ದುಬೈ: ಭಾನುವಾರ ದುಬೈ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಆಟಗಾರರನ್ನು ಕಣ್ಣೆತ್ತಿಯೂ ನೋಡದೆ, ಮಾತನಾಡಿಸದೆ, ಕೈಕುಲುಕದೆ ಭಾರತೀಯ ಆಟಗಾರರು ಪಹಲ್ಗಾಂ ಉಗ್ರ ದಾಳಿಗೆ ತಮ್ಮದೇ ರೀತಿಯಲ್ಲಿ ತಕ್ಕ ತಿರುಗೇಟು ನೀಡಿದ್ದರು. ಈ ಸಂಘರ್ಷ ಒಂದು ಪಂದ್ಯಕ್ಕೆ ಸೀಮಿತವಾಗುವಂತೆ ಕಂಡುಬರುತ್ತಿಲ್ಲ. ಅತ್ತ ಭಾರತೀಯರ ‘ನೋ ಶೇಕ್‌ಹ್ಯಾಂಡ್’ ವಿಚಾರವನ್ನು ಪಾಕ್, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಬಳಿ ಕೊಂಡೊಯ್ದಿದ್ದು, ಇತ್ತ ಟೀಂ ಇಂಡಿಯಾ ತನ್ನ ಪ್ರತಿರೋಧವನ್ನು ಟೂರ್ನಿಯುದ್ದಕ್ಕೂ ಮುಂದುವರಿಸುವ ಲಕ್ಷಣಗಳಿವೆ.
ಟಾಸ್ ವೇಳೆ ಹಾಗೂ ಪಂದ್ಯದ ಬಳಿಕ ತನ್ನ ಆಟಗಾರರಿಗೆ ಶೇಕ್‌ಹ್ಯಾಂಡ್ ಮಾಡದ್ದಕ್ಕೆ ಪಾಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಶೇಕ್‌ಹ್ಯಾಂಡ್ ಸಂಘರ್ಷಕ್ಕೆ ಮ್ಯಾಚ್ ರೆಫ್ರಿ ಆ್ಯಂಡ್ರಿ ಪಿಕ್ರಾಫ್ಟ್ ಕಾರಣ ಎಂದು ಪಾಕ್ ದೂರಿದ್ದು, ಅವರನ್ನು ಟೂರ್ನಿಯಿಂದಲೇ ವಜಾಗೊಳಿಸಲು ಐಸಿಸಿಗೆ ಆಗ್ರಹಿಸಿದೆ. ಭಾರತದ ನಾಯಕ ಸೂರ್ಯಕುಮಾರ್‌ಗೆ ಶೇಕ್‌ಹ್ಯಾಂಡ್ ಮಾಡದಂತೆ ಮ್ಯಾಚ್ ರೆಫ್ರಿಯೇ ಪಾಕ್ ನಾಯಕ ಸಲ್ಮಾನ್ ಆಘಾಗೆ ಸೂಚಿಸಿದ್ದರು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ದೂರಿದೆ.
ಪಿಸಿಬಿ ಅಧ್ಯಕ್ಷ, ಏಷ್ಯಾಕಪ್ ಆಯೋಜಿಸುತ್ತಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಮುಖ್ಯಸ್ಥರೂ ಆಗಿರುವ ಮೊಹ್ಸಿನ್ ನಖ್ವಿ ಕೂಡಾ ತಕ್ಷಣ ಮ್ಯಾಚ್ ರೆಫ್ರಿಯನ್ನು ವಜಾಗೊಳಿಸಲು ಆಗ್ರಹಿಸಿದ್ದಾರೆ. ‘ಮ್ಯಾಚ್ ರೆಫ್ರಿಯು ಐಸಿಸಿ ನೀತಿ ಸಂಹಿತೆ ಹಾಗೂ ಎಂಸಿಸಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರನ್ನು ಏಷ್ಯಾಕಪ್‌ನಿಂದ ವಜಾಗೊಳಿಸುವಂತೆ ಐಸಿಸಿಗೆ ಪಿಸಿಬಿ ದೂರು ಸಲ್ಲಿಸಿದೆ’ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆದರೆ ರೆಫ್ರಿಯನ್ನು ವಜಾಗೊಳಿಸಲು ಟೂರ್ನಿ ಆಯೋಜಕ ಎಸಿಸಿಯಿಂದ, ಟೂರ್ನಿಯ ಆಯೋಜಕರೇ ಅಲ್ಲದ ಐಸಿಸಿಗೆ ದೂರು ಸಲ್ಲಿಕೆಯಾಗಿದ್ದು ಅಚ್ಚರಿಗೆ ಕಾರಣವಾಗಿದೆ.
ಅಲ್ಲದೆ ಪಾಕ್ ತಂಡದ ಮ್ಯಾನೇಜರ್ ನವೀದ್ ಚೀಮಾ ಕೂಡಾ ಎಸಿಸಿಗೆ ದೂರು ನೀಡಿದ್ದು, ಶೇಕ್‌ಹ್ಯಾಂಡ್ ಮಾಡದಿರಲು ರೆಫ್ರಿಯೇ ಕಾರಣ ಎಂದಿದ್ದಾರೆ. ಆದರೆ ಈ ಆರೋಪಗಳಿಗೆ ಬಿಸಿಸಿಐ, ಜಯ್ ಶಾ ಮುಖ್ಯಸ್ಥರಾಗಿರುವ ಐಸಿಸಿ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಟೂರ್ನಿ ಬಹಿಷ್ಕರಿಸುವ
ಬೆದರಿಕೆ ಹಾಕಿದ ಪಾಕ್?
ಭಾರತ ತಂಡದ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿ, ಮ್ಯಾಚ್ ರೆಫ್ರಿಯನ್ನು ವಜಾಗೊಳಿಸಲು ಒತ್ತಾಯಿಸಿರುವ ಪಾಕಿಸ್ತಾನ, ಹಾಗೆ ಮಾಡದಿದ್ದರೆ ಟೂರ್ನಿಯಿಂದಲೇ ಹೊರನಡೆಯುವುದಾಗಿ ಹೇಳಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ರೆಫ್ರಿಯನ್ನು ಕೂಡಲೇ ಏಷ್ಯಾಕಪ್‌ನಿಂದ ಹೊರಹಾಕಬೇಕು. ಇಲ್ಲದಿದ್ದರೆ ನಾವು ಟೂರ್ನಿಯನ್ನೇ ಬಹಿಷ್ಕರಿಸುತ್ತೇ ಎಂದು ಪಾಕ್ ಎಚ್ಚರಿಸಿದೆ ಎಂದು ಹೇಳಲಾಗುತ್ತಿದೆ.
ಸೂಪರ್-4, ಫೈನಲಲ್ಲೂ
ಶೇಕ್‌ಹ್ಯಾಂಡ್ ಸಂಘರ್ಷ?
ಭಾರತ-ಪಾಕಿಸ್ತಾನ ಭಾನುವಾರ ಗುಂಪು ಹಂತದಲ್ಲಿ ಮುಖಾಮುಖಿಯಾಗಿದ್ದವು. ಈ 2 ತಂಡಗಳು ಸೂಪರ್-4 ಹಂತ ಪ್ರವೇಶಿಸುವ ಸಾಧ್ಯತೆ ಹೆಚ್ಚಿದ್ದು, ಅಲ್ಲೂ ಪರಸ್ಪರ ಸೆಣಸಾಡಬಹುದು. ಬಳಿಕ ಉಭಯ ತಂಡಗಳು ಫೈನಲ್‌ನಲ್ಲೂ ಮುಖಾಮುಖಿಯಾಗುವ ಸಂಭವವಿದೆ. ಭಾನುವಾರದ ಪಂದ್ಯದ ‘ನೋ ಶೇಕ್‌ಹ್ಯಾಂಡ್’ ನಿಲುವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿರುವ ಭಾರತ ತಂಡ, ಸೂಪರ್-4 ಹಾಗೂ ಫೈನಲ್‌ನಲ್ಲೂ ಪಾಕಿಸ್ತಾನ ಆಟಗಾರರ ಕೈ ಕುಲುಕುವ ಸಾಧ್ಯತೆ ಇಲ್ಲ. ಅಲ್ಲದೆ, ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್‌ನ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲೂ ನೋ ಶೇಕ್‌ಹ್ಯಾಂಡ್ ಹೈಡ್ರಾಮ ಉಂಟಾಗುವ ಸಾಧ್ಯತೆಯಿದೆ.
ಕೈ ಕುಲುಕಲೇಬೇಕಾ?:
ನಿಯಮದಲ್ಲಿ ಏನಿದೆ?
ಕ್ರಿಕೆಟ್ ಸೇರಿ ಯಾವುದೇ ಕ್ರೀಡೆಯಲ್ಲೂ ಆಟಗಾರರು ಪರಸ್ಪರ ಕೈಕುಲುಕುವುದು, ಅಭಿನಂದನೆ ಸಲ್ಲಿಸುವುದು ವಾಡಿಕೆ. ಆದರೆ ಇದು ಕ್ರೀಡಾಸ್ಫೂರ್ತಿಯ ಭಾಗ ಮಾತ್ರವಾಗಿದ್ದು, ಕಡ್ಡಾಯವೇನಲ್ಲ. ತಜ್ಞರ ಪ್ರಕಾರ, ಹ್ಯಾಂಡ್‌ಶೇಕ್ ನಿರಾಕರಿಸುವುದು ತಾಂತ್ರಿಕವಾಗಿ ನಿಯಮ ಉಲ್ಲಂಘನೆ ಎಂದು ಪರಿಗಣಿಸಬಹುದಾದರೂ, ಅಂತಹ ಉಲ್ಲಂಘನೆಗಳಿಗೆ ದಂಡಗಳು ಹೇರುವ ಕ್ರಮವಿಲ್ಲ. ಇನ್ನು, ಬಿಸಿಸಿಐ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ಶೇಕ್‌ಹ್ಯಾಂಡ್ ಕಡ್ಡಾಯವೇನಲ್ಲ ಎಂದಿದ್ದಾರೆ. ‘ನಿಯಮ ಪ್ರಕಾರ ಎದುರಾಳಿಗಳೊಂದಿಗೆ ಕೈಕುಲುಕುವ ಬಗ್ಗೆ ಯಾವುದೇ ನಿರ್ದಿಷ್ಟ ವಿವರಣೆಯಿಲ್ಲ. ಇದು ಕ್ರೀಡಾಸ್ಫೂರ್ತಿ ಹಾಗೂ ಸಂಪ್ರದಾಯ ಮಾತ್ರ. ಯಾವುದೇ ನಿಯಮ ಇಲ್ಲದಿರುವಾಗ ಭಾರತದ ಆಟಗಾರರು ಕೈಕುಲುಕದೇ ಇದ್ದಿದ್ದು ತಪ್ಪಲ್ಲ’ ಎಂದಿದ್ದಾರೆ.
ನೋ ಶೇಕ್‌ಹ್ಯಾಂಡ್
ಕ್ರೀಡೆಯಲ್ಲಿ ಹೊಸತಲ್ಲ
ಎದುರಾಳಿ ಆಟಗಾರರ ಜೊತೆ ಕೈಕುಲುಕದೇ ಇರುವುದು ಕ್ರೀಡೆಯಲ್ಲಿ ಹೊಸದೇನಲ್ಲ. 2023ರ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಅವರು ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾಗೆ ಶೇಕ್‌ಹ್ಯಾಂಡ್ ಮಾಡಿರಲಿಲ್ಲ. ರಷ್ಯಾ ಹಾಗೂ ಬೆಲಾರಸ್ ದೇಶಗಳು ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ಕಾರಣಕ್ಕೆ ಎಲಿನಾ ಈ ನಿರ್ಧಾರ ಕೈಗೊಂಡಿದ್ದರು. ಆದರೆ ಆಯೋಜಕರು ಶೇಕ್‌ಹ್ಯಾಂಡ್ ಮಾಡದ್ದಕ್ಕೆ ದಂಡ ಹಾಕಿರಲಿಲ್ಲ.
ನಖ್ವಿಯಿಂದ ಟ್ರೋಫಿ
ಸ್ವೀಕರಿಸುತ್ತಾ ಭಾರತ?
ಒಂದು ವೇಳೆ ಭಾರತ ಟೂರ್ನಿಯಲ್ಲಿ ಚಾಂಪಿಯನ್ ಆದರೆ ಟ್ರೋಫಿ ಸ್ವೀಕರಿಸುವುದು ಯಾರಿಂದ ಎಂಬ ಕುತೂಹಲವಿದೆ. ಯಾಕೆಂದರೆ, ಎಸಿಸಿ ಮುಖ್ಯಸ್ಥರಾಗಿರುವುದು ಪಾಕ್‌ನ ಮೊಹ್ಸಿನ್ ನಖ್ವಿ. ವಿಜೇತರಿಗೆ ಮುಖ್ಯಸ್ಥರೇ ಟ್ರೋಫಿ ವಿತರಿಸುವುದು ವಾಡಿಕೆ. ಆದರೆ ಭಾರತ ಗೆದ್ದರೆ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲಿದೆಯೇ ಎಂಬ ಪ್ರಶ್ನೆ ಸದ್ಯ ಅಭಿಮಾನಿಗಳಲ್ಲಿದೆ.
ಇದು ಉತ್ತಮ ಗೆಲುವು. ಆದರೆ ಟೂರ್ನಿಯಲ್ಲಿ ಸಾಕಷ್ಟು ಕ್ರಿಕೆಟ್ ಉಳಿದಿದೆ. ಮುಖ್ಯವಾಗಿ, ಪಹಲ್ಗಾಮ್ ದಾಳಿಯ ಸಂತ್ರಸ್ತ ಕುಟುಂಬಗಳ ಜೊತೆ ನಾವು ಒಗ್ಗಟ್ಟು ಪ್ರದರ್ಶಿಸುತ್ತಿದ್ದೇವೆ. ಆಪರೇಷನ್ ಸಿಂದೂರದ ಯಶಸ್ಸಿಗಾಗಿ ನಾವು ಸಶಸ್ತ್ರ ಪಡೆಗಳಿಗೆ ಧನ್ಯವಾದ ಹೇಳುತ್ತೇವೆ. ದೇಶವೇ ಹೆಮ್ಮೆಪಡುವಂತೆ ಮತ್ತು ಭಾರತೀಯರನ್ನು ಸಂತೋಷಪಡಿಸಲು ನಾವು ಪ್ರಯತ್ನಿಸುತ್ತೇವೆ.
ಗೌತಮ್ ಗಂಭೀರ್, ಭಾರತದ ಮುಖ್ಯ ಕೋಚ್