ನವದೆಹಲಿ: ಇಂಗ್ಲೆಂಡ್ ವಿರುದ್ಧದ ಮಹತ್ವದ ಟೆಸ್ಟ್ ಸರಣಿಯಲ್ಲಿ ಆಡುತ್ತಿರುವ ಭಾರತಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಬೆನ್ನು ಮತ್ತು ತೊಡೆ ನೋವಿನ ಕಾರಣದಿಂದ ಪ್ರಮುಖ ಬ್ಯಾಟರ್ ಶ್ರೇಯಸ್ ಅಯ್ಯರ್ ಕೊನೆ 3 ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.
ಕಳೆದ ವರ್ಷವಷ್ಟೆ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರಿಗೆ ತೊಂದರೆ ಮರುಕಳಿಸುವ ಸಂಭವವಿದೆ. ಕಳೆದ 2 ಟೆಸ್ಟ್ ಪಂದ್ಯಗಳಲ್ಲಿ ಅವರಿಂದ ಅಷ್ಟೇನು ಉತ್ತಮ ಪ್ರದರ್ಶನ ಮೂಡಿ ಬಂದಿಲ್ಲ.
4 ಇನ್ನಿಂಗ್ಸ್‌ಗಳಲ್ಲಿ 35, 13, 27, 29 ರನ್ ಕಲೆಹಾಕಿದ್ದಾರೆ. ಈಗಾಗಲೇ ರವೀಂದ್ರ ಜಡೇಜಾ ಹಾಗೂ ಕೆ.ಎಲ್.ರಾಹುಲ್ ಗಾಯಗೊಂಡಿದ್ದು, 3ನೇ ಪಂದ್ಯಗಳಿಗೆ ಲಭ್ಯವಿರುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ಅತ್ತ ವಿರಾಟ್ ಕೊಹ್ಲಿ ಕೂಡಾ ಸರಣಿಯಿಂದ ಹೊರಗುಳಿಯುವ ಬಗ್ಗೆ ಸುದ್ದಿಯಿದೆ. ಈ ನಡುವೆ ಶ್ರೇಯಸ್ ಅಯ್ಯರ್ ಕೂಡಾ ಗೈರಾದರೆ ಮಧ್ಯಮ ಕ್ರಮಾಂಕದಲ್ಲಿ ಭಾರತ ಅನುಭವ ಬ್ಯಾಟರ್‌ಗಳ ಕೊರತೆ ಎದುರಿಸಲಿದೆ. ಸರಣಿಯ ಕೊನೆ 3 ಪಂದ್ಯಗಳಿಗೆ ಬಿಸಿಸಿಐ ಇನ್ನಷ್ಟೇ ತಂಡ ಪ್ರಕಟಿಸಬೇಕಿದೆ.