10 ಗಂಟೆಯಲ್ಲಿ 4.6 ಕೆ.ಜಿ. ತೂಕ ಇಳಿಸಿದ ಅಮನ್‌ ಅನರ್ಹತೆಯಿಂದ ಪಾರಾಗಿ ಕಂಚು ಗೆದ್ದರು!

KannadaprabhaNewsNetwork |  
Published : Aug 11, 2024, 01:42 AM ISTUpdated : Aug 11, 2024, 04:04 AM IST
ಅಮನ್‌ ಶೆರಾವತ್‌ | Kannada Prabha

ಸಾರಾಂಶ

57 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮನ್‌. ಸೆಮೀಸ್‌ ಬಳಿಕ ತೂಕ 61.5 ಕೆ.ಜಿ.ಗೆ ಹೆಚ್ಚಳ. ರಾತ್ರಿ ನಿದ್ರಿಸದೆ ಸ್ಕಿಪ್ಪಿಂಗ್‌, ಜಾಗಿಂಗ್‌. ಬೆಳಗ್ಗೆ ಪರೀಕ್ಷೆಗೆ ಮುನ್ನ ತೂಕ 56.9 ಕೆ.ಜಿ.ಗೆ ಇಳಿಕೆ

ಪ್ಯಾರಿಸ್‌: ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತದ ತಾರಾ ಕುಸ್ತಿಪಟು ಅಮನ್‌ ಶೆರಾವತ್‌, ಪಂದ್ಯಕ್ಕೂ ಮುನ್ನ ಕೇವಲ 10 ಗಂಟೆಯಲ್ಲಿ ಬರೋಬ್ಬರಿ 4.6 ಕೆ.ಜಿ. ತೂಕ ಇಳಿಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.21 ವರ್ಷದ ಅಮನ್‌ 57 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದರು. 

ಗುರುವಾರ ಬೆಳಗ್ಗೆ ಅಮನ್‌ರ ತೂಕ 57 ಕೆ.ಜಿ.ಗಿಂತ ಕಡಿಮೆ ಇದ್ದರೂ, ಅದೇ ದಿನ ರಾತ್ರಿ ಸೆಮಿಫೈನಲ್‌ ಪಂದ್ಯದ ಬಳಿಕ ತೂಕ 61.5 ಕೆ.ಜಿ.ಗೆ ಹೆಚ್ಚಳವಾಗಿದೆ. ಹೀಗಾಗಿ ಶುಕ್ರವಾರದ ಮತ್ತೊಂದು ಸುತ್ತಿನ ತೂಕ ಪರೀಕ್ಷೆಗೂ ಮುನ್ನ ಅಮನ್‌ 4.5 ಕೆ.ಜಿ. ತೂಕ ಇಳಿಸಬೇಕಾಗಿತ್ತು.ಹೀಗಾಗಿ ಇಡೀ ದಿನ ರಾತ್ರಿ ಶ್ರಮಪಟ್ಟಿದ್ದಾರೆ. 

ಒಂದೂವರೆ ಗಂಟೆಗಳ ಕಾಲ ಮ್ಯಾಟ್‌ನಲ್ಲಿ ಅಭ್ಯಾಸ ನಡೆಸಿದ ಅಮನ್‌, ಬಳಿಕ ಒಂದೆ ಗಂಟೆ ಕಾಲ ಹಬೆಯ ಚೇಂಬರ್‌ನಲ್ಲಿ ಕೂತು ಬೆವೆತಿದ್ದಾರೆ. ಬಳಿಕ ಒಂದು ಗಂಟೆ ನಿರಂತರವಾಗಿ ಟ್ರೀಡ್‌ಮಿಲ್‌ನಲ್ಲಿ ಓಡಿದ ಅವರು, ಮತ್ತೆ ಹಬೆಯ ಕೋಣೆಯಲ್ಲಿ ಕೂತಿದ್ದಾರೆ. 

ಇಷ್ಟಾದರೂ ತೂಕ ಇಳಿಯದಿದ್ದಾಗ ಹಲವು ಗಂಟೆಗಳ ಕಾಲ ಜಾಗಿಂಗ್‌, ಸ್ಕಿಪ್ಪಿಂಗ್‌ ಮೂಲಕ ಮತ್ತಷ್ಟು ತೂಕ ಕಡಿತಗೊಳಿಸಿದ್ದಾರೆ. ಬೆಳಗ್ಗೆ 4.30ಕ್ಕೆ ಪರಿಶೀಲಿಸಿದಾಗ ಅಮನ್‌ ತೂಕ 56.9 ಕೆ.ಜಿ.ಗೆ ಇಳಿಕೆಯಾಗಿದೆ. ರಾತ್ರಿಯಿಡೀ ಮಲಗದೆ ತೂಕ ಇಳಿಸಲು ಪ್ರಯತ್ನಿಸಿದ್ದ ಅಮನ್‌, ಕೇವಲ ನಿಂಬೆ ಜ್ಯೂಸ್, ನೀರು ಹಾಗೂ ಜೇನು ತುಪ್ಪ ಸೇವಿಸಿದ್ದರು ಎಂದು ತಿಳಿದುಬಂದಿದೆ.

ವಿನೇಶ್‌ಗೆ ಮುಳುವಾದ 100 ಗ್ರಾಂ ಅಮನ್‌ಗೆ ವರವಾಯ್ತು

ಇತ್ತೀಚೆಗಷ್ಟೇ ವಿನೇಶ್‌ ಫೋಗಟ್‌ ತಮ್ಮ ತೂಕ 50 ಕೆ.ಜಿ.ಗಿಂತ ಜಾಸ್ತಿ ಇದ್ದಿದ್ದಕ್ಕೆ ಫೈನಲ್‌ ಪಂದ್ಯಕ್ಕೂ ಮುನ್ನ ಅನರ್ಹಗೊಂಡಿದ್ದರು. ಇಡೀ ರಾತ್ರಿ ನಿದ್ದೆ ಬಿಟ್ಟು ಕಠಿಣ ಪರಿಶ್ರಮ ಪಟ್ಟರೂ, ತೂಕ ಪರಿಶೀಲನೆ ವೇಳೆ 100 ಗ್ರಾಂ ಜಾಸ್ತಿ ಇದ್ದಿದ್ದು ವಿನೇಶ್‌ಗೆ ಮುಳುವಾಗಿತ್ತು. ಆದರೆ ಅಮನ್‌ ಇಡೀ ರಾತ್ರಿ ಪರಿಶ್ರಮದಿಂದಾಗಿ ತಮ್ಮ ತೂಕವನ್ನು ನಿಗದಿಗಿಂತ ಕಡಿಮೆ ಅಂದರೆ 57 ಕೆ.ಜಿ.ಗಿಂತಲೂ 100 ಗ್ರಾಂ ಕಡಿಮೆ ಮಾಡಿದ್ದು, ಪದಕವನ್ನು ತಂದುಕೊಟ್ಟಿದೆ.

PREV

Recommended Stories

ಅದ್ದೂರಿಯಾಗಿ ಡಾ. ವಿಷ್ಣುವರ್ಧನ್‌ 75ನೇ ಹುಟ್ಟುಹಬ್ಬ ಆಚರಣೆ
ಪಾಕ್‌ ಕದನಕ್ಕೂ ಮುನ್ನ ಭಾರತಕ್ಕೆ ಇಂದು ಒಮಾನ್‌ ವಿರುದ್ಧ ‘ಅಭ್ಯಾಸ’