ಟಿ20 ಕಮ್‌ಬ್ಯಾಕ್‌: ವಿರಾಟ್ ಕೊಹ್ಲಿ, ರೋಹಿತ್‌ ಶರ್ಮಗೆ ಅಗ್ನಿಪರೀಕ್ಷೆ

KannadaprabhaNewsNetwork | Updated : Jan 10 2024, 11:40 AM IST

ಸಾರಾಂಶ

2022ರ ಟಿ20 ವಿಶ್ವಕಪ್‌ ಬಳಿಕ ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಆಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಸರಣಿಯಲ್ಲಿ ಮಿಂಚಿ ಆಯ್ಕೆಯನ್ನು ಸಮರ್ಥಿಸಿಕೊಳ್ತಾರಾ ಎಂಬ ಕುರಿತು ಭಾರೀ ಕುತೂಹಲ ವ್ಯಕ್ತವಾಗಿದೆ.

ನವದೆಹಲಿ: ತೂಗುಯ್ಯಾಲೆಯಲ್ಲಿದ್ದ ಹಿರಿಯ ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಬದುಕನ್ನು ಬಿಸಿಸಿಐ ಹಿರಿತನ, ಅನುಭವದ ಆಧಾರದಲ್ಲಿ ರಕ್ಷಿಸಿ, ಮತ್ತೆ ಟೀಂ ಇಂಡಿಯಾದ ಬಾಗಿಲು ತೆರೆದು ಕೊಟ್ಟಿದೆ. 

ಗುರುವಾರದಿಂದ ಆರಂಭಗೊಳ್ಳಲಿರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಇಬ್ಬರನ್ನೂ ಆಯ್ಕೆ ಮಾಡಿದೆ. ಆದರೆ ಇಬ್ಬರೂ ಆಯ್ಕೆ ಸಮರ್ಥಿಸಿಕೊಳ್ಳುವ ರೀತಿ ಆಟವಾಡುತ್ತಾರಾ ಎಂಬ ಕುತೂಹಲ ಸದ್ಯ ಎಲ್ಲರಲ್ಲಿದೆ.

35 ವರ್ಷದ ಕೊಹ್ಲಿ, 36ರ ರೋಹಿತ್ 2022ರ ಟಿ20 ವಿಶ್ವಕಪ್‌ ಬಳಿಕ ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿಲ್ಲ. ಆದರೆ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ತಂಡಕ್ಕೆ ನೇರವಾಗಿ ಆಯ್ಕೆ ಮಾಡುವ ಬದಲು ಆಫ್ಘನ್‌ ಸರಣಿಯಲ್ಲಿ ಆಡಿಸಲಾಗುತ್ತಿದೆ. ಅಂದರೆ ಟಿ20 ವಿಶ್ವಕಪ್‌ನಲ್ಲೂ ಅವರು ಸ್ಥಾನ ಗಿಟ್ಟಿಸಿಕೊಳ್ಳುವುದು ಬಹುತೇಕ ಖಚಿತ. 

ಆದರೆ ಇಬ್ಬರೂ ಟೆಸ್ಟ್‌, ಏಕದಿನದಲ್ಲಿ ಮಿಂಚಿದ ಹಾಗೆ ಕಳೆದೆರಡು ವರ್ಷಗಳಲ್ಲಿ ಟಿ20ಯಲ್ಲಿ ಅಬ್ಬರಿಸಿಲ್ಲ.ಕೊಹ್ಲಿಯ ಕಳೆದ 4 ಐಪಿಎಲ್‌ ಆವೃತ್ತಿಗಳ ಸ್ಟ್ರೈಕ್‌ರೇಟ್‌ ಕ್ರಮವಾಗಿ 121.35, 119.46, 115.99 ಮತ್ತು 139.82 ಇದೆ. 

ಅತ್ತ ರೋಹಿತ್‌ 2013ರಿಂದ ಯಾವ ಐಪಿಎಲ್‌ ಆವೃತ್ತಿಯಲ್ಲೂ 400ರ ಗಡಿ ದಾಟಿಲ್ಲ. ಸ್ಟ್ರೈಕ್‌ರೇಟ್‌ ಕೂಡಾ 125ರ ಆಸುಪಾಸಿನಲ್ಲಿದೆ. ಮತ್ತೊಂದೆಡೆ ಮಧ್ಯ ಓವರ್‌, ಸ್ಪಿನ್ನರ್‌ಗಳ ಎದುರು ಇಬ್ಬರದ್ದೂ ಸಾಧಾರಣ ಆಟ. 

ಹೀಗಾಗಿ ಅಫ್ಘಾನಿಸ್ತಾನ ಸರಣಿಯಲ್ಲಿ ಕೊಹ್ಲಿ, ರೋಹಿತ್‌ಗೆ ತಮ್ಮ ಬ್ಯಾಟಿಂಗ್‌ ಸ್ಟ್ರೈಕ್‌ ರೇಟ್‌ ಹೆಚ್ಚಿಸುವತ್ತ ಗಮನ ಹರಿಸುವ ಹೊಣೆಗಾರಿಕೆಯಿದೆ. ಒಂದು ವೇಳೆ ವಿಫಲರಾದರೆ ಅಥವಾ ನಿಧಾನ ಆಟವಾಡಿದರೆ ಟಿ20 ವಿಶ್ವಕಪ್‌ ತಂಡದ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚು.

ಯುವ ಪ್ರತಿಭೆಗಳ ಜೊತೆ ಪೈಪೋಟಿ: ಟೀಂ ಇಂಡಿಯಾದಲ್ಲಿ ಪ್ರತಿಭೆಗಳಿಗೇನೂ ಕಮ್ಮಿಯಿಲ್ಲ. ಯುವ ಪ್ರತಿಭಾವಂತರ ದಂಡೇ ಅವಕಾಶಕ್ಕಾಗಿ ಕಾಯುತ್ತಿದೆ. ಈ ನಡುವೆ ಸ್ಫೋಟಕ ಯುವ ಬ್ಯಾಟರ್‌ಗಳನ್ನು ಬದಿಗಿಟ್ಟು ಮತ್ತೆ ಕೊಹ್ಲಿ, ರೋಹಿತ್‌ಗೆ ಅವಕಾಶ ನೀಡಿದ್ದು ಹಲವರ ಅಚ್ಚರಿಗೆ ಕಾರಣವಾಗಿದೆ. 

ಅಲ್ಲದೆ ಕಳೆದೆರಡು ಟಿ20 ವಿಶ್ವಕಪ್‌ನಲ್ಲೂ ಭಾರತದ ಸೋಲಿಗೆ ಪ್ರಮುಖ ಕಾರಣವಾಗಿದ್ದು ಆರಂಭಿಕ ಮೂವರು ಬ್ಯಾಟರ್‌ಗಳ ನಿಧಾನ ಆಟ. ಆ ಸಮಸ್ಯೆಗೆ ಉತ್ತರ ಕಂಡುಕೊಳ್ಳಬೇಕಿದ್ದ ಬಿಸಿಸಿಐ, ಸ್ಫೋಟಕ ಯುವ ಆಟಗಾರರನ್ನು ಕೈಬಿಟ್ಟು ಮತ್ತೆ ಹಿರಿಯರಿಗೆ ಮಣೆ ಹಾಕುವ ತಯಾರಿಯಲ್ಲಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

Share this article