ಬೆಂಗಳೂರು: ಸೌತ್ ಯುನೈಟೆಡ್ ಫುಟ್‌ಬಾಲ್ ಕ್ಲಬ್(ಎಸ್‌ಯುಎಫ್‌ಸಿ) ಯುವ ಪ್ರತಿಭಾವಂತ ಆಟಗಾರರಿಗೆ ಅತ್ಯುತ್ಕೃಷ್ಟ ತರಬೇತಿ ನೀಡಿ ಬೆಳೆಸುವ ಉದ್ದೇಶದಿಂದ ಇಂದು ತನ್ನ ರೆಸಿಡೆನ್ಷಿಯಲ್ ಅಕಾಡೆಮಿ ಅನ್ನು ಉದ್ಘಾಟಿಸಿದೆ.ಈ ಅಕಾಡೆಮಿಯನ್ನು ಶಿವಾಜಿನಗರ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸೌತ್ ಯುನೈಟೆಡ್ ಫುಟ್‌ಬಾಲ್ ಕ್ಲಬ್‌ನ ನಿರ್ದೇಶಕರಾದ ಶರಣ್ ಪಾರೀಖ್, ಎಸ್‌ಯುಎಫ್‌ಸಿನ ಸಿಇಓ ಮೊಹಮ್ಮದ್ ರಫೀಕ್, ಮತ್ತು ಕ್ರಿಮ್ಸನ್ ಎಜುಕೇಶನ್‌ನ ಸಹ-ಸಿಇಓ ಹುಸೇನ್ ದೊಹಾದ್‌ವಾಲಾ ಉಪಸ್ಥಿತರಿದ್ದರು.ಈ ಅಕಾಡೆಮಿಯಲ್ಲಿ ಅಂಡರ್-13, ಅಂಡರ್-15 ಮತ್ತು ಅಂಡರ್- 17 ವಿಭಾಗದ ಕ್ರೀಡಾಪಟುಗಳಿಗೆ ವೃತ್ತಿಪರ ಫುಟ್‌ಬಾಲ್ ದಾರಿಯನ್ನು ಸುಲಭಗೊಳಿಸುವ ಅತ್ಯುತ್ತಮ ತರಬೇತಿ ನೀಡಲಾಗುತ್ತದೆ. ಜೊತೆಗೆ ಆಟಗಾರರ ಸಮಗ್ರ ಅಭಿವೃದ್ಧಿ ಮತ್ತು ದೀರ್ಘಕಾಲೀನ ಬೆಳವಣಿಗೆಯ ಮೇಲೆ ಗಮನ ಕೇಂದ್ರೀಕರಿಸಲಾಗುತ್ತದೆ. ರೆಸಿಡೆನ್ಷಿಯಲ್ ಅಕಾಡೆಮಿಯು ಎಸ್‌ಯುಎಫ್‌ಸಿ ಪ್ರಾಯೋಜಕರು ಒದಗಿಸುವ ಪ್ರಯೋಜನಗಳನ್ನು ಬಳಸಿಕೊಂಡು ದೇಶಾದ್ಯಂತ ಇರುವ ಹಿಂದುಳಿದ ಹಿನ್ನೆಲೆಯಿಂದ ಬಂದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಆಯ್ಕೆ ಮಾಡುತ್ತದೆ. ನಂತರ ಅವರಿಗೆ ಸಮಗ್ರ ತರಬೇತಿ, ಶಿಕ್ಷಣ ಮತ್ತು ಪೌಷ್ಟಿಕ ಆಹಾರವನ್ನು ಒದಗಿಸುತ್ತದೆ. ರೆಸಿಡೆನ್ಷಿಯಲ್ ಅಕಾಡೆಮಿಯು ಫಿಫಾ ಸ್ಟಾಂಡರ್ಡ್ ನ ಫುಟ್‌ಬಾಲ್ ಮೂಲಸೌಕರ್ಯವನ್ನು ಹೊಂದಿದ್ದು, 11-ಎ-ಸೈಡ್, 6-ಎ-ಸೈಡ್, ಮತ್ತು 3-ಎ-ಸೈಡ್ ಟರ್ಫ್‌ಗಳನ್ನು ಹೊಂದಿದೆ. ಜೊತೆಗೆ ಸಂಜೆ ಹೊತ್ತಿನ ತರಬೇತಿ ಮತ್ತು ಪಂದ್ಯಗಳಿಗಾಗಿ ಫ್ಲಡ್‌ಲೈಟ್ ಪಿಚ್‌ಗಳನ್ನು ಸಹ ಹೊಂದಿದೆ. ಕ್ರೀಡಾಪಟುಗಳ ಬೆಳವಣಿಗೆಗೆ ಪೂರಕವಾಗಿ ಈ ಅಕಾಡೆಮಿ ರೂಪುಗೊಂಡಿದ್ದು, ಸಂಪೂರ್ಣ ಸುಸಜ್ಜಿತ ಜಿಮ್, ಐಸ್ ಬಾತ್ ವ್ಯವಸ್ಥೆ, ಸ್ಟೀಮ್ ರೂಮ್ ಗಳು, ಫಿಸಿಯೋಥೆರಪಿ ಕೊಠಡಿ ಮತ್ತು ಆಫ್-ಸೈಟ್ ಈಜುಕೊಳ ಹೊಂದಿದೆ. ಈ ವ್ಯವಸ್ಥೆಗಳನ್ನು ವೃತ್ತಿಪರರು ನಿರ್ವಹಿಸುತ್ತಾರೆ.ಅಕಾಡೆಮಿಯು ಕ್ರೀಡಾ ಪೌಷ್ಟಿಕ ತಜ್ಞರಿಂದ ರಚಿತವಾದ ಅತ್ಯುತ್ತಮ ಆಹಾರ ಕ್ರಮವನ್ನು ಒಳಗೊಂಡಿದ್ದು, ಪ್ರತೀ ಆಟಗಾರನಿಗೆ ಉತ್ತಮ ಪೌಷ್ಟಿಕ ಆಹಾರ ಒದಗಿಸಲಾಗುತ್ತದೆ. ಸಮಗ್ರ ವೈದ್ಯಕೀಯ ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ರೂಪಿಸಲಾಗಿದ್ದು, ಪ್ರಮುಖ ಆಸ್ಪತ್ರೆಗಳೊಂದಿಗೆ ತುರ್ತು ಚಿಕಿತ್ಸೆಗಾಗಿ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ. ಇಲ್ಲಿ ತಕ್ಷಣವೇ ಪ್ರಥಮ ಚಿಕಿತ್ಸಾ ಸೌಲಭ್ಯಗಳು ಮತ್ತು 24/7 ಸಿಸಿಟಿವಿ ಕಣ್ಗಾವಲು, ಸೂಕ್ತ ಭದ್ರತೆ ಲಭ್ಯವಿದೆ.ಈ ಕುರಿತು ಮಾತನಾಡಿದ ಸೌತ್ ಯುನೈಟೆಡ್ ಫುಟ್‌ಬಾಲ್ ಕ್ಲಬ್‌ನ ನಿರ್ದೇಶಕರಾದ ಶರಣ್ ಪಾರೀಖ್ ಅವರು, ‘ಸೌತ್ ಯುನೈಟೆಡ್ ಫುಟ್‌ಬಾಲ್ ಕ್ಲಬ್ ಸದಾ ಯುವ ಪ್ರತಿಭೆಗಳನ್ನು ಪೋಷಿಸುತ್ತಾ ಬಂದಿದೆ. ನಾವು ಯುವ ಭಾರತೀಯ ಫುಟ್‌ಬಾಲ್ ಆಟಗಾರರಿಗೆ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬಲ್ಲ ಮಾರ್ಗವನ್ನು ಹಾಕಿಕೊಡುತ್ತೇವೆ. ನಮ್ಮ ರೆಸಿಡೆನ್ಷಿಯಲ್ ಅಕಾಡೆಮಿಯು ಶ್ರೇಷ್ಠ ಫುಟ್‌ಬಾಲ್ ಆಟಗಾರರನ್ನು ಸೃಷ್ಟಿಸುವುದರ ಜೊತೆಗೆ, ಶ್ರೇಷ್ಠ ವ್ಯಕ್ತಿಗಳನ್ನೂ ರೂಪಿಸಲಿದೆ. ರಚನಾತ್ಮಕ ಅಭಿವೃದ್ಧಿ ಮತ್ತು ಸಮುದಾಯ ಕೇಂದ್ರಿತ ಯೋಜನೆಗಳ ಮೂಲಕ ಕ್ರೀಡೆ ಮತ್ತು ಸಮಾಜದ ಒಳಿತಿಗೆ ಹೂಡಿಕೆ ಮಾಡುತ್ತಿರುವುದಕ್ಕೆ ನಮಗೆ ಹೆಮ್ಮೆ ಇದೆ. ರೆಸಿಡೆನ್ಷಿಯಲ್ ಅಕಾಡೆಮಿಯಲ್ಲಿ ವಾರ್ಷಿಕ ತರಬೇತಿ ಕಾರ್ಯಕ್ರಮ ನಡೆಯಲಿದ್ದು, ಪ್ರತೀ ವರ್ಷವೂ ಹೊಸ ಬ್ಯಾಚ್‌ಗಳಿಗೆ ತರಬೇತಿ ನೀಡಲಾಗುತ್ತದೆ. ಅಕಾಡೆಮಿಯ ಮೊದಲ ಬ್ಯಾಚ್ ಅನ್ನು ಎಸ್‌ಯುಎಫ್‌ಸಿಆರ್‌ಎ ಬ್ಯಾನರ್ ಅಡಿಯಲ್ಲಿ ಭಾರತದಾದ್ಯಂತ 16ಕ್ಕೂ ಹೆಚ್ಚು ನಗರಗಳಲ್ಲಿ ಟ್ರಯಲ್ ನಡೆಸಿ ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು. ಕ್ರಿಮ್ಸನ್ ಎಜುಕೇಶನ್‌ನ ಸಹ-ಸಿಇಓ ಹುಸೇನ್ ದೊಹಾದ್‌ವಾಲಾ ಮಾತನಾಡಿ, ‘ವಿನ್‌ಮೋರ್ ಅಕಾಡೆಮಿ ಜಕ್ಕೂರ್ ಸಂಸ್ಥೆಯು ಸೌತ್ ಯುನೈಟೆಡ್ ಫುಟ್‌ಬಾಲ್ ಕ್ಲಬ್ ಜೊತೆಗಿನ ಸಹಭಾಗಿತ್ವದಲ್ಲಿ ಪ್ರತಿಭಾವಂತ ವಿದ್ಯಾರ್ಥಿ-ಕ್ರೀಡಾಪಟುಗಳಿಗಾಗಿ ವಿನೂತನ ಶೈಕ್ಷಣಿಕ ಕಾರ್ಯಕ್ರಮವನ್ನು ಪರಿಚಯಿಸಿದೆ. ಈ ಯೋಜನೆಯಡಿಯಲ್ಲಿ ಪ್ರತಿಭಾವಂತ ಎಸ್‌ಯುಎಫ್‌ಸಿ ಆಟಗಾರರು ವಿನ್‌ಮೋರ್‌ನಲ್ಲಿ ಸಂಪೂರ್ಣ ಶಿಕ್ಷಣ ವಿದ್ಯಾರ್ಥಿವೇತನವನ್ನು ಪಡೆಯಲಿದ್ದಾರೆ. ಜೊತೆಗೆ ಉನ್ನತ ತರಬೇತಿ ಮತ್ತು ಶೈಕ್ಷಣಿಕ ನೆರವು ನೀಡಲಾಗುತ್ತದೆ’ ಎಂದು ಹೇಳಿದರು. ಪ್ರೋಗ್ರಾಮ್ ಹೆಡ್ ಇಂದ್ರೇಶ್ ನಾಗರಾಜನ್ ಅವರು ಮಾತನಾಡಿ, “ನಮ್ಮ ವಿಧಾನವು ವೃತ್ತಿಪರವೂ ಆಗಿದೆ ಮತ್ತು ವೈಯಕ್ತಿಕವೂ ಆಗಿದೆ. ಪ್ರತೀ ಕ್ರೀಡಾಪಟುವಿಗೆ ತನ್ನ ಶ್ರೇಷ್ಠ ಸಾಮರ್ಥ್ಯ ಪ್ರದರ್ಶನ ಮಾಡಲು ನೆರವಾಗುವಂತೆ ತರಬೇತಿ ಕಾರ್ಯಕ್ರಮ, ಶೈಕ್ಷಣಿಕ ಪಾಠ ಮತ್ತು ಮಾರ್ಗದರ್ಶನ ಯೋಜನೆ ರೂಪಿಸಲಾಗಿದೆ. ಎಸ್‌ಯುಎಫ್‌ಸಿ ರೆಸಿಡೆನ್ಷಿಯಲ್ ಅಕಾಡೆಮಿಯು ಆಟಗಾರರ ಮನಸ್ಸು, ದೇಹ, ಮತ್ತು ಆತ್ಮವನ್ನು ಒಳಗೊಂಡು ಪರಿಪೂರ್ಣ ಅಭಿವೃದ್ಧಿಗೆ ಗಮನ ನೀಡಲಿದೆ” ಎಂದು ಹೇಳಿದರು.ಆಪ್ಟಿಮೈಸ್ಡ್ ಪರ್ಫಾರ್ಮೆನ್ಸ್ ಟ್ರೈನಿಂಗ್ (ಓಪಿಟಿ) ಎಸ್‌ಯುಎಫ್‌ಸಿನ ಕೋಚಿಂಗ್ ಫಿಲಾಸಫಿಯ ಕೇಂದ್ರದಲ್ಲಿದ್ದು, ಈ ಮೂಲಕ ತಾಂತ್ರಿಕ ಕೌಶಲ್ಯ ಅಭಿವೃದ್ಧಿ, ತಾಂತ್ರಿಕ ಬುದ್ಧಿಮತ್ತೆ, ದೈಹಿಕ ತಯಾರಿ ಮತ್ತು ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತದೆ. ಆಟಗಾರರು ತಮ್ಮ ತಮ್ಮ ಸ್ಥಾನಕ್ಕೆ ತಕ್ಕಂತೆ ಕೋಚಿಂಗ್ ಪಡೆಯಲಿದ್ದಾರೆ. ನಿಯಮಿತವಾಗಿ ಅವರ ಪ್ರದರ್ಶನ ಮೌಲ್ಯಮಾಪನ ಮಾಡಲಾಗುತ್ತದೆ. ಜೊತೆಗೆ ಡೇಟಾ-ಆಧಾರಿತ ಪ್ರಗತಿಯನ್ನು ನೋಡಲಾಗುತ್ತದೆ. ಜೊತೆಗೆ ಕ್ರೀಡಾ ಮನಶಾಸ್ತ್ರಜ್ಞರು ಮತ್ತು ಗಾಯ ಉಂಟಾಗದಂತೆ ನೋಡಿಕೊಳ್ಳಬಲ್ಲ ತಜ್ಞರ ಜೊತೆ ಮಾತುಕತೆ ನಡೆಸುವ ಮೂಲಕ ಸಮಗ್ರ ಅಭಿವೃದ್ಧಿ ಹೊಂದಲಿದ್ದಾರೆ.