ನ್ಯೂಯಾರ್ಕ್: ಟಿ20 ವಿಶ್ವಕಪ್ ಮತ್ತೊಂದು ಲೋ ಸ್ಕೋರ್ ಪಂದ್ಯಕ್ಕೆ ಸಾಕ್ಷಿಯಾಗಿದೆ. ಎರಡೂ ಇನ್ನಿಂಗ್ಸ್ ಸೇರಿ 160ಕ್ಕಿಂತ ಕಡಿಮೆ ಮೊತ್ತ ದಾಖಲಾದ ಸೋಮವಾರದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ 6 ವಿಕೆಟ್ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ, ಹರಿಣಗಳ ಮಾರಕ ದಾಳಿಗೆ ತತ್ತರಿಸಿ 19.1 ಓವರ್‌ಗಳಲ್ಲಿ 77 ರನ್‌ಗೆ ಸರ್ವಪತನ ಕಂಡಿತು. ಇದು ಟಿ20ಯಲ್ಲಿ ಲಂಕಾದ ಅತಿ ಕಡಿಮೆ ಸ್ಕೋರ್. 31 ರನ್‌ಗೆ 1 ವಿಕೆಟ್ ಕಳೆದುಕೊಂಡಿದ್ದ ಲಂಕಾ, 45 ಆಗುವಷ್ಟರಲ್ಲಿ ಮತ್ತೆ 5 ವಿಕೆಟ್ ನಷ್ಟಕ್ಕೊಳಗಾಯಿತು. ಆಫ್ರಿಕಾದ ದಾಳಿ ಮುಂದೆ ರನ್ ಗಳಿಸಲು ತಿಣುಕಾಡಿದ ಲಂಕಾ ಯಾವ ಹಂತದಲ್ಲೂ ಚೇತರಿಸಿಕೊಳ್ಳಲಿಲ್ಲ.
ಕುಸಾಲ್(19), ಮ್ಯಾಥ್ಯೂಸ್(16) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ನೋಕಿಯಾ 4 ಓವರಲ್ಲಿ 7 ರನ್‌ಗೆ 4 ವಿಕೆಟ್ ಕಿತ್ತರು.ಸುಲಭ ಗುರಿ ಸಿಕ್ಕರೂ ಆಫ್ರಿಕಾಕ್ಕೆ ಸುಲಭದಲ್ಲಿ ಗೆಲುವು ಲಭಿಸರಲಿಲ್ಲ. ನಿಧಾನವಾಗಿ ಒಂದೊಂದೇ ರನ್ ಕಲೆಹಾಕುತ್ತಾ ಬಂದ ತಂಡ 16.2 ಓವರಲ್ಲಿ ಗೆಲುವಿನ ದಡ ಸೇರಿತು. ಡಿ ಕಾಕ್ 20, ಕ್ಲಾಸೆನ್ 19 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.
ಸ್ಕೋರ್: ಲಂಕಾ 19.1 ಓವರಲ್ಲಿ 77/10 (ಕುಸಾಲ್ 19, ನೋಕಿಯಾ 4-7, ರಬಾಡ 2-21, ಕೇಶವ್ 2-22), ದ.ಆಫ್ರಿಕಾ 16.2 ಓವರಲ್ಲಿ 80/4 (ಡಿ ಕಾಕ್ 20, ಕ್ಲಾಸೆನ್ 19*, ಹಸರಂಗ 2-22) ಪಂದ್ಯಶ್ರೇಷ್ಠ: ಏನ್ರಿಚ್ ನೋಕಿಯಾ.
ವಿಶ್ವಕಪ್‌ನ ಬಳಿಕ ಮತ್ತೆ ಕೋಚ್ ಆಗಲ್ಲ: ದ್ರಾವಿಡ್
ನವದೆಹಲಿ: ಭಾರತ ತಂಡ ಕೋಚ್ ಆಗಿರುವ ರಾಹುಲ್ ದ್ರಾವಿಡ್, ಟಿ20 ವಿಶ್ವಕಪ್ ಬಳಿಕ ಹುದ್ದೆ ತೊರೆಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಟಿ20 ವಿಶ್ವಕಪ್‌ಗೆ ದ್ರಾವಿಡ್ ಅವಧಿ ಕೊನೆಗೊಳ್ಳಲಿದೆ.
ಬಿಸಿಸಿಐ ಈಗಾಗಲೇ ನೂತನ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಈ ನಡುವೆ ದ್ರಾವಿಡ್ ಮತ್ತೊಂದು ಅವಧಿಗೆ ಕೋಚ್ ಆಗಲ್ಲ ಎಂದೇ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಬಗ್ಗೆ ಸ್ವತಃ ದ್ರಾವಿಡ್ ಖಚಿತಪಡಿಸಿದ್ದು, ಟಿ20 ವಿಶ್ವಕಪ್‌ನಲ್ಲಿ ಕೊನೆ ಬಾರಿ ಭಾರತದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದೇನೆ ಎಂದಿದ್ದಾರೆ.