ಟಿ20 ವಿಶ್ವಕಪ್‌: ಇಂದು ಭಾರತ vs ಪಾಕ್‌ ಹೈವೋಲ್ಟೇಜ್‌ ಕದನ!

KannadaprabhaNewsNetwork |  
Published : Jun 09, 2024, 01:33 AM ISTUpdated : Jun 09, 2024, 03:48 AM IST
ಭಾರತ-ಪಾಕಿಸ್ತಾನ  | Kannada Prabha

ಸಾರಾಂಶ

ನ್ಯೂಯಾರ್ಕ್‌ನಲ್ಲಿ ಬದ್ಧವೈರಿಗಳ ಮುಖಾಮುಖಿ. ಭಾರತಕ್ಕೆ ಸತತ 2ನೇ ಜಯದೊಂದಿಗೆ ಸೂಪರ್‌-8ನತ್ತ ದಾಪುಗಾಲಿಡುವ ಗುರಿ. ಅಮೆರಿಕಕ್ಕೆ ಶರಣಾಗಿ ಕುಗ್ಗಿರುವ ಪಾಕ್‌ಗೆ ಪುಟಿದೇಳಬೇಕಾದ ಒತ್ತಡ. ಇಂದು ಸೋತರೆ ಗುಂಪು ಹಂತದಲ್ಲೇ ಹೊರಬೀಳುವ ಆತಂಕ.

ನ್ಯೂಯಾರ್ಕ್‌: 2024ರ ಟಿ20 ವಿಶ್ವಕಪ್‌ನ ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಮಹಾಕದನಕ್ಕೆ ಇಲ್ಲಿನ ನಾಸೌ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದ್ದು, ಬದ್ಧವೈರಿಯನ್ನು ಹೊಸಕಿ ಸೂಪರ್‌-8 ಹಂತದತ್ತ ದಾಪುಗಾಲಿರಿಸಲು ಟೀಂ ಇಂಡಿಯಾ ಕಾತರಿಸುತ್ತಿದೆ. 

ಮೊದಲ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ ಸುಲಭ ಜಯ ಸಾಧಿಸಿ ಭಾರತ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದ್ದರೆ, ಪಾಕಿಸ್ತಾನ ಆತಿಥೇಯ ಅಮೆರಿಕಕ್ಕೆ ಸೂಪರ್‌ ಓವರ್‌ನಲ್ಲಿ ಶರಣಾಗಿ, ಭಾರಿ ಆಘಾತಕ್ಕೊಳಗಾಗಿದೆ. 

ಆ ಆಘಾತದಿಂದ ಹೊರಬರುವ ಮೊದಲೇ ಬಲಿಷ್ಠ ಭಾರತದ ಸವಾಲು ಎದುರಾಗಲಿದ್ದು, ಈ ಪಂದ್ಯದಲ್ಲಿ ಸೋತರೆ ಮಾಜಿ ಚಾಂಪಿಯನ್‌ ತಂಡ ಬಹುತೇಕ ಗುಂಪು ಹಂತದಲ್ಲೇ ಹೊರಬೀಳಬಹುದು. ಅನಿರೀಕ್ಷಿತ ಬೌನ್ಸ್‌ ಹಾಗೂ ಏರುಪೇರಾಗಿರುವ ಪಿಚ್‌ನಲ್ಲಿ ಪಾಕ್‌ ವೇಗಿಗಳಿಂದ ಎದುರಾಗಬಹುದಾದ ಸವಾಲಿಗೆ ಭಾರತ ಕಠಿಣ ಅಭ್ಯಾಸ ನಡೆಸಿದ್ದು, ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್‌ನಲ್ಲಿ ಪಡೆದ ಅನುಭವವನ್ನೂ ಬಳಸಿಕೊಳ್ಳಲು ಸಿದ್ಧವಾಗಿದೆ.

 ಐರ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಮೊಣಕೈಗೆ ಚೆಂಡು ಬಡಿದು ನೋವಿಗೆ ತುತ್ತಾದರೂ, ನಾಯಕ ರೋಹಿತ್‌ ಶುಕ್ರವಾರ, ಶನಿವಾರ ಕಠಿಣ ಅಭ್ಯಾಸ ನಡೆಸಿದ್ದು ತಾವು ನಿರ್ವಹಿಸಬೇಕಿರುವ ಪಾತ್ರದ ಬಗ್ಗೆ ಸಂಪೂರ್ಣ ಅರಿತುಕೊಂಡಿದ್ದಾರೆ. ಇನ್ನು ಪಾಕ್‌ ವಿರುದ್ಧ ಪಂದ್ಯವೆಂದರೆ ವಿರಾಟ್‌ ಕೊಹ್ಲಿಯ ಉತ್ಸಾಹ ಇಮ್ಮಡಿಗೊಳ್ಳಲಿದ್ದು, 2022ರ ಟಿ20 ವಿಶ್ವಕಪ್‌ನಲ್ಲಿ ಅಸಾಧ್ಯ ಪರಿಸ್ಥಿತಿಯಿಂದ ತಂಡವನ್ನು ಮೇಲೆತ್ತಿ ಗೆಲುವು ದಕ್ಕಿಸಿಕೊಟ್ಟಿದ್ದ ಕೊಹ್ಲಿ ಮತ್ತೊಮ್ಮೆ ಪಾಕಿಸ್ತಾನವನ್ನು ಸದೆಬಡಿಯಲು ಉತ್ಸುಕರಾಗಿದ್ದಾರೆ. 

ಸೂರ್ಯಕುಮಾರ್‌, ರಿಷಭ್‌ ಪಂತ್‌, ರವೀಂದ್ರ ಜಡೇಜಾ ಮೇಲೂ ದೊಡ್ಡ ಜವಾಬ್ದಾರಿ ಇರಲಿದೆ. ಹಾರ್ದಿಕ್‌ ಪಾಂಡ್ಯ ಆಲ್ರೌಂಡ್‌ ಆಟ ನಿರ್ಣಾಯಕ ಎನಿಸಲಿದ್ದು, ಫಲಿತಾಂಶ ಭಾರತದ ಪರ ದಾಖಲಾಗಲಬೇಕಿದ್ದರೆ, 4ನೇ ವೇಗಿಯಾಗಿ ಅವರ ಕೊಡುಗೆ ಬಹಳ ಮುಖ್ಯ ಎನಿಸಲಿದೆ. ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಸಿರಾಜ್‌ ಹಾಗೂ ಅರ್ಶ್‌ದೀಪ್‌ ಸಿಂಗ್‌ ತಜ್ಞ ವೇಗಿಗಳಾಗಿ ಮುಂದುವರಿಯಲಿದ್ದು, ಈ ಪಂದ್ಯದಲ್ಲಿ ಕುಲ್ದೀಪ್‌ ಯಾದವ್‌ರನ್ನು ಆಡಿಸಬೇಕು ಎನ್ನುವ ಆಲೋಚನೆ ಇದ್ದರೂ, ಪಿಚ್ ವರ್ತನೆಯನ್ನು ಗಮನದಲ್ಲಿಟ್ಟುಕೊಂಡು, ಬ್ಯಾಟಿಂಗ್‌ನಲ್ಲೂ ಕೊಡುಗೆ ನೀಡಬಲ್ಲರು ಎನ್ನುವ ಕಾರಣಕ್ಕೆ ಅಕ್ಷರ್‌ ಪಟೇಲ್‌ರನ್ನೇ ಮುಂದುವರಿಸುವ ಸಾಧ್ಯತೆ ಹೆಚ್ಚು.

ಇನ್ನು ಪಾಕಿಸ್ತಾನ, ಅಮೆರಿಕ ವಿರುದ್ಧದ ಪಂದ್ಯದಲ್ಲಿ ಎಲ್ಲಾ ಮೂರೂ ವಿಭಾಗಗಳಲ್ಲಿ ವೈಫಲ್ಯ ಅನುಭವಿಸಿತ್ತು. ನಾಯಕ ಬಾಬರ್‌ ಆಜಂ ಸಹ ತಂಡದ ನಿರ್ವಹಣೆಯಲ್ಲಿ ಹಲವು ಎಡವಟ್ಟುಗಳನ್ನು ಮಾಡಿದ್ದರು. ಆದರೂ ಪಾಕಿಸ್ತಾನವನ್ನು ಯಾವುದೇ ಕಾರಣಕ್ಕೆ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. 2021ರ ಟಿ20 ವಿಶ್ವಕಪ್‌ನಲ್ಲಿ ಪಾಕ್‌ ನೀಡಿದ್ದ ಆಘಾತವನ್ನು ಭಾರತೀಯರು ಇನ್ನೂ ಮರೆತಿರುವುದಿಲ್ಲ. 

ಒಟ್ಟು ಮುಖಾಮುಖಿ: 12

ಭಾರತ: 09ಪಾಕಿಸ್ತಾನ: 03

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌(ನಾಯಕ), ಕೊಹ್ಲಿ, ಪಂತ್‌, ಸೂರ್ಯ, ದುಬೆ, ಹಾರ್ದಿಕ್‌, ಜಡೇಜಾ, ಅಕ್ಷರ್‌/ಕುಲ್ದೀಪ್‌, ಬೂಮ್ರಾ, ಸಿರಾಜ್‌, ಅರ್ಶ್‌ದೀಪ್‌. ಪಾಕಿಸ್ತಾನ: ರಿಜ್ವಾನ್‌, ಬಾಬರ್‌, ಉಸ್ಮಾನ್‌, ಫಖರ್‌, ಶದಾಬ್‌, ಆಜಂ ಖಾನ್‌, ಇಫ್ತಿಕಾರ್‌, ಶಾಹೀರ್‌, ಹ್ಯಾರಿಸ್‌ ರೌಫ್‌, ನಸೀಂ, ಅಮೀರ್‌.

ಪಂದ್ಯ ಆರಂಭ: ರಾತ್ರಿ 8ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌, ಡಿಡಿ ಸ್ಪೋರ್ಟ್ಸ್‌

ಪಿಚ್‌ ರಿಪೋರ್ಟ್‌: ನಾಸೌ ಕ್ರೀಡಾಂಗಣದ ಡ್ರಾಪ್‌ ಇನ್‌ ಪಿಚ್‌ನಲ್ಲಿ ಅನಿರೀಕ್ಷಿತ ಬೌನ್ಸ್‌ ಇದ್ದು, ಇಲ್ಲಿ ಸಲೀಸಾಗಿ ಬ್ಯಾಟ್‌ ಮಾಡುವುದು ಕಷ್ಟ. ಮೊದಲ ಇನ್ನಿಂಗ್ಸಲ್ಲಿ 150-160 ರನ್‌ ಗಳಿಸಿದರೂ ಆ ಮೊತ್ತವನ್ನು ರಕ್ಷಿಸಿಕೊಳ್ಳಬಹುದು. ಎರಡೂ ತಂಡಗಳಲ್ಲಿ ಗುಣಮಟ್ಟದ ವೇಗಿಗಳಿದ್ದು, ಎರಡೂ ಇನ್ನಿಂಗ್ಸ್‌ಗಳ ಪವರ್‌-ಪ್ಲೇ ಪಂದ್ಯದ ಫಲಿತಾಂಶ ನಿರ್ಧರಿಸಲಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!