ರನ್‌ ರೈಸರ್ಸ್‌ ಆರ್ಭಟಕ್ಕೆ ಜೈಂಟ್ಸ್‌ ತತ್ತರ !

KannadaprabhaNewsNetwork |  
Published : May 09, 2024, 12:45 AM ISTUpdated : May 09, 2024, 04:35 AM IST
ಹೆಡ್‌ ಮತ್ತು ಅಭಿಷೇಕ್‌ | Kannada Prabha

ಸಾರಾಂಶ

ಲಖನೌ ಜೈಂಟ್ಸ್ ನೀಡಿದ್ದ 166 ರನ್‌ಗಳ ಗುರಿಯನ್ನು 9.4 ಓವರ್‌ನಲ್ಲೇ ಬೆನ್ನತ್ತಿ ಗೆದ್ದ ಹೈದರಾಬಾದ್‌. ಹೆಡ್‌ 30 ಬಾಲಲ್ಲಿ 89, ಅಭಿಷೇಕ್‌ 28 ಬಾಲಲ್ಲಿ 75. 10 ವಿಕೆಟ್ ಗೆಲುವು. ಪ್ಲೇ-ಆಫ್‌ಗೆ ಮತ್ತಷ್ಟು ಸನಿಹ.

ಹೈದರಾಬಾದ್‌: ಸನ್‌ರೈಸರ್ಸ್‌ ಹೈದ್ರಾಬಾದ್‌ನ ಹೆಸರನ್ನು ರನ್‌ರೈಸರ್ಸ್‌ ಎಂದು ಬದಲಿಸಿದರೆ ಹೆಚ್ಚು ಸೂಕ್ತ ಎನಿಸಿಕೊಳ್ಳಬಹುದು. ಸದ್ಯದ ಸನ್‌ರೈಸರ್ಸ್‌ ಆರ್ಭಟ ಗಮನಿಸಿದರೆ ಇದು ಅತಿಶಯೋಕ್ತಿ ಅನಿಸಲ್ಲ. ಆಕ್ರಮಣಕಾರಿ ಆಟದ ಮೂಲಕ ಈ ಐಪಿಎಲ್‌ನಲ್ಲಿ ಈಗಾಗಲೇ ದಾಖಲೆಗಳ ಸುರಿಮಳೆಗೈದಿರುವ ಸನ್‌ರೈಸರ್ಸ್‌, ಬುಧವಾರ ಲಖನೌ ಜೈಂಟ್ಸ್‌ ನೀಡಿದ್ದ 166 ರನ್‌ ಗುರಿಯನ್ನು ಕೇವಲ 9.4 ಓವರಲ್ಲೇ ಬೆನ್ನತ್ತಿ ಗೆದ್ದಿದೆ!.

ಪ್ಲೇ-ಆಫ್‌ ರೇಸ್‌ನಲ್ಲಿದ್ದ ಇತ್ತಂಡಗಳ ನಡುವಿನ ರೇಸ್‌ ಭಾರಿ ಪೈಪೋಟಿ ನಿರೀಕ್ಷಿಸಲಾಗಿದ್ದರೂ ಸನ್‌ರೈಸರ್ಸ್‌ ತಂಡ ಸಂಪೂರ್ಣ ಅಧಿಪತ್ಯ ಸಾಧಿಸಿ ಏಕಮುಖವಾಗಿಯೇ ಪಂದ್ಯ ಗೆದ್ದಿತು. ಟೂರ್ನಿಯ 7ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿ ಪ್ಲೇ-ಆಫ್‌ಗೆ ಮತ್ತಷ್ಟು ಹತ್ತಿರವಾದರೆ, ಜೈಂಟ್ಸ್‌ 6ನೇ ಸೋಲಿನೊಂದಿಗೆ ಪ್ಲೇ-ಆಫ್‌ ಹಾದಿ ಮತ್ತಷ್ಟು ಕಠಿಣಗೊಳಿಸಿತು.

ಮೊದಲು ಲಖನೌ ಬ್ಯಾಟಿಂಗ್‌ ನೋಡಿದವರಿಗೆ ಪಿಚ್‌ ನಿಧಾನಗತಿಯಲ್ಲಿದೆ ಎಂದನಿಸಿದ್ದು ಸುಳ್ಳಲ್ಲ. ಆಯುಶ್‌ ಬದೋನಿ(30 ಎಸೆತಗಳಲ್ಲಿ ಔಟಾಗದೆ 55), ನಿಕೋಲರ್‌ ಪೂರನ್‌(26 ಎಸೆತಗಳಲ್ಲಿ ಔಟಾಗದೆ 48) ಹೋರಾಟದಿಂದಾಗಿ ತಂಡ 4 ವಿಕೆಟ್‌ಗೆ 165 ರನ್‌ ಗಳಿಸಿತು. ನಾಯಕ ಕೆ.ಎಲ್‌.ರಾಹುಲ್‌ 29 ರನ್‌ ಗಳಿಸಲು 33 ಎಸೆತಗಳನ್ನು ತೆಗೆದುಕೊಂಡರು.ಸ್ಪರ್ಧಾತ್ಮಕ ಗುರಿ ಪಡೆದ ಸನ್‌ರೈಸರ್ಸ್‌, ಜೈಂಟ್ಸ್‌ ಬೌಲರ್‌ಗಳನ್ನು ಅಕ್ಷರಶಃ ಚೆಂಡಾಡಿತು. 5.4 ಓವರಲ್ಲೇ ತಂಡ 100ರ ಗಡಿ ದಾಟಿತು. 10 ಓವರ್‌ ಮುಕ್ತಾಯಕ್ಕೂ ಮುನ್ನವೇ ಗೆಲುವಿನ ದಡ ಸೇರಿತು. 16 ಎಸೆತಗಳಲ್ಲಿ ಫಿಫ್ಟಿ ಪೂರ್ಣಗೊಳಿಸಿ, ಹೆಡ್‌ 30 ಎಸೆತಗಳಲ್ಲಿ ತಲಾ 8 ಬೌಂಡರಿ, ಸಿಕ್ಸರ್‌ನೊಂದಿಗೆ 89 ರನ್‌ ಚಚ್ಚಿದರೆ, 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್‌ ಶರ್ಮಾ, 28 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್‌ನೊಂದಿಗೆ 75 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು.ಸ್ಕೋರ್‌: ಲಖನೌ 20 ಓವರಲ್ಲಿ 165/4 (ಬದೋನಿ 55*, ಪೂರನ್‌ 48*, ಭುವನೇಶ್ವರ್‌ 2-12), ಸನ್‌ರೈಸರ್ಸ್‌ 9.4 ಓವರಲ್ಲಿ 167/0 (ಹೆಡ್‌ 89*, ಅಭಿಷೇಕ್‌ 75*)

ಮೊದಲ 10 ಓವರಲ್ಲಿ ಗರಿಷ್ಠ ರನ್ ದಾಖಲೆ

ಐಪಿಎಲ್‌ನಲ್ಲಿ ಮೊದಲ 10 ಓವರ್‌ನಲ್ಲಿ ಗರಿಷ್ಠ ರನ್‌ ಸಿಡಿಸಿದ ತನ್ನದೇ ದಾಖಲೆಯನ್ನು ಸನ್‌ರೈಸರ್ಸ್‌(167) ಉತ್ತಮಪಡಿಸಿಕೊಂಡಿತು. ಇತ್ತೀಚೆಗಷ್ಟೇ ಮುಂಬೈ ವಿರುದ್ಧ 148, ಡೆಲ್ಲಿ ವಿರುದ್ಧ 158 ರನ್‌ ಗಳಿಸಿತ್ತು.

03ನೇ ಬಾರಿ: ಐಪಿಎಲ್‌ನಲ್ಲಿ ಹೆಡ್‌ 3ನೇ ಬಾರಿ 20 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಫಿಫ್ಟಿ ಸಿಡಿಸಿದರು.

04ನೇ ಬಾರಿ: ಐಪಿಎಲ್‌ ಪವರ್‌-ಪ್ಲೇನಲ್ಲೇ ಹೆಡ್‌ 4ನೇ ಬಾರಿ ಫಿಫ್ಟಿ ಪೂರ್ಣಗೊಳಿಸಿದರು. ಡೇವಿಡ್‌ ವಾರ್ನರ್‌ 6 ಬಾರಿ ಈ ಸಾಧನೆ ಮಾಡಿದ್ದಾರೆ.

1000 ಸಿಕ್ಸರ್: ಈ ಐಪಿಎಲ್‌ನಲ್ಲಿ 1000+ ಸಿಕ್ಸರ್‌ ದಾಖಲಾದವು. 2022, 2023ರಲ್ಲೂ 1000ಕ್ಕಿಂತ ಹೆಚ್ಚು ಸಿಕ್ಸರ್‌ಗಳು ದಾಖಲಾಗಿತ್ತು.

ಮುಂಬೈ ಅಧಿಕೃತ ಔಟ್‌ 

ಸನ್‌ರೈಸರ್ಸ್‌ ಗೆಲುವಿನೊಂದಿಗೆ ಮುಂಬೈ ತಂಡ ಪ್ಲೇ-ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬಿತ್ತು. ಈ ಬಾರಿ ನಾಕೌಟ್‌ನಿಂದ ಹೊರಗುಳಿದ ಮೊದಲ ತಂಡ ಮುಂಬೈ. ತಂಡ 12 ಪಂದ್ಯಗಳಲ್ಲಿ 8 ಅಂಕ ಹೊಂದಿದ್ದು, ಇನ್ನೆರಡು ಪಂದ್ಯ ಗೆದ್ದರೂ ನಾಕೌಟ್‌ಗೇರಲು ಸಾಧ್ಯವಿಲ್ಲ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ