪ್ರವೇಶಿಸಿ ಸೋತಿದ್ದ ದ.ಆಫ್ರಿಕಾ (1992, 1999, 2007, 2015, 2023), 2009, 2014ರ ಟಿ20 ವಿಶ್ವಕಪ್‌ನ ಸೆಮೀಸ್‌ನಲ್ಲೂ ಸೋತಿತ್ತು. * ಚೋಕರ್ಸ್ ಹಣೆಪಟ್ಟಿ ಕಳಚಿ ವಿಶ್ವಕಪ್ ಎತ್ತಿಹಿಡಿಯುವ ಮೂಲಕ ಇತಿಹಾಸ ರಚಿಸಲು ಹರಿಣ ಪಡೆಗಿದು ಸುವರ್ಣಾವಕಾಶ.
ಬಹುಮಾನ ಮೊತ್ತ
₹20.4 ಕೋಟಿ: ಚಾಂಪಿಯನ್ ತಂಡಕ್ಕೆ 2.45 ಮಿಲಿಯನ್ ಯುಎಸ್ ಡಾಲರ್(ಅಂದಾಜು ₹20.4 ಕೋಟಿ) ನಗದು ಬಹುಮಾನ ಸಿಗಲಿದೆ
.₹10.6 ಕೋಟಿ: ರನ್ನರ್-ಅಪ್ ತಂಡಕ್ಕೆ 1.28 ಮಿಲಿಯನ್ ಯುಎಸ್ ಡಾಲರ್(ಅಂದಾಜು ₹10.6 ಕೋಟಿ) ನಗದು ಬಹುಮಾನ ಸಿಗಲಿದೆ.