ಭಾರತ-ಇಂಗ್ಲೆಂಡ್‌ 5ನೇ ಟೆಸ್ಟ್‌ಗೆ ನಿಧಾನಗತಿಯ ಪಿಚ್‌?

KannadaprabhaNewsNetwork | Updated : Mar 06 2024, 08:41 AM IST

ಸಾರಾಂಶ

ಧರ್ಮಶಾಲಾದಲ್ಲಿ ನಾಳೆಯಿಂದ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 5ನೇ ಟೆಸ್ಟ್‌ ಆರಂಭವಾಗಲಿದ್ದು, ಪಿಚ್‌ ಮೊದಲೆರಡು ದಿನ ಬ್ಯಾಟರ್ಸ್‌ಗೆ ನೆರವು ನೀಡುತ್ತದಾ ಎಂದು ಕಾದುನೋಡಬೇಕಿದೆ.

ಧರ್ಮಶಾಲಾ: ಒಂದು ವಾರಕ್ಕೂ ಹೆಚ್ಚು ವಿಶ್ರಾಂತಿ ಬಳಿಕ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ವಿಶ್ವದಲ್ಲೇ ಅತಿ ಸುಂದರ ಕ್ರಿಕೆಟ್‌ ಕ್ರೀಡಾಂಗಣಗಳಲ್ಲಿ ಒಂದೆನಿಸಿರುವ ಹಿಮಾಚಲ ಪ್ರದೇಶದ ಧರ್ಮಶಾಲಾ ತಲುಪಿದ್ದು, ಸರಣಿಯ 5ನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯವನ್ನಾಡಲು ಸಜ್ಜಾಗಿವೆ.

ಗುರುವಾರದಿಂದ ಪಂದ್ಯ ಆರಂಭಗೊಳ್ಳಲಿದ್ದು, ಅನಿರೀಕ್ಷಿತ ಮಳೆಯಿಂದಾಗಿ ಪಿಚ್‌ ಸಿದ್ಧತೆಗೆ ಮೈದಾನ ಸಿಬ್ಬಂದಿಗೆ ಸೂಕ್ತ ಸಮಯಾವಕಾಶ ಸಿಕ್ಕಿಲ್ಲ. ಆದರೂ ಭಾರತ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ ಹಾಗೂ ನಾಯಕ ರೋಹಿತ್‌ ಶರ್ಮಾ ಜೊತೆ ಚರ್ಚಿಸಿರುವ ಪಿಚ್‌ ಕ್ಯುರೇಟರ್‌, ನಿಧಾನಗತಿಯ ಪಿಚ್‌ ಸಿದ್ಧಪಡಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಸ್ಥಳೀಯ ವಾತಾವರಣವು ಇಂಗ್ಲೆಂಡ್‌ಗೆ ಹೆಚ್ಚು ಅನುಕೂಲಕರವಾಗಿರಲಿದೆ ಆದರೂ, ಪಿಚ್‌ ವಿಶೇಷವಾಗಿ ಇಂಗ್ಲೆಂಡ್‌ ತಂಡಕ್ಕೆ ನೆರವು ಒದಗಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಮೋಡ ಕವಿದ ವಾತಾವರಣ ಇರಲಿದ್ದು, ಹಸಿರು ಪಿಚ್‌ ಸಿದ್ಧಗೊಂಡಿದ್ದರೆ ಸ್ವಿಂಗ್‌ ಬೌಲಿಂಗ್‌ಗೆ ಹೆಚ್ಚು ನೆರವು ಸಿಗುತ್ತಿತ್ತು ಎನ್ನುವ ಲೆಕ್ಕಾಚಾರದಲ್ಲಿದ್ದ ಇಂಗ್ಲೆಂಡ್‌ಗೆ, ಪಿಚ್‌ ನೋಡಿ ಅಸಮಾಧಾನವಾಗಿದೆ ಎನ್ನಲಾಗುತ್ತಿದೆ. 

ಸರಣಿಯ ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಹೈದರಾಬಾದ್‌ನಲ್ಲಿ ಸಂಪೂರ್ಣವಾಗಿ ಸ್ಪಿನ್ ಸ್ನೇಹಿ ಪಿಚ್‌ ಸಿದ್ಧಗೊಳಿಸಲಾಗಿತ್ತು. ಆ ಪಿಚ್‌ನಲ್ಲಿ ಇಂಗ್ಲಿಷ್‌ ಸ್ಪಿನ್ನರ್‌ಗಳು ಹೆಚ್ಚು ಪರಿಣಾಮಕಾರಿಯಾಗಿದ್ದರು. 

ಆ ನಂತರದ ಮೂರೂ ಟೆಸ್ಟ್‌ಗಳಿಗೆ ಆತಿಥ್ಯ ವಹಿಸಿದ ಪಿಚ್‌ಗಳು ನಿಧಾನಗತಿ ಪಿಚ್‌ಗಳಾಗಿದ್ದವು. ಆ ಪಿಚ್‌ಗಳಲ್ಲಿ ಮೊದಲೆರಡು ದಿನ ಬ್ಯಾಟರ್‌ಗಳು ಸುಲಭವಾಗಿ ರನ್‌ ಗಳಿಸಿದ್ದರು. 

3ನೇ ದಿನದಿಂದ ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ಒದಗಿಸಿತ್ತು. ಧರ್ಮಶಾಲಾ ಪಿಚ್‌ ಕೂಡ ಇದೇ ರೀತಿ ವರ್ತಿಸಬಹುದು ಎಂದು ಅಂದಾಜಿಸಲಾಗಿದೆ.ಬೂಮ್ರಾ ತಂಡಕ್ಕೆ ವಾಪಸ್ಸಾಗಿದ್ದು, ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

Share this article