ಲಯತಪ್ಪಿದ ಭಾರತಕ್ಕೆ ಯಶಸ್ವಿ, ಗಿಲ್‌ ಅಭಯ

Published : Jul 3, 2025 11:36 AM IST
Yashasvi Jaiswal

ಸಾರಾಂಶ

ಭಾರತದ ಯುವ ಸೂಪರ್‌ ಸ್ಟಾರ್‌ಗಳಾದ ಶುಭ್‌ಮನ್‌ ಗಿಲ್‌ ಹಾಗೂ ಯಶಸ್ವಿ ಜೈಸ್ವಾಲ್‌ ಮತ್ತೆ ಅಬ್ಬರಿಸಿದ್ದಾರೆ.  

ಬರ್ಮಿಂಗ್‌ಹ್ಯಾಮ್‌: ಭಾರತದ ಯುವ ಸೂಪರ್‌ ಸ್ಟಾರ್‌ಗಳಾದ ಶುಭ್‌ಮನ್‌ ಗಿಲ್‌ ಹಾಗೂ ಯಶಸ್ವಿ ಜೈಸ್ವಾಲ್‌ ಮತ್ತೆ ಅಬ್ಬರಿಸಿದ್ದಾರೆ. ಮೊದಲ ಬಾರಿ ಇಂಗ್ಲೆಂಡ್‌ನಲ್ಲಿ ಸರಣಿ ಆಡುತ್ತಿರುವ ಜೈಸ್ವಾಲ್‌ ಹಾಗೂ ತಮ್ಮ ನಾಯಕತ್ವದಲ್ಲಿ ಮೊದಲ ಸರಣಿಯ ಅಗ್ನಿಪರೀಕ್ಷೆಗೆ ಇಳಿದಿರುವ ಗಿಲ್‌, ಆತಿಥೇಯರ ವಿರುದ್ಧ 2ನೇ ಟೆಸ್ಟ್‌ ಪಂದ್ಯದಲ್ಲಿ ಭಾರತಕ್ಕೆ ಆಪತ್ಬಾಂಧವರಾಗಿ ಮೂಡಿಬಂದಿದ್ದಾರೆ. ಇವರಿಬ್ಬರ ಆಟದಿಂದಾಗಿ ಭಾರತ ಮೊದಲ ದಿನವೇ 300ರ ಗಡಿ ದಾಟಿದೆ.

ಮೊದಲೆರಡು ದಿನ ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಬಲ್ಲ ಎಜ್‌ಬಾಸ್ಟನ್‌ನಲ್ಲಿ ಭಾರತ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿತು. ಇಂಗ್ಲೆಂಡ್‌ನ ಮಾರಕ ಆರಂಭಿಕ ಸ್ಪೆಲ್‌ ಮುಂದೆ ಭಾರತ ಎಚ್ಚರಿಕೆಯ ಆಟವಾಡಿತು. ಅನಿರೀಕ್ಷಿತ ಬೌನ್ಸರ್‌ಗಳ ಮುಂದೆ ಕೆ.ಎಲ್‌.ರಾಹುಲ್‌ 2 ರನ್‌ ಗಳಿಸಲು 26 ಎಸೆತಗಳನ್ನು ಎದುರಿಸಿ ಔಟಾದರು. ಆದರೆ 2ನೇ ವಿಕೆಟ್‌ಗೆ ಕರುಣ್‌ ನಾಯರ್‌ ಜೊತೆಗೂಡಿದ ಜೈಸ್ವಾಲ್‌ 80 ರನ್‌ ಜೊತೆಯಾಟವಾಡಿತು. ಉತ್ತಮವಾಗಿ ಆಡುತ್ತಿದ್ದ ಕರುಣ್‌ 31 ರನ್‌ ಗಳಿಸಿದ್ದಾಗ ಬ್ರೈಡನ್‌ ಕಾರ್ಸ್‌ ಎಸೆತದಲ್ಲಿ ಹ್ಯಾರಿ ಬ್ರೂಕ್‌ಗೆ ಕ್ಯಾಚ್‌ ನೀಡಿ ಔಟಾದರು. ಇಂಗ್ಲೆಂಡ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಜೈಸ್ವಾಲ್‌, ಶತಕದ ಅಂಚಿನಲ್ಲಿ ಎಡವಿದರು. 107 ಎಸೆತಗಳಲ್ಲಿ 13 ಬೌಂಡರಿಗಳೊಂದಿಗೆ 87 ರನ್‌ ಸಿಡಿಸಿದ ಜೈಸ್ವಾಲ್‌, ಬೆನ್‌ ಸ್ಟೋಕ್ಸ್‌ಗೆ ವಿಕೆಟ್‌ ಒಪ್ಪಿಸಿದರು. ಟೀ ವಿರಾಮದ ವೇಳೆಗೆ ಭಾರತ 53 ಓವರ್‌ಗಳಲ್ಲಿ 3 ವಿಕೆಟ್‌ಗೆ 182 ರನ್‌ ಗಳಿಸಿತ್ತು.

ರಿಷಭ್‌, ನಿತೀಶ್‌ ವಿಫಲ: ದಿನದ ಕೊನೆ ಅವಧಿಯ ಆರಂಭದಲ್ಲೇ ಭಾರತಕ್ಕೆ ಆಘಾತ ಕಾದಿತ್ತು. ಮೊದಲ ಟೆಸ್ಟ್‌ನಲ್ಲಿ 2 ಶತಕ ಬಾರಿಸಿದ್ದ ರಿಷಭ್‌ ಪಂತ್‌, ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್‌ ಕಳೆದುಕೊಂಡರು. ಅವರು 25 ರನ್‌ ಗಳಿಸಿದರು. ಶಾರ್ದೂಲ್‌ ಠಾಕೂರ್‌ ಬದಲು ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ನಿತೀಶ್‌ ಕುಮಾರ್‌ ಗಳಿಕೆ ಕೇವಲ 1 ರನ್‌. 211 ರನ್‌ಗೆ 5 ವಿಕೆಟ್‌ ಕಳೆದುಕೊಂಡ ತಂಡಕ್ಕೆ ಶುಭ್‌ಮನ್‌ ಗಿಲ್‌ ಹಾಗೂ ರವೀಂದ್ರ ಜಡೇಜಾ ಆಸರೆಯಾದರು. ಗಿಲ್‌ ಸರಣಿಯಲ್ಲಿ 2ನೇ ಅರ್ಧಶತಕ ಬಾರಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಕ್ರಿಸ್‌ ವೋಕ್ಸ್‌ 2 ವಿಕೆಟ್ ಕಿತ್ತರು.

3 ಬದಲಾವಣೆ

ಭಾರತ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಮೊದಲ ಪಂದ್ಯ ಆಡಿದ್ದ ಸಾಯಿ ಸುದರ್ಶನ್‌, ಶಾರ್ದೂಲ್‌ ಸ್ಥಾನ ಕಳೆದುಕೊಂಡರೆ, ಬೂಮ್ರಾಗೆ ವಿಶ್ರಾಂತಿ ನೀಡಲಾಯಿತು. ಅವರ ಬದಲು ವಾಷಿಂಗ್ಟನ್‌ ಸುಂದರ್‌, ನಿತೀಶ್‌ ಕುಮಾರ್‌, ಆಕಾಶ್‌ದೀಪ್ ತಂಡಕ್ಕೆ ಆಯ್ಕೆಯಾದರು.

ಇಂಗ್ಲೆಂಡ್‌ ವಿರುದ್ಧ

ಜೈಸ್ವಾಲ್‌ ಏಳು

ಟೆಸ್ಟ್‌, 904 ರನ್‌!

ಇಂಗ್ಲೆಂಡ್‌ ವಿರುದ್ಧ ತಮ್ಮ ಅಭೂತಪೂರ್ವ ಪ್ರದರ್ಶನ ಮುಂದುವರಿಸಿರುವ ಜೈಸ್ವಾಲ್ ಮತ್ತೊಂದು ಅರ್ಧಶತಕ ಬಾರಿಸಿದರು. ಅವರು ಇಂಗ್ಲೆಂಡ್‌ ವಿರುದ್ಧ 7 ಟೆಸ್ಟ್‌ನ 12 ಇನ್ನಿಂಗ್ಸ್‌ಗಳಲ್ಲಿ 82.18ರ ಸರಾಸರಿಯಲ್ಲಿ ಬರೋಬ್ಬರಿ 904 ರನ್‌ ಗಳಿಸಿದ್ದಾರೆ. ಇದರಲ್ಲಿ 3 ಶತಕ, 4 ಅರ್ಧಶತಕ ಒಳಗೊಂಡಿವೆ.

ದ್ರಾವಿಡ್‌ ದಾಖಲೆಸರಿಗಟ್ಟಿದ ಯಶಸ್ವಿ

ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ನಲ್ಲಿ ಸತತವಾಗಿ ಅತಿ ಹೆಚ್ಚು ಪಂದ್ಯಗಳಲ್ಲಿ 50+ ರನ್‌ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್‌ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಜೈಸ್ವಾಲ್‌ ಹಾಗೂ ರಾಹುಲ್‌ ದ್ರಾವಿಡ್ ತಲಾ 7 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

PREV
Read more Articles on