ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ : ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ 2 ಬೆಳ್ಳಿ ಪದಕ ಖಚಿತ

KannadaprabhaNewsNetwork |  
Published : Sep 02, 2024, 02:07 AM ISTUpdated : Sep 02, 2024, 04:34 AM IST
ಸುಹಾಸ್‌ ಯತಿರಾಜ್‌ | Kannada Prabha

ಸಾರಾಂಶ

ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌: ಪುರುಷರ ಸಿಂಗಲ್ಸ್‌ ಎಸ್‌ಎಲ್‌4 ವಿಭಾಗದಲ್ಲಿ ಕನ್ನಡಿಗ ಸುಹಾಸ್‌, ಎಸ್‌ಎಲ್‌3 ವಿಭಾಗದಲ್ಲಿ ನಿತೇಶ್‌ ಫೈನಲ್‌ಗೆ. ಎರಡೂ ವಿಭಾಗದ ಫೈನಲ್‌ ಇಂದು. ಮಹಿಳಾ ಸಿಂಗಲ್ಸ್‌ನಲ್ಲೂ ಭಾರತಕ್ಕೆ ಪದಕ ಖಚಿತ. ಸೆಮೀಸ್‌ನಲ್ಲಿಂದು ಮನಿಶಾ-ತುಳಸಿಮತಿ ಫೈಟ್

ಪ್ಯಾರಿಸ್‌: ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೆರಡು ಬೆಳ್ಳಿ ಪದಕಗಳು ಖಚಿತವಾಗಿದೆ. ಭಾನುವಾರ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಕ್ರೀಡಾಪಟುಗಳು ಪ್ರಾಬಲ್ಯ ಸಾಧಿಸಿದ್ದು, ಒಟ್ಟು 3 ಪದಕಗಳನ್ನು ಖಚಿತಪಡಿಸಿಕೊಂಡಿದ್ದಾರೆ. 

ಸೋಮವಾರ ಈ ವಿಭಾಗಗಳ ಸ್ಪರ್ಧೆಗಳು ನಡೆಯಲಿದ್ದು, ಶಟ್ಲರ್‌ಗಳು ದೇಶದ ಪದಕ ಖಾತೆಗೆ ಚಿನ್ನದ ಗರಿ ತೊಡಿಸುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಶೂಟಿಂಗ್‌ ಹಾಗೂ ಅಥ್ಲೆಟಿಕ್ಸ್‌ನಲ್ಲಿ ಭಾನುವಾರ ಭಾರತ ನಿರಾಸೆ ಅನುಭವಿಸಿದೆ.ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್‌ ಎಸ್‌ಎಲ್‌4 ವಿಭಾಗದಲ್ಲಿ ಕನ್ನಡಿಗ ಸುಹಾಸ್‌ ಯತಿರಾಜ್‌ ಅವರು ಭಾರತದವರೇ ಆದ ಸುಕಾಂತ್‌ ಕದಂ ವಿರುದ್ಧ ಗೆಲುವು ಸಾಧಿಸಿದರು. ಇದರೊಂದಿಗೆ ಸತತ 2ನೇ ಬಾರಿ ಫೈನಲ್‌ಗೇರಿದ ಸಾಧನೆ ಮಾಡಿದರು. ಸುಕಾಂತ್‌ ಕಂಚಿನ ಪದಕ ಪಂದ್ಯದಲ್ಲಿ ಆಡಬೇಕಿದೆ.

ಇದೇ ವೇಳೆ ಎಸ್‌ಎಲ್‌3 ವಿಭಾಗದಲ್ಲಿ ನಿತೇಶ್‌ ಕುಮಾರ್‌ ಫೈನಲ್‌ ಪ್ರವೇಶಿಸಿದರು. ವಿಶ್ವ ಚಾಂಪಿಯನ್‌ಶಿಪ್‌ ಹಾಗೂ ಪ್ಯಾರಾ ಏಷ್ಯನ್‌ ಗೇಮ್ಸ್‌ ಪದಕ ವಿಜೇತ 29 ವರ್ಷದ ನಿತೇಶ್‌ ಭಾನುವಾರ ನಡೆದ ಸೆಮಿಫೈನಲ್‌ನಲ್ಲಿ ಜಪಾನ್‌ನ ಡಯ್‌ಸುಕೆ ಫುಜಿಹಾರ ವಿರುದ್ಧ 21-16, 21-12 ಗೇಮ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಐಐಟಿ ಪದವೀಧರರಾಗಿರುವ ನಿತೇಶ್‌ ಸೋಮವಾರ ಮಧ್ಯಾಹ್ನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಗ್ರೇಟ್‌ ಬ್ರಿಟನ್‌ನ ಡೇನಿಲ್‌ ಬೆಥೆಲ್ ವಿರುದ್ಧ ಸೆಣಸಾಡಲಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ಭಾರತದ ಪ್ರಮೋದ್‌ ಭಗತ್‌ ವಿರುದ್ಧ ಸೋತು ಬೆಳ್ಳಿ ಪದಕ ಪಡೆದಿದ್ದ ಬೆಥೆಲ್‌, ಈ ಬಾರಿ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ ಬುನ್‌ಸುನ್‌ ಮೊಂಗ್‌ಖೊನ್‌ ವಿರುದ್ಧ 21-7, 21-9ರಲ್ಲಿ ಜಯಗಳಿಸಿದರು.

ಬ್ಯಾಡ್ಮಿಂಟನ್‌: ಮಹಿಳೆಯರ ಸಿಂಗಲ್ಸ್‌ನಲ್ಲಿ ಪದಕ ಖಚಿತ

ಕ್ರೀಡಾಕೂಟದಲ್ಲಿ ಭಾರತಕ್ಕೆ ಬ್ಯಾಡ್ಮಿಂಟನ್‌ನಲ್ಲಿ ಮತ್ತೊಂದು ಪದಕ ಖಚಿತವಾಗಿದೆ. ಸೋಮವಾರ ಮಹಿಳೆಯರ ಸಿಂಗಲ್ಸ್‌ ಎಸ್‌ಯು5 ವಿಭಾಗದ ಸೆಮಿಫೈನಲ್‌ನಲ್ಲಿ ಮನಿಶಾ ರಾಮದಾಸ್‌ ಹಾಗೂ ತುಳಸಿಮತಿ ಮುರುಗೇಶನ್‌ ಪರಸ್ಪರ ಸೆಣಸಾಡಲಿದ್ದಾರೆ. ಯಾರೇ ಗೆದ್ದರೂ ಭಾರತಕ್ಕೆ ಕನಿಷ್ಠ ಬೆಳ್ಳಿ ಪದಕ ಖಚಿತವಾಗಲಿದೆ. ಭಾನುವಾರ 19 ವರ್ಷದ ಮನಿಶಾ ಕ್ವಾರ್ಟರ್‌ ಫೈನಲ್‌ನಲ್ಲಿ ಜಪಾನ್‌ನ ಮಮಿಕೊ ಟೊಯೊಡ ವಿರುದ್ಧ 21-13, 21-16ರಲ್ಲಿ ಗೆಲುವು ಸಾಧಿಸಿದರು. ಮಹಿಳೆಯರ ಎಸ್‌ಎಚ್‌6 ವಿಭಾಗದಲ್ಲಿ ನಿತ್ಯಾ ಶಿವನ್‌ ಪೋಲೆಂಡ್‌ನ ಒಲಿವಿಯಾ ವಿರುದ್ಧ 21-4, 21-7ರಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿದರು.ಆದರೆ ಸಿಂಗಲ್ಸ್‌ನ ಎಸ್‌ಎಲ್‌3 ವಿಭಾಗದಲ್ಲಿ ಮಂದೀಪ್‌ ಕೌರ್‌ ಹಾಗೂ ಎಸ್ಎಲ್‌4 ವಿಭಾಗದಲ್ಲಿ ಪಾಲಕ್‌ ಕೊಹ್ಲಿ ಕ್ವಾರ್ಟರ್‌ ಫೈನಲ್‌ನಲ್ಲೇ ಸೋತು ಅಭಿಯಾನ ಕೊನೆಗೊಳಿಸಿದರು.

ಇಂದು ಕಂಚಿನ ಪದಕಕ್ಕಾಗಿ ಶಿವರಾಜನ್‌-ನಿತ್ಯಾ ಸೆಣಸು

ಬ್ಯಾಡ್ಮಿಂಟನ್‌ನ ಮಿಶ್ರ ಡಬಲ್ಸ್‌ ಎಸ್‌ಎಚ್‌6 ವಿಭಾಗದಲ್ಲಿ ಸೋಮವಾರ ಶಿವರಾಜನ್‌ ಹಾಗೂ ನಿತ್ಯಾ ಜೋಡಿ ಕಂಚಿನ ಪದಕದ ಪಂದ್ಯದಲ್ಲಿ ಸೆಣಸಾಡಲಿದೆ. ಭಾನುವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತೀಯ ಜೋಡಿಗೆ ಅಮೆರಿಕ ತಂಡದ ವಿರುದ್ಧ 21-17, 14-21, 13-21 ಗೇಮ್‌ಗಳಲ್ಲಿ ಸೋಲು ಎದುರಾಯಿತು. ಕಂಚಿನ ಪದಕ ಪಂದ್ಯದಲ್ಲಿ ಇಂಡೋನೇಷ್ಯಾದ ಸುಭಾನ್‌-ರಿನಾ ಜೋಡಿ ಸವಾಲು ಎದುರಾಗಲಿದೆ.

PREV

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌