ಚೊಚ್ಚಲ ವಿಶ್ವಕಪ್‌ ಫೈನಲ್‌ಗೆ ದ.ಆಫ್ರಿಕಾ ಲಗ್ಗೆ: ಆಫ್ಘನ್‌ ಕನಸು ನುಚ್ಚುನೂರು

KannadaprabhaNewsNetwork | Updated : Jun 28 2024, 04:12 AM IST

ಸಾರಾಂಶ

ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನ ಮೇಲೆ ಸವಾರಿ ಮಾಡಿ 9 ವಿಕೆಟ್‌ನಿಂದ ಭರ್ಜರಿಯಾಗಿ ಗೆದ್ದ ಹರಿಣ ಪಡೆ. ಆಫ್ರಿಕಾ ದಾಳಿಗೆ ಆಫ್ಘನ್‌ ಧೂಳೀಪಟ, 56ಕ್ಕೆ ಸರ್ವಪತನ. 8.5 ಓವರ್‌ನಲ್ಲೇ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ

ಟ್ರಿನಿಡಾಡ್‌: ಐಸಿಸಿ ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯಗಳ ದುರದೃಷ್ಟಕರ ಸೋಲುಗಳಿಗೆ ಹೆಸರುವಾಸಿಯಾಗಿದ್ದ ದಕ್ಷಿಣ ಆಫ್ರಿಕಾ ಈ ಬಾರಿ ಕೊನೆಗೂ ಬಹು ದಶಕಗಳ ಕನಸನ್ನು ನನಸಾಗಿಸಿಕೊಂಡಿದೆ. 9ನೇ ಆವೃತ್ತಿ ಟಿ20 ವಿಶ್ವಕಪ್‌ನಲ್ಲಿ ಹರಿಣ ಪಡೆ ಫೈನಲ್‌ಗೇರಿದ್ದು, ಚೊಚ್ಚಲ ಟ್ರೋಫಿ ಗೆಲ್ಲಲು ಇನ್ನೊಂದೇ ಹೆಜ್ಜೆ ಬಾಕಿ ಇದೆ.ಗುರುವಾರ ಏಕಮುಖವಾಗಿ ನಡೆದ ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 9 ವಿಕೆಟ್‌ ಭರ್ಜರಿ ಜಯಭೇರಿ ಬಾರಿಸಿತು. 

ಇದರೊಂದಿಗೆ ಚೊಚ್ಚಲ ಬಾರಿ ಐಸಿಸಿ ಟೂರ್ನಿಯ ಸೆಮಿಫೈನಲ್‌ಗೇರಿದ್ದ ಆಫ್ಘನ್‌ನ ಫೈನಲ್‌ ಕನಸು ನುಚ್ಚುನೂರಾಯಿತು.ಟ್ರಿನಿಡಾಡ್‌ ಪಿಚ್‌ನಲ್ಲಿ ರನ್‌ ಗಳಿಸಲು ಹರಸಾಹಸ ಮಾಡಬೇಕೆಂದು ಗೊತ್ತಿದ್ದರೂ ಆಫ್ರಿಕಾಕ್ಕೆ ಸ್ಪರ್ಧಾತ್ಮಕ ಗುರಿ ನೀಡುವ ವಿಶ್ವಾಸದೊಂದಿಗೆ ಮೊದಲು ಬ್ಯಾಟ್ ಮಾಡುವ ನಿರ್ಧಾರ ಕೈಗೊಂಡ ಆಫ್ಘನ್‌, ತನ್ನ ನಿರ್ಧಾರದಲ್ಲಿ ಯಶ ಕಾಣಲಿಲ್ಲ. 

ದ.ಆಫ್ರಿಕಾದ ದಾಳಿಗೆ ಧೂಳೀಪಟವಾದ ಆಫ್ಘನ್‌, 11.5 ಓವರ್‌ಗಳಲ್ಲಿ ಕೇವಲ 56 ರನ್‌ಗೆ ಗಂಟುಮೂಟೆ ಕಟ್ಟಿತು.ಟೂರ್ನಿಯ ಗರಿಷ್ಠ ರನ್‌ ಸರದಾರ ಗುರ್ಬಾಜ್‌ ಸೊನ್ನೆ ಸುತ್ತುವುದರೊಂದಿಗೆ ಆಫ್ಘನ್‌ ಪತನ ಆರಂಭವಾಯಿತು. ಬಳಿಕ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ ಸೇರಿದರು. ಅಜ್ಮತುಲ್ಲಾ ಗಳಿಸಿದ 10 ರನ್‌ ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಮೊತ್ತ. 56ರಲ್ಲಿ 13 ರನ್ ಇತರೆ ರೂಪದಲ್ಲಿ ತಂಡಕ್ಕೆ ಸೇರ್ಪಡೆಗೊಂಡಿತು. ವೇಗಿ ಯಾನ್ಸನ್‌ ಹಾಗೂ ಸ್ಪಿನ್ನರ್‌ ತಬ್ರೇಜ್‌ ಶಮ್ಸಿ ತಲಾ 3 ವಿಕೆಟ್‌ ಪಡೆದರೆ, ರಬಾಡ ಹಾಗೂ ನೋಕಿಯ ತಲಾ 2 ವಿಕೆಟ್‌ ಕಿತ್ತರು.

ಸಣ್ಣ ಗುರಿಯಾದರೂ ಆಫ್ಘನ್‌ ಬೌಲಿಂಗ್‌ ಪಡೆಯನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ ಎಂದರಿತಿದ್ದ ದ.ಆಫ್ರಿಕಾ ರಕ್ಷಣಾತ್ಮಕ ಆಟದ ಮೂಲಕ ಗೆಲುವು ಒಲಿಸಿಕೊಂಡಿತು. ತಂಡ 8.5 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಡಿ ಕಾಕ್‌ 5 ರನ್‌ಗೆ ಔಟಾದರೂ, ರೀಜಾ ಹೆಂಡ್ರಿಕ್ಸ್(ಔಟಾಗದೆ 29) ಹಾಗೂ ನಾಯಕ ಮಾರ್ಕ್‌ರಮ್‌(ಔಟಾಗದೆ 23) ತಂಡವನ್ನು ಫೈನಲ್‌ಗೇರಿಸಿದರು.ಸ್ಕೋರ್‌: ಅಫ್ಘಾನಿಸ್ತಾನ 11.5 ಓವರಲ್ಲಿ 56/10 (ಅಜ್ಮತುಲ್ಲಾ 10, ಶಮ್ಸಿ 3-6, ಯಾನ್ಸನ್‌ 3-16), ದ.ಆಫ್ರಿಕಾ 8.5 ಓವರ್‌ಗಳಲ್ಲಿ 60/1 (ಹೆಂಡ್ರಿಕ್ಸ್‌ 29*, ಮಾರ್ಕ್‌ರಮ್‌ 23*, ಫಾರೂಖಿ 1-11) 

ಪಂದ್ಯಶ್ರೇಷ್ಠ: ಮಾರ್ಕೊ ಯಾನ್ಸನ್‌.

08 ಪಂದ್ಯ: ಟಿ20 ವಿಶ್ವಕಪ್‌ನಲ್ಲಿ ದ.ಆಫ್ರಿಕಾ ಸತತ 8 ಪಂದ್ಯಗಳಲ್ಲಿ ಜಯಗಳಿಸಿದೆ. ಇದು ಜಂಟಿ ಗರಿಷ್ಠ. 2022-24ರ ವರೆಗೆ ಆಸ್ಟ್ರೇಲಿಯಾ ಕೂಡಾ ಸತತ 8 ಪಂದ್ಯ ಗೆದ್ದಿತ್ತು.

67 ಎಸೆತ: ದ.ಆಫ್ರಿಕಾ 67 ಎಸೆತ ಬಾಕಿ ಉಳಿಸಿಕೊಂಡು ಪಂದ್ಯ ಗೆದ್ದಿತು. ಇದು ಟಿ20 ಕ್ರಿಕೆಟ್‌ನಲ್ಲಿ ತಂಡದ ಗರಿಷ್ಠ. 2007ರಲ್ಲಿ ಪಾಕಿಸ್ತಾನ ವಿರುದ್ಧ 51 ಎಸೆತ ಬಾಕಿ ಉಳಿಸಿ ಗೆದ್ದಿದ್ದು ಈ ವರೆಗಿನ ದಾಖಲೆ.

Share this article