ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 : ಬರೋಡಾ vs ಮುಂಬೈ, ಮ.ಪ್ರ. vs ಡೆಲ್ಲಿ ಸೆಮಿಫೈನಲ್

KannadaprabhaNewsNetwork | Updated : Dec 12 2024, 04:23 AM IST

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಆಲೂರು ಕೆಎಸ್‌ಸಿಎ ಕ್ರೀಡಾಂಗಣಗಳಲ್ಲಿ ನಡೆದ 4 ಕ್ವಾರ್ಟರ್‌ ಫೈನಲ್‌ಗಳಲ್ಲಿ ಸೌರಾಷ್ಟ್ರ, ಬೆಂಗಾಲ್‌, ವಿದರ್ಭ ಹಾಗೂ ಉತ್ತರ ಪ್ರದೇಶ ತಂಡಗಳು ಸೋತು ಹೊರಬಿದ್ದವು.

 ಬೆಂಗಳೂರು  : ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಗೆ ಸೆಮಿಫೈನಲ್‌ ಅಖಾಢ ಸಿದ್ಧಗೊಂಡಿದೆ. ಈ ಬಾರಿ ಅಂತಿಮ 4ರ ಘಟ್ಟದಲ್ಲಿ ಶುಕ್ರವಾರ ಬರೋಡಾ ಹಾಗೂ ಮುಂಬೈ, ಡೆಲ್ಲಿ ಹಾಗೂ ಮಧ್ಯಪ್ರದೇಶ ತಂಡಗಳು ಪರಸ್ಪರ ಸೆಣಸಾಡಲಿವೆ. ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಆಲೂರು ಕೆಎಸ್‌ಸಿಎ ಕ್ರೀಡಾಂಗಣಗಳಲ್ಲಿ ನಡೆದ 4 ಕ್ವಾರ್ಟರ್‌ ಫೈನಲ್‌ಗಳಲ್ಲಿ ಸೌರಾಷ್ಟ್ರ, ಬೆಂಗಾಲ್‌, ವಿದರ್ಭ ಹಾಗೂ ಉತ್ತರ ಪ್ರದೇಶ ತಂಡಗಳು ಸೋತು ಹೊರಬಿದ್ದವು.

ಬರೋಡಾಗೆ ಶರಣಾದ ಬೆಂಗಾಲ್‌

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ವಾರ್ಟರ್‌ನಲ್ಲಿ ಬೆಂಗಾಲ್ ವಿರುದ್ಧ ಬರೋಡಾ 41 ರನ್‌ ಜಯಗಳಿಸಿತು. ಬರೋಡಾ 7 ವಿಕೆಟ್‌ಗೆ 172 ರನ್‌ ಗಳಿಸಿದರೆ, ಬೆಂಗಾಲ್‌ 18 ಓವರಲ್ಲಿ 131ಕ್ಕೆ ಆಲೌಟಾಯಿತು. ಶಾಬಾಜ್ ಅಹ್ಮದ್‌(55) ಹೋರಾಟ ವ್ಯರ್ಥವಾಯಿತು.

ಡೆಲ್ಲಿಗೆ 19 ರನ್‌ ಗೆಲುವು

2ನೇ ಕ್ವಾರ್ಟರ್‌ನಲ್ಲಿ ಡೆಲ್ಲಿ ವಿರುದ್ಧ ಉತ್ತರ ಪ್ರದೇಶ 19 ರನ್‌ಗಳಿಂದ ಶರಣಾಯಿತು. ಡೆಲ್ಲಿ 3 ವಿಕೆಟ್‌ಗೆ 193 ರನ್‌ ಗಳಿಸಿತು. ಅನುಜ್‌ ರಾವತ್‌ 33 ಎಸೆತಗಳಲ್ಲಿ ಔಟಾಗದೆ 73 ರನ್‌ ಗಳಿಸಿದರು. ಉತ್ತರ ಪ್ರದೇಶ 174 ರನ್‌ಗೆ ಸರ್ವಪತನ ಕಂಡಿತು. ಪ್ರಿಯಂ ಗರ್ಗ್‌(54) ಹೋರಾಟ ಫಲ ನೀಡಲಿಲ್ಲ.

ಸೌರಾಷ್ಟ್ರಕ್ಕೆ 6 ವಿಕೆಟ್‌ ಸೋಲು

ಆಲೂರಿನಲ್ಲಿ ನಡೆದ ಮಧ್ಯಪ್ರದೇಶ ವಿರುದ್ಧ ಕ್ವಾರ್ಟರ್‌ ಫೈನಲ್‌ನಲ್ಲಿ ಸೌರಾಷ್ಟ್ರ 6 ವಿಕೆಟ್‌ ಸೋಲನುಭವಿಸಿತು. ಸೌರಾಷ್ಟ್ರ 7 ವಿಕೆಟ್‌ಗೆ 173 ರನ್‌ ಗಳಿಸಿತು. ಚಿರಾಗ್‌ ಜಾನಿ 45 ಎಸೆತಗಳಲ್ಲಿ ಔಟಾಗದೆ 80 ರನ್‌ ಸಿಡಿಸಿದರು. ಮ.ಪ್ರ. 19.2 ಓವರಲ್ಲೇ ಗುರಿ ಬೆನ್ನತ್ತಿ ಗೆದ್ದಿತು. ಅರ್ಪಿತ್ ಗೌಡ್‌ 42, ವೆಂಕಟೇಶ್‌ ಅಯ್ಯರ್‌ 38 ರನ್‌ ಗಳಿಸಿದರು.

ಮುಂಬೈಗೆ ತಲೆಬಾಗಿದ ವಿದರ್ಭ

ಆಲೂರಿನ ಮತ್ತೊಂದು ಕ್ವಾರ್ಟರ್‌ ಪಂದ್ಯದಲ್ಲಿ ಮುಂಬೈ ತಂಡ ವಿದರ್ಭ ವಿರುದ್ಧ 6 ವಿಕೆಟ್‌ ಜಯಗಳಿಸಿತು. ವಿದರ್ಭ 6 ವಿಕೆಟ್‌ಗೆ 221 ರನ್‌ ಗಳಿಸಿತು. ಅಥರ್ವ ತೈಡೆ 66, ಅಪೂರ್ವ ವಾಂಖಡೆ 51 ರನ್‌ ಬಾರಿಸಿದರು. ದೊಡ್ಡ ಗುರಿಯನ್ನು ಮುಂಬೈ 19.2 ಓವರಲ್ಲಿ ಬೆನ್ನತ್ತಿತು. ಅಜಿಂಕ್ಯಾ ರಹಾನೆ 45 ಎಸೆತಕ್ಕೆ 84, ಪೃಥ್ವಿ ಶಾ 49 ರನ್‌ ಸಿಡಿಸಿದರು.

ನಾಳೆ ಸೆಮಿಫೈನಲ್‌

2 ಸೆಮಿಫೈನಲ್‌ ಪಂದ್ಯಗಳು ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಬರೋಡಾ-ಮುಂಬೈ ಪಂದ್ಯ ಬೆಳಗ್ಗೆ 11ಕ್ಕೆ, ಡೆಲ್ಲಿ-ಮಧ್ಯಪ್ರದೇಶ ಪಂದ್ಯ ಸಂಜೆ 4.30ಕ್ಕೆ ಆರಂಭಗೊಳ್ಳಲಿದೆ.

Share this article