ಜಾಲತಾಣದಲ್ಲಿ ಧೂಳೆಬ್ಬಿಸಿದ ಆರ್‌ಸಿಬಿ ಫ್ಯಾನ್ಸ್‌: ಎಲ್ಲೆಲ್ಲೂ ಸ್ಟೇಟಸ್, ಮೀಮ್ಸ್‌ ಅಬ್ಬರ

KannadaprabhaNewsNetwork | Updated : Mar 19 2024, 08:20 AM IST

ಸಾರಾಂಶ

ವನಿತೆಯರ ಸಾಧನೆಗೆ ಕ್ರಿಕೆಟ್ ಜಗತ್ತು ಸಲ್ಯೂಟ್‌. ರಾರಾಜಿಸಿದ ಕಂಗ್ರಾಟ್ಸ್ ಪೋಸ್ಟರ್. ಕ್ರೀಡಾ ಸ್ಟಾರ್‌ಗಳಿಂದ ''ಈ ಸಲ ಕಪ್ ನಮ್ದು'' ಘೋಷಣೆ. ಆರ್‌ಸಿಬಿ ಅಭಿಮಾನಿಗಳ ಸಂಭ್ರಮಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತಲ್ಲಣ

ನವದೆಹಲಿ: ‘ಕಪ್‌’ ಎನ್ನುವುದು ಆರ್‌ಸಿಬಿ ಪಾಲಿಗೆ ಏನು ಎಂಬುದು ಕ್ರಿಕೆಟ್‌ ಜಗತ್ತಿಗೆ ಈಗ ದರ್ಶನವಾಗಿರಬಹುದು. ಪುರುಷರಿಗೆ ಸಿಗದಿದ್ದ ಟ್ರೋಫಿಯನ್ನು ಮಹಿಳಾ ತಂಡ ಗೆಲ್ಲುವುದರೊಂದಿಗೆ ಇಡೀ ಕ್ರಿಕೆಟ್‌ ಜಗತ್ತು ಸಂಭ್ರಮದ ಅಲೆಯಲ್ಲಿ ಮಿಂದೆದ್ದಿದ್ದು, ಸಾಮಾಜಿಕ ಜಾಲತಾಣವೇ ಅಕ್ಷರಶಃ ಆರ್‌ಸಿಬಿ ಮಯವಾಗಿ ಪರಿವರ್ತನೆಗೊಂಡಿದೆ.

ಭಾನುವಾರ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಫೈನಲ್‌ನಲ್ಲಿ ಜಯಭೇರಿ ಬಾರಿಸಿ ಆರ್‌ಸಿಬಿ 2ನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌ ಟ್ರೋಫಿ ಮುಡಿಗೇರಿಸಿಕೊಂಡಿತು. ಆದರೆ ಆರ್‌ಸಿಬಿ ಫ್ಯಾನ್ಸ್‌ ಪಾಲಿಗೆ ಇದು ಬರೀ ಕಪ್‌ ಆಗಿರಲಿಲ್ಲ. 

ಕಳೆದ 16 ವರ್ಷಗಳಿಂದಲೂ ಕೈಗೆಟುಕದ ಚಂದಿರನಂತೆ ಇದ್ದ ಟ್ರೋಫಿಯನ್ನು ಕಡೆಗೂ ತನ್ನತ್ತ ಒಲಿಸಿಕೊಂಡ ಆರ್‌ಸಿಬಿ ತನ್ನ ಕೋಟ್ಯಂತರ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.

ಒಂದೆಡೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಪಾರ ಪ್ರಮಾಣದ ಆರ್‌ಸಿಬಿ ಅಭಿಮಾನಿಗಳು ಸಂಭ್ರಮದ ಅಲೆಯಲ್ಲಿ ತೇಲಾಡಿದರೆ, ಮತ್ತೊಂದೆಡೆ ಬೀದಿ ಬೀದಿಗಳಲ್ಲಿ ಪಟಾಕಿ ಹಚ್ಚಿ, ಡ್ಯಾನ್ಸ್‌ ಮಾಡಿ ಸಂಭ್ರಮಿಸಿದರು. ಈ ನಡುವೆ ಸೋಷಿಯಲ್‌ ಮೀಡಿಯಾ ಅಂತೂ ಆರ್‌ಸಿಬಿ ಕಪ್‌ನ ಅಬ್ಬರಕ್ಕೆ ಅಕ್ಷರಶಃ ಸ್ತಬ್ಧವಾಗಿತ್ತು.

ಸ್ಟೇಟಸ್, ಮೀಮ್‌ಗಳ ಅಬ್ಬರ: ಟೂರ್ನಿ ಆರಂಭಕ್ಕೆ ತಿಂಗಳುಗಳಿರುವಾಗಲೇ ಆರ್‌ಸಿಬಿ ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿದ್ದು ತಮ್ಮ ಅಭಿಮಾನ ವ್ಯಕ್ತಪಡಿಸುತ್ತಿರುತ್ತಾರೆ.

 ಆದರೆ ಭಾನುವಾರ ಕಪ್‌ ಗೆದ್ದಾಗಲಂತೂ ಅಂತರ್ಜಾಲ ಸ್ಟೇಟಸ್‌, ಸ್ಟೋರಿ, ಕಮೆಂಟ್ಸ್‌, ಮೀಮ್‌ಗಳಿಂದ ತುಂಬಿ ತುಳುಕಿತು. ‘ಈ ಸಲ ಕಪ್‌ ನಮ್ದೇ’, ‘ಹೆಣ್ಮಕ್ಳೇ ಸ್ಟ್ರಾಂಗ್‌ ಗುರೂ’, ಸೇರಿದಂತೆ ವಿವಿಧ ಘೋಷ ವಾಕ್ಯಗಳ ಮೂಲಕ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು. 

ವಿವಿಧ ರೀತಿಯಲ್ಲಿ ಅಭಿನಂದನಾ ಪೋಸ್ಟರ್‌ಗಳನ್ನು ಹಂಚಿ, ಸ್ಮೃತಿ ಮಂಧನಾ, ಎಲೈಸಿ ಪೆರ್ರಿ, ಶ್ರೇಯಾಂಕ ಪಾಟೀಲ್‌ರನ್ನು ರಾಣಿಯರಂತೆ ಬಿಂಬಿಸಿ ತಮ್ಮದೇ ಶೈಲಿಯಲ್ಲಿ ಅಭಿಮಾನ ತೋರ್ಪಡಿಸಿದರು.

ಕ್ರಿಕೆಟ್ ಜಗತ್ತು ಸಲ್ಯೂಟ್: ಮಹಿಳಾ ತಂಡ ಟ್ರೋಫಿ ಗೆದ್ದಿದ್ದನ್ನು ಬರೀ ಆರ್‌ಸಿಬಿ ಫ್ಯಾನ್ಸ್‌ಗೆ ಮಾತ್ರವಲ್ಲ ಕ್ರಿಕೆಟ್‌ ಜಗತ್ತೇ ಕೊಂಡಾಡಿತು. ಹಾಲಿ, ಮಾಜಿ ಕ್ರಿಕೆಟಿಗರು ಆರ್‌ಸಿಬಿ ಗೆಲುವಿಗೆ ಅಭಿನಂದನೆ ಸಲ್ಲಿಸಿದರು. 

ವಿರಾಟ್‌ ಕೊಹ್ಲಿ ತಂಡದ ಜೊತೆ ವಿಡಿಯೋ ಕರೆ ಮೂಲಕ ಮಾತಾಡಿದರೆ, ಆರ್‌ಸಿಬಿ ಮಾಜಿ ಕ್ರಿಕೆಟಿಗರಾದ ಎ ಬಿಡಿ ವಿಲಿಯರ್ಸ್‌, ಕ್ರಿಸ್‌ ಗೇಲ್‌ ಜೊತೆ ಸಚಿನ್‌ ತೆಂಡುಲ್ಕರ್‌, ವಿರೇಂದ್ರ ಸೆಹ್ವಾಗ್‌, ಲಕ್ಷ್ಮಣ್‌, ಹರ್ಭಜನ್‌ ಸಿಂಗ್‌, ಮಿಥಾಲಿ ರಾಜ್‌ ಮಹಿಳಾ ತಂಡವನ್ನು ಶ್ಲಾಘಿಸಿದರು. 

ಯಜುವೇಂದ್ರ ಚಹಲ್‌ ‘ಆನಂದ..ಪರಮಾನಂದ.... ಪರಮಾನಂದ’ ಎಂದು ಕನ್ನಡದಲ್ಲೇ ಅಭಿನಂದಿಸಿದರು. ವಿವಿಧ ಐಪಿಎಲ್‌ ಫ್ರಾಂಚೈಸಿಗಳೂ ಅಭಿನಂದನೆ ಸಲ್ಲಿಸಿದವು.

ಟ್ರೆಂಡ್‌ ಆದ ''''ಈ ಸಲ ಕಪ್ ನಮ್ದು'''' ಘೋಷಣೆ: ಆರ್‌ಸಿಬಿ ಆಟಗಾರರು, ಅಭಿಮಾನಿಗಳು ಸಾಮಾನ್ಯವಾಗಿ ‘ಈ ಸಲ ಕಪ್‌ ನಮ್ದೇ’ ಎಂದು ಹೇಳುತ್ತಿರುತ್ತಾರೆ. ಆದರೆ ಕಪ್‌ ಗೆದ್ದ ಬಳಿಕ ಅದು ‘ಈ ಸಲ ಕಪ್‌ ನಮ್ದು’ ಎಂದು ಬದಲಾಗಿದೆ. 

ಸ್ವತಃ ಆರ್‌ಸಿಬಿ ನಾಯಕಿ ಸ್ಮೃತಿ ಮಂಧನಾ ಈ ಸಲ ಕಪ್‌ ನಮ್ದು ಎಂದು ಹೇಳಿದ್ದು ವಿಶೇಷ. ಬಳಿಕ ಸೋಷಿಯಲ್ ಮೀಡಿಯಾದಲ್ಲೆಲ್ಲಾ ‘ಈ ಸಲ ಕಪ್‌ ನಮ್ದು’ ಘೋಷವಾಕ್ಯ ಟ್ರೆಂಡ್‌ ಆಗಿದೆ.

ಲೈಕ್ಸ್‌ನಲ್ಲೂ ದಾಖಲೆ: ಕಪ್‌ ಗೆದ್ದ ಬಳಿಕ ಆರ್‌ಸಿಬಿ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಡಲಾದ ಅಭಿನಂದನಾ ಪೋಸ್ಟರ್‌ ಕೇವಲ 9 ನಿಮಿಷದಲ್ಲೇ 1 ಮಿಲಿಯನ್‌ ಲೈಕ್ಸ್ ಮೈಲುಗಲ್ಲು ಸಾಧಿಸಿತು. 

ಇದು ಭಾರತದಲ್ಲಿ ವೇಗವಾಗಿ 1 ಮಿಲಿಯನ್‌ ಲೈಕ್ಸ್‌ ಪಡೆದ ಪೋಸ್ಟ್‌ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಈ ಪೋಸ್ಟ್‌ಗೆ 3.4 ಮಿಲಿಯನ್‌ ಲೈಕ್ಸ್‌, 1 ಲಕ್ಷ ಕಮೆಂಟ್ಸ್‌ ಬಂದಿದೆ.

ಮೆಟ್ರೋ, ರಸ್ತೆಗಳಲ್ಲಿ ಕುಣಿದ ಫ್ಯಾನ್ಸ್‌: ಆರ್‌ಸಿಬಿ ಟ್ರೋಫಿ ಗೆಲ್ಲುತ್ತಿದ್ದಂತಯೇ ಅಭಿಮಾನಿಗಳ ಹರ್ಷಕ್ಕೆ ಪಾರವೇ ಇರಲಿಲ್ಲ. ಬೆಂಗಳೂರಿನ ಎಂಜಿ ರೋಡ್‌, ಬ್ರಿಗೇಡ್‌ ರೋಡ್‌, ಕಮರ್ಷಿಯಲ್‌ ಸ್ಟ್ರೀಟ್‌ ಸೇರಿದಂತೆ ವಿವಿಧ ಕಡೆಗಳಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿದರು. 

ನಗರದ ವಿವಿಧ ಭಾಗಗಳಲ್ಲೂ ಅಭಿಮಾನಿಗಳು ಪಟಾಕಿ ಹಚ್ಚಿ, ಸಿಹಿ ಹಂಚಿ ಸಂಭ್ರಮಿಸಿದರು. ಇನ್ನು ಡೆಲ್ಲಿ ಸೇರಿದಂತೆ ವಿವಿಧ ಭಾಗಗಳ ಮೆಟ್ರೋಗಳಲ್ಲೂ ಅಭಿಮಾನಿಗಳು ಆರ್‌ಸಿಬಿ...ಆರ್‌ಸಿಬಿ ಎಂದು ಕೂಗುತ್ತಿದ್ದ ದೃಶ್ಯಗಳ ವಿಡಿಯೋ ವೈರಲ್‌ ಆಗಿವೆ.

Share this article