;Resize=(412,232))
ರಾಂಚಿ: ವಿರಾಟ್ ಕೊಹ್ಲಿಯ ಅಮೋಘ ಶತಕದ ಆಟಕ್ಕೆ ದಕ್ಷಿಣ ಆಫ್ರಿಕಾ ತಂಡ ತಲೆಬಾಗಿದ್ದು, ಭಾರತ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 17 ರನ್‌ಗಳ ಸೋಲನುಭವಿಸಿದೆ. ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನದ ಬಳಿಕ ಕುಲ್ದೀಪ್ ಯಾದವ್ ಹಾಗೂ ಹರ್ಷಿತ್ ರಾಣಾ ನಡೆಸಿದ ಮಾರಕ ದಾಳಿಯಿಂದಾಗಿ ಟೀಂ ಇಂಡಿಯಾ ಸೋಲಿನ ದವಡೆಯಿಂದ ಪಾರಾಯಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
ಕೆ.ಎಲ್.ರಾಹುಲ್ ನಾಯಕತ್ವದ ಭಾರತ ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿತು. ಕೊಹ್ಲಿ ಶತಕ, ರೋಹಿತ್ ಶರ್ಮಾ ಹಾಗೂ ರಾಹುಲ್ ತಲಾ ಅರ್ಧಶತಕದ ನೆರವಿನಿಂದ ಭಾರತ 8 ವಿಕೆಟ್‌ಗೆ 349 ರನ್ ಕಲೆಹಾಕಿತು. ಈ ಮೊತ್ತವನ್ನು ದ.ಆಫ್ರಿಕಾ ಬ್ಯಾಟರ್‌ಗಳು ಯಶಸ್ವಿಯಾಗಿ ಬೆನ್ನಟ್ಟದಿದ್ದರೂ ಸುಲಭದಲ್ಲಿ ಸೋಲೊಪ್ಪಲಿಲ್ಲ. ಉತ್ತಮ ಹೋರಾಟದ ಹೊರತಾಗಿಯೂ ತಂಡ 49.2 ಓವರ್‌ಗಳಲ್ಲಿ 332 ರನ್‌ಗೆ ಆಲೌಟಾಯಿತು.
ಇನ್ನಿಂಗ್ಸ್‌ನ 2ನೇ ಓವರ್‌ನಲ್ಲೇ ವೇಗಿ ಹರ್ಷಿತ್, ಎಡಗೈ ಬ್ಯಾಟರ್‌ಗಳಾದ ರ್‍ಯಾನ್ ರಿಕೆಲ್ಟನ್ ಹಾಗೂ ಕ್ವಿಂಟನ್ ಡಿ ಕಾಕ್‌ರನ್ನು ಪೆವಿಲಿಯನ್‌ಗೆ ಅಟ್ಟಿದರು. 5ನೇ ಓವರ್‌ನಲ್ಲಿ ಮಾರ್ಕ್‌ರಮ್ ಔಟಾದರು. ಈ ವೇಳೆ ತಂಡವನ್ನು ಟೋನಿ ಡೆ ಜೊರ್ಜಿ(39), ಡೆವಾಲ್ಡ್ ಬ್ರೆವಿಸ್(37) ಮೇಲೆತ್ತಿದರು. ಆದರೆ 130 ಆಗುವಷ್ಟರಲ್ಲಿ ತಂಡ 5 ವಿಕೆಟ್ ಕಳೆದುಕೊಂಡಿತು. ಮುಂದೆ ಭಾರತವನ್ನು ಕಾಡಿದ್ದು ಮಾರ್ಕೊ ಯಾನ್ಸನ್(39 ಎಸೆತಕ್ಕೆ 70) ಹಾಗೂ ಮ್ಯಾಥ್ಯೂ ಬ್ರೀಟ್ಸ್‌ಕೆ(72). ಈ ಜೋಡಿ 6ನೇ ವಿಕೆಟ್‌ಗೆ 69 ಎಸೆತಗಳಲ್ಲಿ 97 ರನ್ ಸೇರಿಸಿತು. ಆದರೆ 34ನೇ ಓವರ್‌ನಲ್ಲಿ ಇವರಿಬ್ಬರನ್ನೂ ಔಟ್ ಮಾಡಿದ ಕುಲ್ದೀಪ್ ಭಾರತವನ್ನು ಕಾಪಾಡಿದರು. ಬಳಿಕ ಕಾರ್ಬಿನ್ ಬಾಶ್(51 ಎಸೆತಕ್ಕೆ 67) ಹೋರಾಡಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ.
ಇದಕ್ಕೂ ಮುನ್ನ ರಾಂಚಿ ಕ್ರೀಡಾಂಗಣ ಕೊಹ್ಲಿ ದರ್ಬಾರ್‌ಗೆ ಸಾಕ್ಷಿಯಾಯಿತು. 2ನೇ ವಿಕೆಟ್‌ಗೆ ರೋಹಿತ್-ಕೊಹ್ಲಿ ಜೋಡಿ 136 ರನ್ ಜೊತೆಯಾಟವಾಡಿ ನೆರೆದಿದ್ದ ಅಭಿಮಾನಿಗಳನ್ನು ಮನರಂಜಿಸಿತು. ದೀರ್ಘಕಾಲದ ಬಳಿಕ ತವರಿನಲ್ಲಿ ಇವರಿಬ್ಬರ ಅಮೋಘ ಜೊತೆಯಾಟವನ್ನು ಪ್ರೇಕ್ಷಕರು ಕಣ್ತುಂಬಿಕೊಂಡರು. ಆದರೆ ರೋಹಿತ್ 57ಕ್ಕೆ ವಿಕೆಟ್ ಒಪ್ಪಿಸಿದರು. ಋತುರಾಜ್(8), ವಾಷಿಂಗ್ಟನ್ ಸುಂದರ್(13) ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ. 5ನೇ ವಿಕೆಟ್‌ಗೆ ರಾಹುಲ್ ಜೊತೆಗೂಡಿದ ಕೊಹ್ಲಿ, ಶತಕ ಸಿಡಿಸಿ ಸಂಭ್ರಮಿಸಿದರು. ಅವರು 120 ಎಸೆತಕ್ಕೆ 130 ರನ್ ಗಳಿಸಿ ಔಟಾದರು. ಕೊನೆಯಲ್ಲಿ ರಾಹುಲ್ 60, ಜಡೇಜಾ 32 ರನ್ ಸಿಡಿಸಿ ತಂಡದ ಮೊತ್ತವನ್ನು 350ರ ಗಡಿ ತಲುಪಿಸಿದರು.
ಸ್ಕೋರ್: ಭಾರತ 50 ಓವರಲ್ಲಿ 349/8 (ವಿರಾಟ್ 135, ರಾಹುಲ್ 60, ರೋಹಿತ್ 57, ಬರ್ಗರ್ 2-65, ಬಾರ್ಟ್‌ಮನ್ 2-60), ದ.ಆಫ್ರಿಕಾ 49.2 ಓವರಲ್ಲಿ 332/10 (ಬ್ರೀಟ್ಸ್‌ಕೆ 72, ಯಾನ್ಸನ್ 70, ಬಾಶ್ 67, ಕುಲ್ದೀಪ್ 4-68, ಹರ್ಷಿತ್ 3-65, ಅರ್ಶ್‌ದೀಪ್ 2-64)
ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ ಅಂ.ರಾ. ಕ್ರಿಕೆಟ್‌ನಲ್ಲಿ ಕೊಹ್ಲಿ 83ನೇ ಶತಕ
ಪಂದ್ಯದಲ್ಲಿ 135 ರನ್ ಸಿಡಿಸಿದ ವಿರಾಟ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 83ನೇ ಶತಕ ಪೂರೈಸಿದರು. ಇದು ಏಕದಿನದಲ್ಲಿ ಅವರ 52ನೇ ಸೆಂಚುರಿ. ಉಳಿದಂತೆ ಟೆಸ್ಟ್ ಕ್ರಿಕೆಟ್‌ನಲ್ಲಿ 30, ಅಂತಾರಾಷ್ಟ್ರೀಯ ಟಿ20ಯಲ್ಲಿ 1 ಶತಕ ಬಾರಿಸಿದ್ದಾರೆ.
ಒಟ್ಟು 681 ರನ್ : 2 ತಂಡಗಳ ದಾಖಲೆ
ಪಂದ್ಯದಲ್ಲಿ ಭಾರತ 349, ದ.ಆಫ್ರಿಕಾ 332 ಸೇರಿ ಒಟ್ಟು 681 ರನ್ ದಾಖಲಾಯಿತು. ಇದು ಉಭಯ ತಂಡಗಳ ನಡುವೆ ಏಕದಿನ ಪಂದ್ಯದಲ್ಲಿ ಗರಿಷ್ಠ. 2015ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಈ 2 ತಂಡಗಳು ಒಟ್ಟು 662 ರನ್ ಕಲೆಹಾಕಿದ್ದವು.
03 ಶತಕ
ವಿರಾಟ್ ಕೊಹ್ಲಿ ರಾಂಚಿ ಕ್ರೀಡಾಂಗಣದಲ್ಲಿ ಆಡಿದ 5 ಪಂದ್ಯಗಳ ಪೈಕಿ 3ನೇ ಶತಕ ದಾಖಲಿಸಿದ್ದಾರೆ.
ಒಟ್ಟಿಗೇ 392 ಪಂದ್ಯದಲ್ಲಿ ಕಣಕ್ಕೆ : ರೋಹಿತ್-ಕೊಹ್ಲಿ ಭಾರತದ ಪರ ದಾಖಲೆ
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭಾರತದ ಪರ ಒಟ್ಟು 392 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟಾಗಿ ಆಡಿದ್ದಾರೆ. ಇದು ಹೊಸ ದಾಖಲೆ. ಸಚಿನ್ ತೆಂಡುಲ್ಕರ್ ಹಾಗೂ ರಾಹುಲ್ ದ್ರಾವಿಡ್ ಒಟ್ಟಾಗಿ 391 ಪಂದ್ಯವಾಡಿದ್ದು, ಅದನ್ನು ಕೊಹ್ಲಿ-ರೋಹಿತ್ ಮುರಿದಿದ್ದಾರೆ. ವಿಶ್ವ ಕ್ರಿಕೆಟಿಗರಲ್ಲಿ ಅತಿ ಹೆಚ್ಚು ಪಂದ್ಯ ಒಟ್ಟಾಗಿ ಆಡಿದ ದಾಖಲೆ ಇರುವುದು ಜಯಸೂರ್ಯ-ಸಂಗಕ್ಕರ ಹೆಸರಲ್ಲಿ. ಶ್ರೀಲಂಕಾದ ಈ ಜೋಡಿ 550 ಪಂದ್ಯಗಳಲ್ಲಿ ಒಟ್ಟಾಗಿ ಆಡಿದೆ.