ಪ್ಯಾರಿಸ್‌ ಒಲಿಂಪಿಕ್ಸ್‌ 2024 : ಶೂಟಿಂಗ್‌ನಲ್ಲಿ ಭಾರತೀಯರ ಕೈತಪ್ಪಿದ 2 ಪದಕ! ಕನಸು ಭಗ್ನ

KannadaprabhaNewsNetwork |  
Published : Jul 30, 2024, 12:34 AM ISTUpdated : Jul 30, 2024, 04:40 AM IST
ಅರ್ಜುನ್‌ ಬಾಬುತಾ | Kannada Prabha

ಸಾರಾಂಶ

ಪುರುಷರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟ ಅರ್ಜುನ್‌ ಬಬುತಾ. ಕೇವಲ ಒಂದು ಕೆಟ್ಟ ಶಾಟ್‌ನಿಂದಾಗಿ ಪದಕ ಮಿಸ್‌. 18ನೇ ಯತ್ನದ ತನಕ ಪದಕದ ನಿರೀಕ್ಷೆಯಲ್ಲಿದ್ದ ಅರ್ಜುನ್‌. ಮಹಿಳೆಯರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ರಮಿತಾ ಜಿಂದಾಲ್‌ಗೆ 7ನೇ ಸ್ಥಾನ

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸೋಮವಾರ 2 ಪದಕಗಳು ಕೈ ತಪ್ಪಿವೆ. ಇದರೊಂದಿಗೆ ಮನು ಭಾಕರ್‌ ಬಳಿಕ ಭಾರತಕ್ಕೆ ಮತ್ತೆ ಪದಕ ಗೆಲ್ಲಿಸಿಕೊಡುವ ಶೂಟರ್‌ಗಳ ಕನಸು ಭಗ್ನಗೊಂಡಿದೆ. 

ಇದರ ಹೊರತಾಗಿಯೂ ಭಾರತ ಶೂಟಿಂಗ್‌ನಲ್ಲಿ ಮತ್ತಷ್ಟು ಪದಕಗಳ ನಿರೀಕ್ಷೆ ಇಟ್ಟುಕೊಂಡಿವೆ.ಸೋಮವಾರ ಪುರುಷರ 10 ಮೀ. ಏರ್‌ ರೈಫಲ್‌ ಫೈನಲ್‌ ಸ್ಪರ್ಧೆಯಲ್ಲಿ ಅರ್ಜುನ್‌ 4ನೇ ಸ್ಥಾನ ಪಡೆದು ಅಲ್ಪದರಲ್ಲೇ ಪದಕ ತಪ್ಪಿಸಿಕೊಂಡರು. 8 ಶೂಟರ್‌ಗಳಿದ್ದ ಸ್ಪರ್ಧೆಯಲ್ಲಿ ಮೊದಲ 10 ಶಾಟ್‌ಗಳ ಬಳಿಕ 25 ವರ್ಷದ ಅರ್ಜುನ್‌ 105.0 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರು. 

ಆ ಬಳಿಕ 13ನೇ ಶಾಟ್‌ನಲ್ಲಿ ಕೇವಲ 9.9 ಅಂಕ ಗಳಿಸಿದ ಹೊರತಾಗಿಯೂ ಅರ್ಜುನ್‌ ಅಗ್ರ-2ರಲ್ಲಿ ಉಳಿದುಕೊಂಡಿದ್ದರು. 17ನೇ ಶಾಟ್‌ವರೆಗೂ 2ನೇ ಸ್ಥಾನ ಕಾಯ್ದುಕೊಂಡಿದ್ದ ಅರ್ಜುನ್‌ ಬೆಳ್ಳಿ ಪದಕ ನಿರೀಕ್ಷೆಯಲ್ಲಿದ್ದರು. ಆದರೆ 18ನೇ ಶಾಟ್‌ನಲ್ಲಿ ಸ್ವೀಡನ್‌ ಹಾಗೂ ಕ್ರೊವೇಷಿಯಾದ ಶೂಟರ್‌ಗಳು ಅರ್ಜುನ್‌ರನ್ನು 4ನೇ ಸ್ಥಾನಕ್ಕೆ ತಳ್ಳಿದರು. 

ನಿರ್ಣಾಯಕ ಎನಿಸಿಕೊಂಡ 20ನೇ ಶಾಟ್‌ನಲ್ಲಿ ಒತ್ತಡಕ್ಕೊಳಗಾದ ಅರ್ಜುನ್‌ ಕೇವಲ 9.5 ಅಂಕ ಗಳಿಸಿದರು. ಇದರೊಂದಿಗೆ ಅರ್ಜುನ್‌ 4ನೇ ಸ್ಥಾನದಲ್ಲೇ ಉಳಿದು ಪದಕ ತಪ್ಪಿಸಿಕೊಂಡರು. ಒಟ್ಟು 20 ಯತ್ನಗಳ ಪೈಕಿ ಕೇವಲ 18ರಲ್ಲಿ 10ಕ್ಕಿಂತ ಹೆಚ್ಚು ಅಂಕ ಪಡೆದ ಹೊರತಾಗಿಯೂ, 2 ಕೆಟ್ಟ ಶಾಟ್‌ನಿಂದಾಗಿ ಪದಕ ವಂಚಿತರಾದರು. ಚೀನಾದ ಶೆಂಗ್‌ ಲಿಹಾವೊ 252.2 ಅಂಕಗಳೊಂದಿಗೆ ಒಲಿಂಪಿಕ್ಸ್‌ ದಾಖಲೆ ಬರೆದು ಚಿನ್ನ ಗೆದ್ದರೆ, ಸ್ವೀಡನ್‌ನ ಲಿಂಗ್‌ರೆನ್‌ ವಿಕ್ಟರ್‌ 251.4 ಅಂಕದೊಂದಿಗೆ ಬೆಳ್ಳಿ ತಮ್ಮದಾಗಿಸಿಕೊಂಡರು. ಕ್ರೊವೇಷಿಯಾದ ಮಾರಿಸಿಕ್‌ ಮಿರನ್‌(230.3) ಕಂಚು ಜಯಿಸಿದರು.

ರಮಿತಾಗೆ ನಿರಾಸೆ: ಇದೇ ವೇಳೆ ಮಹಿಳೆಯರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ರಮಿತಾ ಜಿಂದಾಲ್‌ಗೆ 7ನೇ ಸ್ಥಾನ ಲಭಿಸಿತು. ಅವರು ಆರಂಭಿಕ 5 ಶಾಟ್‌ಗಳ ಬಳಿಕ 4ನೇ ಸ್ಥಾನದಲ್ಲಿದ್ದರೂ, 10 ಶಾಟ್‌ಗಳ ಬಳಿಕ 104.0 ಅಂಕಗಳೊಂದಿಗೆ 7ನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಇದರಿಂದಾಗಿ ಬಳಿಕ 4 ಶಾಟ್‌ಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ 145.3 ಅಂಕಗಳೊಂದಿಗೆ 7ನೇ ಸ್ಥಾನಿಯಾಗಿ ಅಭಿಯಾನ ಮುಕ್ತಾಯಗೊಳಿಸಿದರು.ಅರ್ಜುನ್‌ ಹಾಗೂ ರಮಿತಾ ಕ್ರೀಡಾಕೂಟದಲ್ಲಿ 10 ಮೀ. ಏರ್‌ ರೈಫಲ್‌ ಮಿಶ್ರ ತಂಡ ವಿಭಾಗದಲ್ಲಿ ಒಟ್ಟಿಗೆ ಸ್ಪರ್ಧಿಸಿದ್ದರು. ಆದರೆ ಫೈನಲ್‌ಗೇರಲು ವಿಫಲರಾಗಿದ್ದರು.

PREV

Recommended Stories

ಅದ್ದೂರಿಯಾಗಿ ಡಾ. ವಿಷ್ಣುವರ್ಧನ್‌ 75ನೇ ಹುಟ್ಟುಹಬ್ಬ ಆಚರಣೆ
ಪಾಕ್‌ ಕದನಕ್ಕೂ ಮುನ್ನ ಭಾರತಕ್ಕೆ ಇಂದು ಒಮಾನ್‌ ವಿರುದ್ಧ ‘ಅಭ್ಯಾಸ’